ಕುಂಭಮೇಳ ಕಾಲ್ತುಳಿತ ದುರಂತ: ಉತ್ತರ ಪ್ರದೇಶ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೋರಿ ಸುಪ್ರೀಂಗೆ ಪಿಐಎಲ್

ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ನ ಸಂಗಮ ಪ್ರದೇಶದಲ್ಲಿ ಜನವರಿ 29ರ ಬೆಳಗ್ಗೆ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿ 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
Supreme Court of India
Supreme Court of India
Published on

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದ ವೇಳೆ ಕಾಲ್ತುಳಿತ ದುರಂತ ಸಂಭವಿಸಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಾಗೂ ಮಾರ್ಗಸೂಚಿ ರೂಪಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ನ ಸಂಗಮ ಪ್ರದೇಶದಲ್ಲಿ ಜನವರಿ 29ರ ಬೆಳಿಗ್ಗೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 30 ಮಂದಿ ಸಾವನ್ನಪ್ಪಿ 60 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ವಕೀಲ ವಿಶಾಲ್ ತಿವಾರಿ ಅವರು ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರಮುಖಾಂಶಗಳು:

  • ಪ್ರಯಾಗ್‌ರಾಜ್‌ನಲ್ಲಿರುವ ತಮ್ಮ ರಾಜ್ಯಗಳ ಸೇವಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮ ಮತ್ತು ಮಾರ್ಗಸೂಚಿಗಳ ಬಗ್ಗೆ ಮೂಲಭೂತ ಮಾಹಿತಿ ಒದಗಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು.

  • ಬೇರೆ ರಾಜ್ಯಗಳ ಜನ ಸಮಸ್ಯೆ ಎದುರಿಸದಂತೆ ಮತ್ತು ಸುಲಭವಾಗಿ ಸಹಾಯ ಪಡೆಯಲು ಅನುವಾಗುವ ನಿಟ್ಟಿನಲ್ಲಿ ಆಯಾ ರಾಜ್ಯಗಳ ಭಾಷೆಯಲ್ಲಿ ಪ್ರಕಟಣೆ, ನಿರ್ದೇಶನವುಳ್ಳ ಫಲಕ , ಇತ್ಯಾದಿಗಳನ್ನು ಅಳವಡಿಸಬೇಕು.

  • ಉತ್ತರ ಪ್ರದೇಶ ಸರ್ಕಾರದ ಸಮನ್ವಯದೊಂದಿಗೆ ಎಲ್ಲಾ ರಾಜ್ಯ ಸರ್ಕಾರಗಳು ವೈದ್ಯರು ಮತ್ತು ದಾದಿಯರನ್ನು ಒಳಗೊಂಡಿರುವ ತಮ್ಮದೇ ಆದ ಸಣ್ಣ ವೈದ್ಯಕೀಯ ತಂಡ ರಚಿಸಬೇಕು. ಇದರಿಂದ ವೈದ್ಯಕೀಯ ತುರ್ತು ಸಮಯದಲ್ಲಿ ಸಿಬ್ಬಂದಿ ಕೊರತೆ ಉಂಟಾಗುವುದಿಲ್ಲ.

  • ಕಾಲ್ತುಳಿತಕ್ಕೆ ಕಾರಣವಾದ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕ್ರಮಕೈಗೊಳ್ಳಬೇಕು.

  • ಕಾಲ್ತುಳಿತದ ಘಟನೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಬೇಕು.

  • ಕಾಲ್ತುಳಿತಕ್ಕೆ ಕಾರಣವಾದ ವ್ಯಕ್ತಿಗಳು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವಂತೆ ನಿರ್ದೇಶಿಸಬೇಕು.

Kannada Bar & Bench
kannada.barandbench.com