ಕ್ರಿಮಿನಲ್‌ ಪ್ರಕರಣದಲ್ಲಿ ಸಾಹಿತಿ ಭಗವಾನ್‌ ಖುಲಾಸೆಗೊಳಿಸಿದ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

ಬೆಂಗಳೂರಿನ 37ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಎಂ ಸೈಯದ್‌ ಅರಾಫತ್‌ ಇಬ್ರಾಹಿಂ ಅವರು ಭಗವಾನ್‌ ಅವರನ್ನು ಖುಲಾಸೆಗೊಳಿಸಿದ್ದಾರೆ.
K S Bhagavan
K S BhagavanThe new Indian Express
Published on

‘ರಾಮ ಮಂದಿರ ಏಕೆ ಬೇಡʼ ಎಂಬ ತಮ್ಮ ಪುಸ್ತಕದಲ್ಲಿ ಲೇಖಕ ಕೆ ಎಸ್‌ ಭಗವಾನ್‌ ‘ಶ್ರೀರಾಮನನ್ನು ಹೀಯಾಳಿಸಿದ್ದಾರೆ, ಅವಹೇಳನಕಾರಿ ಪದಗಳ ಬಳಕೆ ಮಾಡಿದ್ದಾರೆ. ಆ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ’ಎಂದು ಆರೋಪಿಸಿ ವಕೀಲೆ ಮೀರಾ ರಾಘವೇಂದ್ರ ಅವರು ಸಾಹಿತಿ ಕೆ ಎಸ್ ಭಗವಾನ್‌ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣವನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸೋಮವಾರ ವಜಾಗೊಳಿಸಿದೆ.

ಮೀರಾ ರಾಘವೇಂದ್ರ ಅಲಿಯಾಸ್‌ ಆರ್‌ ಮೀರಾ ರಾಘವೇಂದ್ರ ಅವರು ಐಪಿಸಿ ಸೆಕ್ಷನ್‌ 298 ಮತ್ತು 505ರ ಅಡಿ ದಾಖಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ 37ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಎಂ ಸೈಯದ್‌ ಅರಾಫತ್‌ ಇಬ್ರಾಹಿಂ ಅವರು ಭಗವಾನ್‌ ಅವರನ್ನು ಖುಲಾಸೆಗೊಳಿಸಿದ್ದಾರೆ.

ಇಂತಹುದೇ ಮತ್ತೊಂದು ಪ್ರಕರಣದಲ್ಲಿ ನ್ಯಾಯಾಲಯ ಇತ್ತಿಚೆಗೆಷ್ಟೇ ಕೆ ಎಸ್ ಭಗವಾನ್ ಅವರನ್ನು ಖುಲಾಸೆಗೊಳಿಸಿತ್ತು. ಎರಡೂ ಪ್ರಕರಣಗಳಲ್ಲಿ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ಅವರು ಭಗವಾನ್‌ ಪರ ವಾದ ಮಂಡಿಸಿದ್ದರು.

ಕೋರ್ಟ್‌ ಆವರಣದಲ್ಲಿ ಸಾಹಿತಿ ಕೆ ಎಸ್‌ ಭಗವಾನ್‌ ಅವರ ಮುಖಕ್ಕೆ ಮಸಿ ಬಳಿಯುವ ಮೂಲಕ ವಕೀಲೆ ಮೀರಾ ರಾಘವೇಂದ್ರ ಅವರು ವೃತ್ತಿ ದುರ್ನಡತೆ ತೋರಿದ್ದು, ವಕೀಲರ ಶಿಷ್ಟಾಚಾರಗಳಿಗೆ ಅವಮಾನ ಉಂಟು ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರು ಮೂರು ತಿಂಗಳ ಕಾಲ ದೇಶದ ಯಾವುದೇ ಕೋರ್ಟ್‌ಗಳಲ್ಲಿ ವಕೀಲಿಕೆ ನಡೆಸಬಾರದು ಎಂದು ರಾಜ್ಯ ವಕೀಲರ ಪರಿಷತ್‌ ಇತ್ತೀಚೆಗಷ್ಟೇ ಆದೇಶಿಸಿದ್ದನ್ನು ಇಲ್ಲಿ ನೆನೆಯಬಹುದು.

Also Read
ಸಾಹಿತಿ ಭಗವಾನ್‌ ಮುಖಕ್ಕೆ ಮಸಿ: ಮೀರಾ ರಾಘವೇಂದ್ರಗೆ ವಕೀಲಿಕೆ ಮಾಡದಂತೆ ಮೂರು ತಿಂಗಳ ನಿರ್ಬಂಧ; ಸನ್ನದು ಅಮಾನತು

ವಿಚಾರಣೆಗೆ ಹಾಜರಾಗಿದ್ದ ಸಮಯದಲ್ಲಿ ಕೋರ್ಟ್‌ ಆವರಣದಲ್ಲಿ ತಮ್ಮ ಮುಖಕ್ಕೆ ಮೀರಾ ಮಸಿ ಬಳಿದಿದ್ದಾರೆ ಎಂಬ ಆರೋಪದಡಿ ಕೆ ಎಸ್‌ ಭಗವಾನ್‌ ದಾಖಲಿಸಿದ್ದ ದೂರನ್ನು ರಾಜ್ಯ ವಕೀಲರ ಪರಿಷತ್ತಿನ ಶಿಸ್ತುಪಾಲನಾ ಸಮಿತಿಯ ಅಧ್ಯಕ್ಷ ಎಸ್‌ ಮಹೇಶ್‌ ಮತ್ತು ಪರಿಷತ್‌ ಸದಸ್ಯ ಎಸ್‌ ಹರೀಶ್‌ ನೇತೃತ್ವದ ಸಮಿತಿ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿತ್ತು.

ಮೀರಾ ವೃತ್ತಿಪರ ವಕೀಲೆಯಾಗಿ ದೂರಿನ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಪರಿಷತ್‌ ನೀಡಿದ ನೋಟಿಸ್‌ ಅನ್ನೂ ಸ್ವೀಕರಿಸದೆ ವಕೀಲರ ಪರಿಷತ್‌ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಸಮಿತಿಯು ಮೀರಾ ವಿರುದ್ಧ ಆಕ್ಷೇಪಿಸಿತ್ತು.

Kannada Bar & Bench
kannada.barandbench.com