ರಾಜ್ಯ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಒಪ್ಪಿಗೆ ಹಿಂಪಡೆದ ಮಹಾರಾಷ್ಟ್ರ ಸರ್ಕಾರ

ಡಿಎಸ್‌ಪಿಇ ಕಾಯಿದೆಯ ಸೆಕ್ಷನ್ 6ರ ಅಡಿ ಸಿಬಿಐ ತನ್ನ ವ್ಯಾಪ್ತಿಯ ಅಸ್ತ್ರ ಪ್ರಯೋಗಿಸಲು ರಾಜ್ಯ ಸರ್ಕಾರದ ಅನುಮತಿ ಅಗತ್ಯ. ಅಪರಾಧಗಳನ್ನು ತನಿಖೆ ನಡೆಸಲು ಕಾಯಿದೆಯ ಸೆಕ್ಷನ್ 3ರ ಅಡಿ ನಮೂದಿಸಲಾಗಿದೆ.
Uddhav Thackeray, CBI
Uddhav Thackeray, CBI
Published on

ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯಿದೆ-1946 ಸೆಕ್ಷನ್‌ 6ರ ಅಡಿ ರಾಜ್ಯದ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಲಾಗಿದ್ದ ಅನುಮತಿಯನ್ನು ಹಿಂಪಡೆದಿದೆ.

ಡಿಎಸ್‌ಪಿಇ ಕಾಯಿದೆಯ ಸೆಕ್ಷನ್‌ 6ರ ಅನ್ವಯ ದೆಹಲಿಯ ವಿಶೇಷ ಪೊಲೀಸ್‌ ದಳದ ಸದಸ್ಯರು ರಾಜ್ಯ ಸರ್ಕಾರದ ಅನುಮತಿ ಪಡೆಯದೇ ರಾಜ್ಯದ ಯಾವುದೇ ಮೂಲೆಯಲ್ಲೂ ಕಾಯಿದೆಯ ಅನ್ವಯ ತಮ್ಮ ಅಧಿಕಾರ ವ್ಯಾಪ್ತಿಯನ್ನು ಬಳಸಲಾಗದು.

ಡಿಎಸ್‌ಪಿಇ ಕಾಯಿದೆಯ ಸೆಕ್ಷನ್‌ 6ರ ಅಡಿ ಸಿಬಿಐ ತನ್ನ ವ್ಯಾಪ್ತಿಯ ಅಸ್ತ್ರ ಪ್ರಯೋಗಿಸಲು ರಾಜ್ಯ ಸರ್ಕಾರದ ಅನುಮತಿ ಅಗತ್ಯ. ಕೇಂದ್ರ ಸರ್ಕಾರವು ಕಾಯಿದೆಯ ಸೆಕ್ಷನ್‌ 5ರ ಅಡಿ ಹೊರಡಿಸಿದ ಅಧಿಸೂಚನೆಯ ಪ್ರಕಾರ ಅಪರಾಧಗಳನ್ನು ತನಿಖೆ ನಡೆಸಲು ಕಾಯಿದೆಯ ಸೆಕ್ಷನ್‌ 3ರ ಅಡಿ ನಮೂದಿಸಲಾಗಿದೆ.

1989ರ ಫೆಬ್ರುವರಿ 22ರಂದು ನೀಡಲಾಗಿದ್ದ ಅನುಮತಿಯನ್ನು 2020ರ ಅಕ್ಟೋಬರ್‌ 21ರಂದು ಮಹಾರಾಷ್ಟ್ರ ಸರ್ಕಾರದ ಗೃಹ ಇಲಾಖೆಯು ಹೊರಡಿಸಿರುವ ಅಧಿಸೂಚನೆಯ ಮೂಲಕ ಹಿಂಪಡೆಯಲಾಗಿದೆ.

Also Read
[ಬ್ರೇಕಿಂಗ್] ಟಿಆರ್‌ಪಿ ಹಗರಣ: ಸಮನ್ಸ್ ಪ್ರಶ್ನಿಸಿ 'ಸುಪ್ರೀಂ'‌ ನಲ್ಲಿ ರಿಪಬ್ಲಿಕ್‌ ಟಿವಿ ಸಲ್ಲಿಸಿದ್ದ ಅರ್ಜಿ ವಜಾ

ಉತ್ತರ ಪ್ರದೇಶ ಸರ್ಕಾರವು ಟಿಆರ್‌ಪಿ ಹಗರಣವನ್ನು ಸಿಬಿಐಗೆ ನೀಡಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ. ಸದರಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ದಾಖಲಾಗಿರುವ ಎಫ್‌ಐಆರ್‌ ಆಧರಿಸಿ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ರಾಜಸ್ಥಾನ ಸರ್ಕಾರವು ಒಪ್ಪಿಗೆ ಹಿಂಪಡೆದಿತ್ತು. 2018ರಲ್ಲಿ ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಸಿಬಿಐಗೆ ನೀಡಲಾಗಿದ್ದ ಒಪ್ಪಿಗೆಯನ್ನು ಹಿಂಪಡೆದಿದ್ದವು.

Kannada Bar & Bench
kannada.barandbench.com