ಮಹಾರಾಷ್ಟ್ರದ ನಾಂದೇಡ್ ಮತ್ತು ಛತ್ರಪತಿ ಸಂಭಾಜಿನಗರ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ಸಂಭವಿಸಿದ ರೋಗಿಗಳ ಸಾವಿನ ಪ್ರಕರಣವನ್ನು ಬಾಂಬೆ ಹೈಕೋರ್ಟ್ ಬುಧವಾರ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ವಕೀಲರೊಬ್ಬರು ನ್ಯಾಯಾಲಯಕ್ಕೆ ಬರೆದ ಪತ್ರ ಆಧರಿಸಿ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರಿದ್ದ ವಿಭಾಗೀಯ ಪೀಠ ಸ್ವಯಂ ಪ್ರೇರಿತ ವಿಚಾರಣೆಗೆ ಮುಂದಾಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಸಂಶೋಧನೆಗಳನ್ನು ಒಳಗೊಂಡ ಸೂಕ್ತ ಅರ್ಜಿಯೊಂದನ್ನು ಸಲ್ಲಿಸಿ ಅದರ ಪ್ರತಿಯನ್ನು ಸರ್ಕಾರಕ್ಕೆ ಒದಗಿಸುವಂತೆ ಅರ್ಜಿದಾರ ವಕೀಲ ಮೋಹಿತ್ ಖನ್ನಾ ಅವರಿಗೆ ಪೀಠ ಸೂಚಿಸಿತು.
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಮೀಸಲಿಟ್ಟ ಬಜೆಟ್ ವಿವರಗಳನ್ನು ನೀಡುವಂತೆ ಮಹಾರಾಷ್ಟ್ರದ ಅಡ್ವೊಕೇಟ್ ಜನರಲ್ ಬೀರೇಂದ್ರ ಸರಾಫ್ ಅವರಿಗೆ ನ್ಯಾಯಾಲಯ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನಾಳೆ (ಅಕ್ಟೋಬರ್ 6) ನಡೆಯಲಿದೆ.
ಮಾನವ ಸಂಪನ್ಮೂಲ ಅಥವಾ ಔಷಧಿಗಳ ಕೊರತೆಯಿಂದ ಸಂಭವಿಸುವ ಸಾವುಗಳನ್ನು ಒಪ್ಪಲಾಗದು ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ಬಗ್ಗೆ ಸವಿವರವಾಗಿ ಮಾಹಿತಿ ಸಂಗ್ರಹಿಸಿ ಮುಂದಿನ ವಿಚಾರಣೆಯಂದು ನ್ಯಾಯಾಲಯಕ್ಕೆ ತಿಳಿಸುವುದಾಗಿ ಸರಾಫ್ ಭರವಸೆ ನೀಡಿದರು. ಆಸ್ಪತ್ರೆಗಳಲ್ಲಿನ ತಜ್ಞ ವೈದ್ಯರ ಬಗ್ಗೆ ವಿವರಗಳನ್ನು ಸಂಗ್ರಹಿಸಲು ನ್ಯಾಯಾಲಯ ಅವರಿಗೆ ಸೂಚಿಸಿತು.
ನಾಂದೇಡ್‌ನ ಡಾ ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಶಿಶುಗಳು ಸೇರಿದಂತೆ 31 ಮಂದಿ ಸಾವನ್ನಪ್ಪಿದ್ದರು. ಛತ್ರಪತಿ ಸಂಭಾಜಿನಗರ ಸರ್ಕಾರಿ ಆಸ್ಪತ್ರೆಯಲ್ಲಿ 14 ಮರಣ ಪ್ರಕರಣಗಳು ದಾಖಲಾಗಿದ್ದವು. ವೈದ್ಯರು ಮತ್ತು ಮೂಲಸೌಕರ್ಯ ಕೊರತೆ ಇಂತಹ ಸಾವುಗಳಿಗೆ ಮೂಲ ಕಾರಣ. ಇದು ಸಂವಿಧಾನದ 21 ನೇ ವಿಧಿ ಅಡಿ ಒದಗಿಸಲಾದ ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ವಕೀಲ ಖನ್ನಾ ತಮ್ಮ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ನಾಗಪುರದ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನೂ 24 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 80ಕ್ಕೆ ತಲುಪಿದೆ ಎಂದು ವರದಿಯಾಗಿದೆ.