ದಾವೂದ್ ಇಬ್ರಾಹಿಂಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ 8 ದಿನ ಇ ಡಿ ವಶಕ್ಕೆ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರನ್ನು ಒಳಗೊಂಡ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬುಧವಾರ ಬೆಳಗ್ಗೆ ಮಲಿಕ್ ಅವರನ್ನು ಬಂಧಿಸಿತ್ತು.
Nawab Malik, Enforcement Directorate

Nawab Malik, Enforcement Directorate

Published on

ಭೂಗತ ದೊರೆ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರನ್ನು ಒಳಗೊಂಡ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಂಪುಟ ದರ್ಜೆ ಸಚಿವ ನವಾಬ್‌ ಮಲಿಕ್‌ ಅವರನ್ನು ಮುಂಬೈ ನ್ಯಾಯಾಲಯ ಎಂಟು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿದೆ.

ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ದರದಲ್ಲಿ ದಾವೂದ್‌ನಿಂದ ಮಲಿಕ್ ಆಸ್ತಿ ಖರೀದಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಆರೋಪ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಹೇಳಿಕೆ ಆಧರಿಸಿದೆ. ಸಮನ್ಸ್‌ಗೆ ಸಹಿ ಹಾಕಿದ ಬಳಿಕ ಮಲಿಕ್‌ ಅವರನ್ನು ಬುಧವಾರ ಬೆಳಗ್ಗೆ 7 ಗಂಟೆಗೆ ವಿಚಾರಣೆಗಾಗಿ ಅವರ ನಿವಾಸದಿಂದ ಇ ಡಿ ಅಧಿಕಾರಿಗಳು ಕರೆದೊಯ್ದರು ಎಂದು ತಿಳಿದುಬಂದಿದ್ದು ಎಂಟು ಗಂಟೆಗಳ ವಿಚಾರಣೆ ಬಳಿಕ ಅವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.

ಅಲ್ಲಿಂದ ವಿಶೇಷ ನ್ಯಾಯಾಧೀಶ ಆರ್‌ ಎನ್ ರೋಕಡೆ ಅವರ ಮುಂದೆ ಮಲಿಕ್ ಅವರನ್ನು ಹಾಜರುಪಡಿಸಿ 8 ದಿನದ ಕಸ್ಟಡಿಗೆ ಒಪ್ಪಿಸಿದ್ದಾರೆ. ಇ ಡಿ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು 14 ದಿನಗಳ ಕಸ್ಟಡಿಗೆ ಕೋರಿದರು. ಪ್ರಕರಣದ ಪ್ರಧಾನ ಆರೋಪಿ ದಾವೂದ್ ಇಬ್ರಾಹಿಂ ಕಸ್ಕರ್ ವಿರುದ್ಧ ಭಯೋತ್ಪಾದನಾ ಚಟುವಟಿಕೆ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದ್ದು ಅಕ್ರಮ ಹಣ ವರ್ಗಾವಣೆ ಮೂಲಕ ಅನಧಿಕೃತವಾಗಿ ಆಸ್ತಿ ಗಳಿಸಲಾಗಿದೆ. ಒಬ್ಬ ವ್ಯಕ್ತಿಯಿಂದ ಕಬಳಿಸಿದ ಆಸ್ತಿಯನ್ನು ದಾವೂದ್ ಗ್ಯಾಂಗ್‌ ಮಲಿಕ್‌ ಅವರಿಗೆ ಸೇರಿದ ಕಂಪೆನಿಗೆ ವರ್ಗಾಯಿಸಿತು ಎಂದು ಅವರು ವಾದಿಸಿದರು.

ಮಲಿಕ್‌ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಮಿತ್‌ ದೇಸಾಯಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಮಲಿಕ್‌ ಮತ್ತು ದಾವೂದ್‌ ಗ್ಯಾಂಗ್‌ಗೂ ಯಾವುದೇ ಸಂಬಂಧ ಇಲ್ಲ. 1999ರಷ್ಟು ಹಿಂದೆ ಆಸ್ತಿ ವರ್ಗಾಯಿಸಲಾಗಿದ್ದು ಆಗ ಅಕ್ರಮ ಹಣ ವರ್ಗಾವಣೆ ಕಾಯಿದೆ ಜಾರಿಯಲ್ಲಿರಲಿಲ್ಲ. ಆದರೆ ಇದನ್ನು ಬಳಸಿಕೊಂಡು ಮಲಿಕ್‌ ಅವರು ರಾಷ್ಟ್ರ ವಿರೋಧಿ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಬಿಂಬಿಸಲಾಗುತ್ತಿದೆ ಎಂದರು.

Kannada Bar & Bench
kannada.barandbench.com