
ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಷೇಧ ಕಾಯಿದೆ 1985ರ ಅಡಿ ಉಲ್ಲೇಖಿಸಲಾದ ಅನುಸೂಚಿತ ಮಾದಕ ಪದಾರ್ಥಗಳ ಪಟ್ಟಿಗೆ ಮ್ಯಾಜಿಕ್ ಮಶ್ರೂಮ್ (ಒಂದು ರೀತಿಯ ಅಣಬೆ) ಸೇರುವುದಿಲ್ಲ ಎಂದು ಈಚೆಗೆ ಕೇರಳ ಹೈಕೋರ್ಟ್ ಹೇಳಿದ್ದು, ಆರೋಪಿಯೊಬ್ಬರಿಗೆ ಜಾಮೀನು ಮಂಜೂರು ಮಾಡಿದೆ.
ಎನ್‌ಡಿಪಿಎಸ್ ಕಾಯಿದೆ ಅಡಿಯಲ್ಲಿ ಮ್ಯಾಜಿಕ್ ಮಶ್ರೂಮ್‌ಅನ್ನು ತಟಸ್ಥ ವಸ್ತು ಮತ್ತು ಸೈಕೋಟ್ರೋಪಿಕ್ (ಚಿತ್ತಭ್ರಮೆ ಸೃಷ್ಟಿಸುವ ಮಾದಕ ಪದಾರ್ಥ) ವಸ್ತುವಿನ ಮಿಶ್ರಣ ಎಂದು ವರ್ಗೀಕರಿಸಲಾಗದು ಎಂದು ನ್ಯಾಯಾಲಯ ಹೇಳಿದೆ. ಆರೋಪಿಯು ವಾಣಿಜ್ಯ ಪ್ರಮಾಣದಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದನೆ ಎಂಬುದನ್ನು ನಿರ್ಧರಿಸಲು ಈ ವಿಚಾರ ನಿರ್ಣಾಯಕವಾಗುತ್ತದೆ ಎಂದು ನ್ಯಾಯಮೂರ್ತಿ ಪಿ ವಿ ಕುನ್ಹಿಕೃಷ್ಣನ್ ಅವರ ಏಕಸದಸ್ಯ ಪೀಠ ತಿಳಿಸಿತು.
ಮ್ಯಾಜಿಕ್ ಮಶ್ರೂಮ್‌ನಲ್ಲಿ ಕಡಿಮೆ ಪ್ರಮಾಣದ ಸೈಲೋಸೈಬಿನ್ ಇರಲಿದ್ದು (ಉಲ್ಲೇಖಿತ ಅನುಸೂಚಿತ ಮಾದಕ ವಸ್ತು), ಇದನ್ನು ಪ್ರತ್ಯೇಕವಾಗಿ ಮಾದಕ ವಸ್ತು ಎಂದಾಗಲಿ ಅಥವಾ ಮಾದಕ ವಸ್ತು ಹಾಗೂ ತಟಸ್ಥ ವಸ್ತುವಿನ ಮಿಶ್ರಣ ಎಂದಾಗಲಿ ಪರಿಗಣಿಸಲಾಗದು. ಕರ್ನಾಟಕ ಹೈಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್ ತೀರ್ಪುಗಳು ಸಹ ಇದೇ ಅಭಿಪ್ರಾಯವನ್ನು ಬೆಂಬಲಿಸುತ್ತವೆ ಎಂದು ಪೀಠ ಹೇಳಿದೆ.
“ಮಶ್ರೂಮ್ ಅಥವಾ ಮ್ಯಾಜಿಕ್ ಮಶ್ರೂಮ್ ಅನ್ನು ಸಮ್ಮಿಶ್ರಣ ಎನ್ನಲಾಗದು. ಮಶ್ರೂಮ್ ಅಥವಾ ಮ್ಯಾಜಿಕ್ ಮಶ್ರೂಮ್ ಉಲ್ಲೇಖಿತ ಮಾದಕ ವಸ್ತು ಅಥವಾ ಚಿತ್ತಭ್ರಮೆ ಹುಟ್ಟಿಸುವ ಪದಾರ್ಥವಲ್ಲ” ಎಂದು ನ್ಯಾಯಮೂರ್ತಿ ಕುನ್ಹಿಕೃಷ್ಣನ್ ಸ್ಪಷ್ಟಪಡಿಸಿದರು.
ಈ ಹಿನ್ನೆಲೆಯಲ್ಲಿ ಚರಸ್, ಗಾಂಜಾ ಮತ್ತು ಸೈಲೋಸೈಬಿನ್ ಒಳಗೊಂಡಿರುವ 276 ಗ್ರಾಂನಷ್ಟು ಮ್ಯಾಜಿಕ್ ಮಶ್ರೂಮ್ ಹಾಗೂ ಸೈಲೋಸೈಬಿನ್ ಹೊಂದಿರುವ 50 ಗ್ರಾಂ ಮ್ಯಾಜಿಕ್ ಮಶ್ರೂಮ್ ಕ್ಯಾಪ್ಸೂಲ್ ಹೊಂದಿದ್ದ ವ್ಯಕ್ತಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತು. ಸೈಲೋಸೈಬಿನ್ ಎನ್ನುವುದು ಮ್ಯಾಜಿಕ್ ಮಶ್ರೂಮ್‌ನಲ್ಲಿರುವ ಚಿತ್ತಭ್ರಾಂತಿ ಹುಟ್ಟಿಸುವ ರಾಸಾಯನಿಕವಾಗಿದೆ.