
ಕರ್ನಾಟಕ ಲೋಕಾಯುಕ್ತಕ್ಕೆ ಸಲ್ಲಿಸಲಾದ ಆಸ್ತಿ ವಿವರಗಳಲ್ಲಿ ಸತ್ಯಾಂಶ ಮುಚ್ಚಿಟ್ಟ ಆರೋಪ ಹೊತ್ತಿದ್ದ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎ ವಿ ಉಮಾಪತಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ₹1 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಕರ್ನಾಟಕ ಲೋಕಾಯಕ್ತ ರಿಜಿಸ್ಟ್ರಾರ್ ದಾಖಲಿಸಿದ್ದ ಕ್ರಿಮಿನಲ್ ದೂರಿನ ವಿಚಾರಣೆ ನಡೆಸಿದ ವಿಶೇಷ ಮ್ಯಾಜಿಸ್ಟ್ರೇಟ್ ಕೆ ಎನ್ ಶಿವಕುಮಾರ್ ಅವರು ಆದೇಶ ಮಾಡಿದ್ದಾರೆ.
“ಭಾರತೀಯ ದಂಡ ಸಂಹಿತೆ ಸೆಕ್ಷನ್ 177ರ ಅಡಿಯಲ್ಲಿ ಆರೋಪಿಯು ತಪ್ಪು ಮಾಹಿತಿ ನೀಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 255(2) ಅಡಿಯಲ್ಲಿ ಮೂರು ತಿಂಗಳ ಜೈಲು ಶಿಕ್ಷೆ ಮತ್ತು ₹1 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಒಂದು ತಿಂಗಳ ಜೈಲು ಶಿಕ್ಷೆ ವಿಸ್ತರಿಸಬೇಕು” ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದಿಂದ 1989 ಮತ್ತು 2004ರಲ್ಲಿ ಸ್ಪರ್ಧಿಸಿ ಗೆದ್ದು ಎರಡು ಅವಧಿಗೆ ಶಾಸಕರಾಗಿದ್ದ ಕಾಂಗ್ರೆಸ್‌ನ ಎ ವಿ ಉಮಾಪತಿ ಅವರು, 2004–2005 ಹಾಗೂ 2005–2006ರ ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಖಾಸಗಿ ದೂರು ದಾಖಲಿಸಿಕೊಂಡಿದ್ದರು. ಇದರ ಅನ್ವಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಪರಾಧವನ್ನು ಪರಿಗಣಿಸಿ ನ್ಯಾಯಿಕ ವಿಚಾರಣೆ ನಡೆಸಿತ್ತು.