ಶ್ರೀರಂಗಪಟ್ಟಣದ ಜುಮ್ಮಾ ಮಸೀದಿಯಲ್ಲಿ ಮದರಸಾ ನಡೆಸುತ್ತಿರುವ ಆರೋಪ: ಆಕ್ಷೇಪಣೆ ಸಲ್ಲಿಸಲು ಕೇಂದ್ರ, ರಾಜ್ಯಕ್ಕೆ ನೋಟಿಸ್‌

“ಸಂರಕ್ಷಿತ ಸ್ಮಾರಕದಲ್ಲಿ ಮದರಸಾ ಇದೆ ಎಂಬುದಕ್ಕೆ ದಾಖಲೆ ಎಲ್ಲಿದೆ? ನೀವು ನೀಡಿರುವ ಮನವಿಯಲ್ಲಿ ಮದರಸಾವು ಸ್ಮಾರಕದ ಸಮೀಪ ಇದೆ ಎಂದಿದೆ. ಸ್ಮಾರಕದ ಒಳಗೆ ಇದೆ ಎಂದಿಲ್ಲ” ಎಂದು ಮೌಖಿಕವಾಗಿ ಹೇಳಿದ ಸಿಜೆ.
Karnataka High Court
Karnataka High Court

ಶ್ರೀರಂಗಪಟ್ಟಣದ ಪ್ರಸಿದ್ಧ ಜುಮ್ಮಾ ಮಸೀದಿಯು ಕೇಂದ್ರೀಯ ಸಂರಕ್ಷಿತಾ ಸ್ಮಾರಕವಾಗಿದ್ದು, ಅಲ್ಲಿ ನಡೆಸಲಾಗುತ್ತಿರುವ ಮದರಸಾ ಮುಚ್ಚಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಬುಧವಾರ ಕೇಂದ್ರ ಸಂಸ್ಕೃತಿ ಇಲಾಖೆ, ಭಾರತೀಯ ಪುರಾತತ್ವ ಇಲಾಖೆಯ ಮಹಾನಿರ್ದೇಶಕರು ಸೇರಿ ಏಳು ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹೊಸ ಕಬ್ಬಾಳು ಗ್ರಾಮದ ಅಭಿಷೇಕ್‌ ಗೌಡ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದಂತೆ ಸಿಜೆ ಅವರು “ಸಂರಕ್ಷಿತ ಸ್ಮಾರಕದಲ್ಲಿ ಮದರಸಾ ಇದೆ ಎಂಬುದಕ್ಕೆ ದಾಖಲೆ ಎಲ್ಲಿದೆ? ನೀವು ನೀಡಿರುವ ಮನವಿಯಲ್ಲಿ ಮದರಸಾವು ಸ್ಮಾರಕದ ಸಮೀಪ ಇದೆ ಎಂದಿದೆ. ಸ್ಮಾರಕದ ಒಳಗೆ ಇದೆ ಎಂದಿಲ್ಲ. ದೀರ್ಘಾವಧಿಯಿಂದ ಅಸ್ತಿತ್ವದಲ್ಲಿರುವ ಸ್ಮಾರಕ ಇದಾಗಿದೆ. 1951 ಅಥವಾ 1995ರ ಗೆಜೆಟ್‌ ನೋಟಿಫಿಕೇಶನ್‌ ಅನ್ನು ಸಂಗ್ರಹಿಸಿದ್ದೀರಾ? ಎಂದರು.

ಆಗ ನ್ಯಾ. ದೀಕ್ಷಿತ್‌ ಅವರು “ಸ್ಮಾರಕದ ಒಳಗೆ ಮದರಸಾ ಅಥವಾ ಯಾವುದಾದರೂ ಚಟುವಟಿಕೆ ನಡೆಯುತ್ತಿದೆಯೇ? ವಾದ ಮಾಡಿ ಹೋಗಲಾಗದು. ಇದು ಗಂಭೀರ ವಿಚಾರವಾಗಿದ್ದು, ನೀವು ಆಕ್ಷೇಪಣೆ ಸಲ್ಲಿಸಿ. ಆನಂತರ ಇದನ್ನು ಪರಿಗಣಿಸುತ್ತೇವೆ. ಮದರಸಾ ನಡೆಯುತ್ತಿದೆಯೋ, ಇಲ್ಲವೋ ಎಂಬ ಸ್ಥಿತಿಗತಿ ವರದಿ ಮಾತ್ರವಲ್ಲ, ಅದನ್ನು ತಡೆಯಲು ಯಾವ ಕ್ರಮಕೈಗೊಂಡಿದ್ದೀರಿ ಎಂಬುದನ್ನು ತಿಳಿಸಬೇಕು. ಅನುಮತಿ ಪಡೆದು ಅದನ್ನು ನಡೆಸಲಾಗುತ್ತಿದೆಯೇ ಎಂಬುದು ನಮಗೆ ಗೊತ್ತಿಲ್ಲ” ಎಂದರು.

ಇದಕ್ಕೆ ದನಿಗೂಡಿಸಿದ ಸಿಜೆ ಅವರು “ಎರಡು ವಾರ ಸಮಯ ನೀಡುತ್ತೇವೆ. ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು. ಕೇಂದ್ರ ಸಂಸ್ಕೃತಿ ಇಲಾಖೆ, ಭಾರತೀಯ ಪುರಾತತ್ವ ಇಲಾಖೆಯ (ಎಎಸ್‌ಐ) ಮಹಾನಿರ್ದೇಶಕರು, ದಕ್ಷಿಣ ಪ್ರಾಂತ್ಯದ ಎಎಸ್‌ಐ ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ವೃತ್ತದ ಎಎಸ್‌ಐ, ಶ್ರೀರಂಗಪಟ್ಟಣದ ಸಂರಕ್ಷಣಾ ಸಹಾಯಕರು, ರಾಜ್ಯ ಕಂದಾಯ ಇಲಾಖೆ ಮತ್ತು ಮಂಡ್ಯ ಜಿಲ್ಲಾಧಿಕಾರಿಗೆ ನೋಟಿಸ್‌ ಜಾರಿ ಮಾಡಬೇಕು” ಎಂದು ಆದೇಶಿಸಿದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಪುರಾತತ್ವ ಇಲಾಖೆಯ ಜೊತೆಗಿನ ನಮ್ಮ ಅನುಭವ ನಿರಾಸಾದಾಯಕ” ಎಂದು ಬೇಸರ ವ್ಯಕ್ತಪಡಿಸಿದರು.

ಅರ್ಜಿಯಲ್ಲಿ ಏನಿದೆ: ಕೇಂದ್ರೀಯ ಸಂರಕ್ಷಿತ ಸ್ಮಾರಕವಾದ ಜುಮ್ಮಾ ಮಸೀದಿಯ ಒಳಗೆ ವಿಭಾಗ ಮಾಡಿ ಶೌಚಾಲಯ, ಸ್ನಾನಗೃಹ, ಅಡುಗೆ ಮನೆ ನಿರ್ಮಿಸಲಾಗಿದೆ. ಬಟ್ಟೆ ತೊಳೆಯಲೂ ವ್ಯವಸ್ಥೆ ಮಾಡಲಾಗಿದೆ. ಸಂಕೀರ್ಣವಾದ ಕೆತ್ತನೆಗಳಿಗೆ ಹಾನಿ ಮಾಡಲಾಗಿದೆ. ಜುಮ್ಮಾ ಮಸೀದಿಯ ಒಳಗೆ ಕಳೆದ ಎರಡು ವರ್ಷಗಳಿಂದ ಮದರಸಾ ನಡೆಸಲಾಗುತ್ತಿದೆ. ಅಲ್ಲಿ 50 ಮಕ್ಕಳಿಗೆ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಮಕ್ಕಳನ್ನು ಪ್ರಾರ್ಥನೆಗೆ ಸಮೀಪದ ಮಸೀದಿಗೆ ಕರೆದೊಯ್ಯುವುದರಿಂದ ಕಾಂಪೌಂಡ್‌ ಕುಸಿದಿದೆ. ಇದಕ್ಕೆ ಬಾಗಿಲು ಅಳವಡಿಸಲಾಗಿದೆ ಎಂದು ಆಕ್ಷೇಪಿಸಲಾಗಿದೆ.

ಪ್ರಾಚೀನ ಸ್ಮಾರಕ ಮತ್ತು ಪುರಾತತ್ವ ಸ್ಥಳ ಮತ್ತು ಅವಶೇಷಗಳ ಕಾಯಿದೆ ಸೆಕ್ಷನ್‌ 16 ಮತ್ತು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳ ಮತ್ತು ಅವಶೇಷಗಳ (ತಿದ್ದುಪಡಿ ಮತ್ತು ಸಿಂಧುತ್ವ)‌ ನಿಯಮಗಳ ನಿಯಮ 7 ಮತ್ತು 8ರ ಉಲ್ಲಂಘನೆಯಾಗಿದೆ. ಮದರಸಾ ಮುಚ್ಚುವ ಮೂಲಕ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಕೋರಲಾಗಿದೆ.

Related Stories

No stories found.
Kannada Bar & Bench
kannada.barandbench.com