ಶಾರೂಖ್ ಅಭಿನಯದ ʼಪಠಾಣ್ʼ ಯೂಟ್ಯೂಬ್ ಟ್ರೈಲರ್, ಬೇಷರಮ್ ರಂಗ್ ಹಾಡು ಪ್ರಸಾರ ತಡೆಗೆ ಮಹಾರಾಷ್ಟ್ರ ನ್ಯಾಯಾಲಯ ನಕಾರ

ತಡೆಯಾಜ್ಞೆ ನೀಡಲು ಮೇಲುನೋಟಕ್ಕೆ ಅಗತ್ಯವಾದ ಯಾವುದೇ ವಾದ ಮಂಡನೆಯಾಗಿಲ್ಲ ಎಂದು ಸಿವಿಲ್ ನ್ಯಾಯಾಧೀಶರಾದ ಜೆ ಡಿ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
Pathaan
Pathaan
Published on

ಯು/ಎ ಸೆನ್ಸಾರ್ ಪ್ರಮಾಣಪತ್ರ ಇಲ್ಲದೆ ʼಪಠಾಣ್‌ʼ ಚಿತ್ರ, ಅದರ ಹಾಡು ʼಬೇಷರಂ ರಂಗ್‌ʼನ ಟೀಸರ್‌, ಟ್ರೇಲರ್‌ ಹಾಗೂ ಜಾಹೀರಾತು ಪ್ರಸಾರ ನಿರ್ಬಂಧಿಸಬೇಕೆಂದು ಕೋರಿದ್ದ ಅರ್ಜಿಯನ್ನು ಮಹಾರಾಷ್ಟ್ರದ ಸಿವಿಲ್‌ ನ್ಯಾಯಾಲಯವೊಂದು ಇತ್ತೀಚೆಗೆ ತಿರಸ್ಕರಿಸಿದೆ [ಸುರೇಶ್‌ ಪಾಟೀಲ್‌ ಮತ್ತು ಯಶ್‌ರಾಜ್‌ ಫಿಲಮ್ಸ್‌ ಲಿಮಿಟೆಡ್‌ ನಡುವಣ ಪ್ರಕರಣ].

ತಡೆಯಾಜ್ಞೆ ನೀಡಲು ಮೇಲ್ನೋಟಕ್ಕೆ ಅಗತ್ಯವಾದ ಯಾವುದೇ ವಾದ ಮಂಡನೆಯಾಗಿಲ್ಲ ಎಂದು ಶ್ರೀರಾಂಪುರದ ಸಿವಿಲ್ ನ್ಯಾಯಾಧೀಶರಾದ ಜೆ ಡಿ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ತಾತ್ಕಾಲಿಕ ಪರಿಹಾರ ನೀಡದೆ ಹೋದರೆ ಫಿರ್ಯಾದಿದಾರರಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

ಯು/ಎ ಪ್ರಮಾಣಪತ್ರವಿಲ್ಲದ ಚಿತ್ರದ ಟೀಸರ್‌ ಟ್ರೇಲರ್‌, ಹಾಡು ಹಾಗೂ ಜಾಹೀರಾತುಗಳನ್ನು ಪ್ರಸಾರ ಮಾಡುವಾಗ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರವನ್ನು ಯೂಟ್ಯೂಬ್‌ನಲ್ಲಿ ಪ್ರದರ್ಶಿಸಿಲ್ಲ ಎಂದು ಅರ್ಜಿದಾರರು ದೂರಿದ್ದರು. ಯು/ಎ ಪ್ರಮಾಣಪತ್ರ ಇಲ್ಲದೆ ಈ ರೀತಿ ಪ್ರದರ್ಶನ ಮಾಡಿದ್ದರಿಂದ ಖುದ್ದು ತನಗೆ ಹಾಗೂ ಸಮಾಜಕ್ಕೆ ನಷ್ಟ ಉಂಟಾಗಿದೆ. ಸಿನಿಮಾಟೋಗ್ರಫಿ ಕಾಯ್ದೆಯ 38ನೇ ನಿಯಮದ ಪ್ರಕಾರ ಅಂತಹ ಪ್ರಮಾಣಪತ್ರವನ್ನು ತೋರಿಸುವುದು ಕಡ್ಡಾಯ ಎಂದು ಅರ್ಜಿದಾರರು ವಾದಿಸಿದ್ದರು.

ಹನ್ನೆರಡುವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪೋಷಕರ ಮಾರ್ಗದರ್ಶನದೊಂದಿಗೆ ಸಿನಿಮಾ ನೋಡುವುದಕ್ಕೆ ಯು/ಎ ಪ್ರಮಾಣಪತ್ರ ಅನುಮತಿಸುತ್ತದೆ.

ಆದರೆ ಚಿತ್ರ ನಿರ್ಮಾಣ ಸಂಸ್ಥೆಯು "ಯೂಟ್ಯೂಬ್ ಅಥವಾ ಯಾವುದೇಒಟಿಟಿ ವೇದಿಕೆ, ಅಂತರ್ಜಾಲದಲ್ಲಿ ಚಿತ್ರದ ಜಾಹೀರಾತು ಪ್ರಕಟಿಸುವಾಗ ಅಂತಹ ಪ್ರಮಾಣಪತ್ರ ತೋರಿಸುವ ಅಗತ್ಯವಿಲ್ಲ. ಸಿನಿಮಾಟೋಗ್ರಫಿ ಕಾಯಿದೆ-1953ರ ಅಡಿಯಲ್ಲಿ ಚಲನಚಿತ್ರವನ್ನು ಚಿತ್ರಮಂದಿರದಲ್ಲಿ ಇಲ್ಲವೇ ಡಿವಿಡಿಗಳಲ್ಲಿ ಪ್ರದರ್ಶಿಸಿದಾಗ ಮಾತ್ರ ಪ್ರಮಾಣಪತ್ರ ಪ್ರದರ್ಶಿಸುವುದು ಅನ್ವಯವಾಗುತ್ತದೆ” ಎಂದು ಅದು ಪ್ರತಿಪಾದಿಸಿತ್ತು. ವಾದಗಳನ್ನು ಆಲಿಸಿದ ನ್ಯಾಯಾಲಯ ಫೆಬ್ರವರಿ 8ರ ಆದೇಶದಲ್ಲಿ ಫಿರ್ಯಾದಿಯ ಅರ್ಜಿಯನ್ನು ತಿರಸ್ಕರಿಸಿತು.

Kannada Bar & Bench
kannada.barandbench.com