ಮಹಾಭಾರತವು ಮಧ್ಯಸ್ಥಿಕೆಯ ಆರಂಭಿಕ ಯತ್ನವಾಗಿತ್ತು, ಅದು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಮಿಳಿತವಾಗಿದೆ: ಸಿಜೆಐ ರಮಣ

ವಿವಾದಗಳನ್ನು ಮಾತುಕತೆ ಮತ್ತು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ದೀರ್ಘ ಮತ್ತು ಸಮೃದ್ಧ ಪರಂಪರೆ ಏಷ್ಯಾದ ಅನೇಕ ದೇಶಗಳಲ್ಲಿದೆ ಎಂದು ನ್ಯಾ. ರಮಣ ತಿಳಿಸಿದರು.
ಮಹಾಭಾರತವು ಮಧ್ಯಸ್ಥಿಕೆಯ ಆರಂಭಿಕ ಯತ್ನವಾಗಿತ್ತು, ಅದು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಮಿಳಿತವಾಗಿದೆ: ಸಿಜೆಐ ರಮಣ

ಸಂಧಾನ ಎಂಬುದು ಭಾರತೀಯ ನೀತಿಯಲ್ಲಿ ಆಳವಾಗಿ ಮಿಳಿತವಾಗಿದ್ದು ಬ್ರಿಟಿಷರ ಆಗಮನಕ್ಕೂ ಮುನ್ನವೇ ಚಾಲ್ತಿಯಲ್ಲಿತ್ತು ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ತಿಳಿಸಿದರು. ಮಹಾಭಾರತ ರಾಜಿ ಸಂಧಾನದ ಆರಂಭಿಕ ಯತ್ನ ಹೇಗಾಗಿತ್ತು ಎಂಬುದನ್ನು ಅವರು ಇದೇ ವೇಳೆ ತಿಳಿಸಿದರು.

ಶನಿವಾರ ವರ್ಚುವಲ್‌ ವಿಧಾನದಲ್ಲಿ ಆಯೋಜಿಸಲಾಗಿದ್ದ ಭಾರತ - ಸಿಂಗಪುರ ಮಧ್ಯಸ್ಥಿಕೆ ಶೃಂಗಸಭೆಯಲ್ಲಿ “ಮಧ್ಯಸ್ಥಿಕೆ ಮುಖ್ಯವಾಹಿನಿ: ಭಾರತ ಮತ್ತು ಸಿಂಗಾಪುರದ ಪ್ರತಿಫಲನಗಳು” ಎಂಬ ವಿಷಯವಾಗಿ ಮಾತನಾಡಿದ ಅವರು ಏಷ್ಯಾದ ಅನೇಕ ದೇಶಗಳು ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ದೀರ್ಘ ಮತ್ತು ಸಮೃದ್ಧ ಇತಿಹಾಸ ಹೊಂದಿವೆ ಎಂದರು.

“…ಪಾಂಡವರು ಮತ್ತು ಕೌರವರ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ರಾಜಿ ಸಂಧಾನ ಏರ್ಪಡಿಸಲು ಭಗವಾನ್‌ ಕೃಷ್ಣ ಯತ್ನಿಸಿದ. ಮಧ್ಯಸ್ಥಿಕೆ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಮಿಳಿತವಾಗಿದೆ. ಬ್ರಿಟಿಷರು ಬರುವ ಮುನ್ನವೇ ವ್ಯಾಜ್ಯಗಳನ್ನು ಮುಖ್ಯಸ್ಥರು ಅಥವಾ ಹಿರಿಯರು ಬಗೆಹರಿಸುತ್ತಿದ್ದರು” ಎಂದು ಸಿಜೆಐ ವಿವರಿಸಿದರು.

ಮಹಾಭಾರತದಲ್ಲಿನ ಮಧ್ಯಸ್ಥಿಕೆಯ ವೈಫಲ್ಯ ಹಾನಿಕಾರಕ ಪರಿಣಾಮಗಳಿಗೆ ಎಡೆ ಮಾಡಿಕೊಟ್ಟಿತು ಎಂಬುದು ಸ್ಮರಣಯೋಗ್ಯ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಭಾರತೀಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತಂತೆ ಬಿಂಬಿಸಲಾಗುತ್ತಿರುವ ಅಂಕಿ- ಅಂಶಗಳ ಬಗೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು ಅಂತಹ ಅಂಕಿ- ಅಂಶಗಳನ್ನು ಮೌಲ್ಯಮಾಪನ ಮಾಡುವ ವ್ಯವಸ್ಥೆ ನಿಖರವಾಗಿಲ್ಲ ಎಂದು ಹೇಳಿದರು.

“ನ್ಯಾಯಾಂಗದ ವಿಳಂಬದಿಂದಾಗಿ ಮಧ್ಯಸ್ಥಿಕೆ ಅಗತ್ಯವಾಗುತ್ತದೆ ಎಂದು ಹೇಳಲಾಗುತ್ತಿದ್ದು ನ್ಯಾಯಾಲಯಗಳಿಗೆ ಅವುಗಳನ್ನು ನಿಭಾಯಿಸಲು ಸಾಧ್ಯವಿಲ್ಲದಿರುವುದರಿಂದ 4.5 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ ಎಂದು ಹೇಳಲಾಗುತ್ತಿದೆ. ಇದು ನಂಬಲರ್ಹವಲ್ಲದ ವಿಶ್ಲೇಷಣೆ. ನಿನ್ನೆ ದಾಖಲಾದ ಪ್ರಕರಣಗಳು ಕೂಡ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದು ಆದ್ದರಿಂದ ವ್ಯವಸ್ಥೆ ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಸೂಚಿಸುವ ಉಪಯಕ್ತ ಮಾನದಂಡ ಇದಲ್ಲ. ನ್ಯಾಯ ವಿಳಂಬದ ಸಮಸ್ಯೆ ಸಂಕೀರ್ಣವಾದ ತೊಂದರೆಯಾಗಿದ್ದು ಇದು ಭಾರತದಲ್ಲಿ ಮಾತ್ರವೇ ಇಲ್ಲ” ಎಂದು ಅವರು ಅಭಿಪ್ರಾಯಪಟ್ಟರು. ಮಧ್ಯಸ್ಥಿಕೆದಾರರ ಪಾತ್ರ, ನಿಷ್ಕ್ರಿಯ ಪ್ರಾಯೋಜಕತ್ವದಿಂದ ಸಲಹಾ ಸಹಭಾಗಿತ್ವದ ಒಳಗೊಳ್ಳುವಿಕೆಗೆ ವಿಕಸನಗೊಂಡಿರುವುದರಿಂದ ಮಧ್ಯಸ್ಥಿಕೆದಾರರು ತರಬೇತಿಗೆ ತಮ್ಮನ್ನು ಒಡ್ಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಪಕ್ಷಕಾರರು ವಿಭಿನ್ನ ಆರ್ಥಿಕ ಪರಿಸ್ಥಿತಿಯಿಂದ ಬಂದಿದ್ದರೆ ಮಧ್ಯಸ್ಥಿಕೆದಾರರು ವಹಿಸಬೇಕಾದ ಪಾತ್ರದ ಬಗ್ಗೆಯೂ ಸಿಜೆಐ ಮಾತನಾಡಿದರು.

"ನೀವು ಇದನ್ನು ಮಧ್ಯಸ್ಥಿಕೆದಾರರ ಆಧುನಿಕ ಸಂದಿಗ್ಧತೆ ಎಂದು ಕರೆಯಬಹುದು. ಆದರೆ ಒಬ್ಬ ಪಕ್ಷಕಾರ ಇತರ ಪಕ್ಷಕಾರರಿಗಿಂತಲೂ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಉತ್ತಮವಾಗಿ ನೆಲೆಗೊಂಡಿದ್ದಾಗ ತಮಗೆ ಅನ್ಯಾಯವಾಗಿದೆ ಎಂದು ಇತರೆ ಪಕ್ಷಗಳಿಗೆ ಅನ್ನಿಸುತ್ತದೆ. ಮಧ್ಯಸ್ಥಿಕೆದಾರ ಆಗ ಮೌನವಾಗಿರಬೇಕೇ? ಇವು ಪರಿಗಣಿಸಬೇಕಾದ ಕೆಲವು ಪ್ರಶ್ನೆಗಳು. ಭಾರತ ವೈವಿಧ್ಯಮಯ ಸಾಮಾಜಿಕ ರಚನೆಯಿಂದ ಕೂಡಿದ್ದು ಅಲ್ಲಿ ಮಧ್ಯಸ್ಥಿಕೆಯ ಪ್ರಕ್ರಿಯೆ ವೇಳೆ ಕೂಡ ಸಮಾನತೆಯನ್ನು ಎತ್ತಿಹಿಡಿಯಬೇಕು. ನನ್ನ ಉದ್ದೇಶ ಮಧ್ಯಸ್ಥಿಕೆಯನ್ನು ನಿರುತ್ಸಾಹಗೊಳಿಸುವುದಲ್ಲ ಬದಲಿಗೆ ಅದನ್ನು ಹೆಚ್ಚು ದೃಢ ಮತ್ತು ಅರ್ಥಪೂರ್ಣವಾಗಿಸುವುದಾಗಿದೆ. ಆಳವಾದ ಮತ್ತು ನಿರಂತರ ತರಬೇತಿ ಮಧ್ಯವರ್ತಿಗಳಿಗೆ ಅಗತ್ಯವಿದೆ” ಎಂದು ಅವರು ತಿಳಿಸಿದರು.

Also Read
ಗಾಂಧೀಜಿ, ತಿಲಕ್ ವಿರುದ್ಧ ಬಳಕೆಯಾಗಿದ್ದ ದೇಶದ್ರೋಹ ಕಾನೂನು ಈಗ ದುರ್ಬಳಕೆಯಾಗುತ್ತಿದೆ: ಸುಪ್ರೀಂಕೋರ್ಟ್‌

ಸಮಗ್ರ ಕಾನೂನು ಜಾರಿಯಾಗಲಿ...

ವಿವಾದಗಳನ್ನು ಬಗೆಹರಿಸುವ ಮೊದಲ ಕಡ್ಡಾಯ ಹೆಜ್ಜೆಯಾಗಿ ಮಧ್ಯಸ್ಥಿಕೆಯನ್ನು ಸೂಚಿಸುವುದು ದೇಶದ ನ್ಯಾಯಲಯಗಳ ಮುಂದೆ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಹುಮುಖ್ಯವಾಗಿದೆ. ಈ ನಿರ್ವಾತವನ್ನು ತುಂಬಲು ಸಮಗ್ರವಾದ ಕಾನೂನೊಂದು ಜಾರಿಗೆ ಬರಬೇಕು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಸಿಂಗಪುರದ ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್ ಅವರು ಈ ಸಂದರ್ಭದಲ್ಲಿ ಮುಖ್ಯ ಭಾಷಣ ಮಾಡಿದರು.

Related Stories

No stories found.