ಅನಗತ್ಯವಾಗಿ ಜನರನ್ನು ಜೈಲಿಗೆ ಕಳಿಸುವ ನ್ಯಾಯಾಧೀಶರಿಗೆ ಕೌಶಲ್ಯ ವೃದ್ಧಿ ತರಬೇತಿ ನೀಡಬೇಕಾಗುತ್ತದೆ: ಸುಪ್ರೀಂ ಕೋರ್ಟ್

ಉತ್ತರ ಪ್ರದೇಶದ ನ್ಯಾಯಾಲಯಗಳು ಹೆಚ್ಚಾಗಿ ಇಂತಹ ಆದೇಶ ನೀಡುತ್ತವೆ ಎಂಬ ಅಂಶವನ್ನು ಗಮನಿಸಿದ ನ್ಯಾಯಾಲಯ, ಅಲಾಹಾಬಾದ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಿಗೆ ಈ ಬಗ್ಗೆ ತಿಳಿಸುವಂತೆ ಸೂಚಿಸಿತು.
Justice Sanjay Kishan Kaul, Justice Ahsanuddin Amanullah, Justice Aravind Kumar
Justice Sanjay Kishan Kaul, Justice Ahsanuddin Amanullah, Justice Aravind Kumar
Published on

ಜನರನ್ನು ನ್ಯಾಯಾಧೀಶರು ಅನಗತ್ಯವಾಗಿ ಜೈಲಿಗೆ ಕಳಿಸಬಾರದು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಪುನರುಚ್ಚರಿಸಿದೆ [ಸತೇಂದರ್ ಕುಮಾರ್ ಆಂಟಿಲ್ ಮತ್ತು ಸಿಬಿಐ ಇನ್ನಿತರರ ನಡುವಣ ಪ್ರಕರಣ].

ಅನಗತ್ಯವಾಗಿ ಜನರನ್ನು ಜೈಲಿಗೆ ಕಳುಹಿಸುವ ನ್ಯಾಯಾಧೀಶರ ನ್ಯಾಯದಾನದ ಕಾರ್ಯವನ್ನು ಹಿಂಪಡೆದು ಅವರ ಕೌಶಲ್ಯವನ್ನು ಮೇಲ್ದರ್ಜೆಗೇರಿಸುವ ತರಬೇತಿಗಾಗಿ ನ್ಯಾಯಾಂಗ ಅಕಾಡೆಮಿಗಳಿಗೆ ಕಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ತಿಳಿಸಿತು.

“ಜನರನ್ನು ಅಗತ್ಯವಿಲ್ಲದಿದ್ದರೂ ಕಸ್ಟಡಿಗೆ ಕಳುಹಿಸಿ ಆ ಮೂಲಕ ಸಂತ್ರಸ್ತ ಪಕ್ಷಕಾರರು ಮೇಲ್ಮನವಿ ಸಲ್ಲಿಸುವಂತೆ ಮಾಡಿ ಮತ್ತಷ್ಟು ವ್ಯಾಜ್ಯಗಳ ಸೃಷ್ಟಿಗೆ ಕಾರಣವಾಗುತ್ತದೆ. ಇದು ಒಪ್ಪುವಂತಹುದಲ್ಲ. ನಮ್ಮ ದೃಷ್ಟಿಯಲ್ಲಿ ತಮ್ಮ ಮೇಲ್ವಿಚಾರಣೆಯಲ್ಲಿರುವ ಅಧೀನ ನ್ಯಾಯಾಲಯಗಳು ಈ ನೆಲದ ಕಾನೂನನ್ನು ಪಾಲಿಸುತ್ತಿದೆಯೇ ಎಂಬುದನ್ನು ನೋಡಿಕೊಳ್ಳುವುದು ಹೈಕೋರ್ಟ್‌ಗಳ ಕರ್ತವ್ಯವಾಗಿದೆ. ಕೆಲ ನ್ಯಾಯಾಧೀಶರು ಅಂತಹ ಆದೇಶ ನೀಡಿದರೆ ಅವರ ನ್ಯಾಯದಾನದ ಕಾರ್ಯವನ್ನು ಹಿಂಪಡೆದು ಅವರ ಕೌಶಲ್ಯ ವೃದ್ಧಿಗಾಗಿ ಅವರನ್ನು  ಸ್ವಲ್ಪ ಸಮಯದವರೆಗೆ ನ್ಯಾಯಾಂಗ ಅಕಾಡೆಮಿಗಳಿಗೂ ಕಳಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿತು.  

ಉತ್ತರ ಪ್ರದೇಶದ ನ್ಯಾಯಾಲಯಗಳು ಹೆಚ್ಚಾಗಿ ಇಂತಹ ಆದೇಶ ನೀಡುತ್ತವೆ ಎಂಬ ಅಂಶವನ್ನು ಗಮನಿಸಿದ ನ್ಯಾಯಾಲಯ, ಅಲಾಹಾಬಾದ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಿಗೆ ಈ ಬಗ್ಗೆ ತಿಳಿಸುವಂತೆ ಸೂಚಿಸಿತು.

Also Read
81 ವರ್ಷದ ಅಪರಾಧಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ 2 ವರ್ಷ ಜೈಲು ಶಿಕ್ಷೆಯನ್ನು ಮೂರು ದಿನಕ್ಕೆ ಇಳಿಸಿದ ಹೈಕೋರ್ಟ್

ಇಂತಹ ಹೆಚ್ಚಿನ ಆದೇಶಗಳು ಉತ್ತರಪ್ರದೇಶದಿಂದ ಅದರಲ್ಲಿಯೂ ಹಾಥ್‌ರಸ್‌, ಗಾಜಿಯಾಬಾದ್‌ ಹಾಗೂ ಲಖನೌ ನ್ಯಾಯಾಲಯಗಳು ಹೊರಡಿಸಿದ ಆದೇಶಗಳು ಕಾನೂನು ಅಜ್ಞಾನದಿಂದ ಕೂಡಿವೆ ಎಂದಿರುವ ಪೀಠ ಈ ವಿಚಾರವನ್ನು ಅಲಾಹಾಬಾದ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಸೂಚಿಸಿದೆ.

ಬಂಧನ ಮತ್ತು ವಿಚಾರಣೆಗಳಲ್ಲಿ ಸಿಆರ್‌ಪಿಸಿ ನಿಯಮಾವಳಿ ಜಾರಿಗೊಳಿಸುವ ಅಗತ್ಯವನ್ನು ಒತ್ತಿ ಹೇಳಿ ಜುಲೈ 2022ರಂದು ನ್ಯಾಯಾಲಯ ನೀಡಿದ್ದ ತೀರ್ಪಿನ ಪಾಲನೆಗೆ ಸಂಬಂಧಿಸಿದಂತೆ ಸತೇಂದರ್ ಕುಮಾರ್ ಆಂಟಿಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಇಂತಹ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ವಿಚಾರಣಾಧೀನ ಕೈದಿಗಳ ಅನುಪಾತವು ಅಸಹಜವೆನಿಸುವಷ್ಟು ಹೆಚ್ಚಿರುವ ರಾಜ್ಯಗಳಲ್ಲಿ ಈ ಸಮಸ್ಯೆಯನ್ನು ನಿಭಾಯಿಸಲು ಕಾನೂನು ಸೇವಾ ಅಧಿಕಾರಿಗಳ ಸಮನ್ವಯದಲ್ಲಿ ವಿಶೇಷ ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ. ತಮಿಳುನಾಡು, ಅಸ್ಸಾಂ, ಉತ್ತರ ಪ್ರದೇಶ ಹಾಗೂ ಒಡಿಶಾ ರಾಜ್ಯಗಳ ಪರ ವಾದ ಮಂಡಿಸುವ ವಕೀಲರಿಗೆ ಈ ನಿಟ್ಟಿನಲ್ಲಿ ಸೂಚನೆ ನೀಡಿದೆ.

ಪ್ರಕರಣದ ಸ್ಥಿತಿಗತಿ ವರದಿ ಮಾಡಲು ವಿಳಂಬ ಮಾಡಿದ್ದ ನಾಲ್ಕು ಹೈಕೋರ್ಟ್‌ಗಳು, ಸಿಬಿಐ ಹಾಗೂ ರಾಜ್ಯ ಸರ್ಕಾರಗಳ ಬಗ್ಗೆ ಸುಪ್ರೀಂ ಕೋರ್ಟ್‌ ಕಳೆದ ಫೆಬ್ರುವರಿಯಲ್ಲಿ ಬೇಸರ ವ್ಯಕ್ತಪಡಿಸಿತ್ತು. ಆಸಕ್ತಿಕರ ವಿಚಾರವೆಂದರೆ ಸಿದ್ಧಾರ್ಥ್‌ ಪ್ರಕರಣ ಮತ್ತು ಅಂಟಿಲ್‌ ಅವರ ಪ್ರಕರಣಗಳಲ್ಲಿ ನೀಡಲಾದ ತೀರ್ಪುಗಳನ್ನು ನ್ಯಾಯಿಕ ಪಠ್ಯಕ್ರಮದಲ್ಲಿ ಅಳವಡಿಸಲು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು.

Kannada Bar & Bench
kannada.barandbench.com