ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರ ವಿರುದ್ಧ ಮುಂಬೈ ನಗರ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ಮಾಡಿರುವ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ. ಬಾಂಬೆ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೈಲಾಸ್ ಉತ್ತಮ್‌ಚಂದ್ ಚಂಡಿವಾಲ್ ಅವರ ಉನ್ನತ ಮಟ್ಟದ ಏಕ ಸದಸ್ಯ ಸಮಿತಿ ವಿಚಾರಣೆ ನಡೆಸಿ ಆರು ತಿಂಗಳಲ್ಲಿ ವರದಿ ಸಲ್ಲಿಸಲಿದೆ. ಸರ್ಕಾರ ನೀಡಿದ ಆದೇಶದಲ್ಲಿರುವ ಪ್ರಶ್ನೆಗಳ ಆಧಾರದಲ್ಲಿ ಸಮಿತಿಯ ತನಿಖೆ ನಡೆಯಲಿದೆ. ಆ ಪ್ರಶ್ನೆಗಳು ಹೀಗಿವೆ:
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿನ ದೇಶಮುಖ್ ಮತ್ತವರ ಅಧಿಕೃತ ಸಿಬ್ಬಂದಿಯ ಅಕ್ರಮ/ಅಪರಾಧದ ಬಗ್ಗೆ ಮಾಜಿ ಮುಂಬೈ ಪೊಲೀಸ್ ಅಧಿಕಾರಿ ಪರಮ್ ಮಾಡಿದ ಆರೋಪಗಳಿಗೆ ಯಾವುದೇ ಪುರಾವೆಗಳು ಇವೆಯೇ?
ಡಿಜಿಪಿ ಸಂಜಯ್ ಪಾಟೀಲ್ ಮತ್ತು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಜೆ ಅವರು ಮಾಡಿದ ಆರೋಪಗಳನ್ನು ಆಧರಿಸಿ ಸಿಂಗ್ ಬರೆದ ಪತ್ರದಲ್ಲಿನ ಆರೋಪಗಳಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಥವಾ ಇನ್ನಾವುದೇ ಸಂಸ್ಥೆ ತನಿಖೆ ಅಗತ್ಯವಿದೆಯೇ?
ಸಂಬಂಧಪಟ್ಟ ಘಟನೆ ಕುರಿತಂತೆ ಮತ್ತೇನಾದರೂ ಶಿಫಾರಸುಗಳಿದ್ದರೆ ಸೂಚಿಸಬಹುದು.
ಈ ಮಧ್ಯೆ, ದೇಶಮುಖ್ ಅವರ ವಿರುದ್ಧದ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಮಂಗಳವಾರ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಈ ಆರೋಪಗಳ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ವಿಶೇಷ ಸಮಿತಿ ರಚಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಅಲ್ಲದೆ ಆರೋಪಗಳ ಕುರಿತು ಸಿಬಿಐ ಅಥವಾ ಸ್ವತಂತ್ರ ಸಂಸ್ಥೆಯಿಂದ ವಿಚಾರಣೆ ನಡೆಸಬೇಕೆಂದು ಕೋರಿ ಪರಮ್ ಸಲ್ಲಿಸಿದ ಅರ್ಜಿಯೂ ಸೇರಿದಂತೆ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಲಾದ ನಾಲ್ಕು ಅರ್ಜಿಗಳ ವಿಚಾರಣೆ ಬಾಕಿ ಇದೆ.