ʼಮಹಾʼ ಬಿಕ್ಕಟ್ಟು: ವಿಶ್ವಾಸಮತ ಯಾಚನೆ ಪ್ರಶ್ನಿಸಿ ಉದ್ಧವ್ ಬಣದಿಂದ ಸುಪ್ರೀಂನಲ್ಲಿ ಅರ್ಜಿ, ಸಂಜೆ 5ಕ್ಕೆ ವಿಚಾರಣೆ

ನಾಳೆ ಬೆಳಿಗ್ಗೆ 11 ಗಂಟೆಗೆ ಬಹುಮತ ಸಾಬೀತಿಗೆ ಸಮಯ ನಿಗದಿಪಡಿಸಿರುವುದನ್ನು ಪ್ರಸ್ತಾಪಿಸಿದ ಹಿರಿಯ ನ್ಯಾಯವಾದಿ ಡಾ ಅಭಿಷೇಕ್ ಮನು ಸಿಂಘ್ವಿ ತುರ್ತಾಗಿ ಪ್ರಕರಣದ ವಿಚಾರಣೆ ನಡೆಸುವಂತೆ ಪೀಠವನ್ನು ಕೋರಿದರು.
Eknath Shinde, Uddhav Thackeray and Supreme Court
Eknath Shinde, Uddhav Thackeray and Supreme Court

ಮಹಾರಾಷ್ಟ್ರ ವಿಧಾನಾಸಭೆಯಲ್ಲಿ ವಿಶ್ವಾಸಮತ ಯಾಚಿಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ನೀಡಿರುವ ಸೂಚನೆ ಪ್ರಶ್ನಿಸಿ ಶಿವಸೇನೆಯ ಉದ್ಧವ್‌ ಠಾಕ್ರೆ ಬಣ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ಸಂಜೆ 5 ಗಂಟೆಗೆ ಆಲಿಸಲಿದೆ.

ನಾಳೆ ಬೆಳಿಗ್ಗೆ 11ಗಂಟೆಗೆ ಬಹುಮತ ಸಾಬೀತಿಗೆ ಸಮಯ ನಿಗದಿಪಡಿಸಿರುವುದನ್ನು ಸುಪ್ರೀಂ ಕೋರ್ಟ್‌ನ ರಜಾಕಾಲೀನ ಪೀಠದ ಮುಂದೆ ಪ್ರಸ್ತಾಪಿಸಿದ ಹಿರಿಯ ನ್ಯಾಯವಾದಿ ಡಾ ಅಭಿಷೇಕ್‌ ಮನು ಸಿಂಘ್ವಿ ತುರ್ತಾಗಿ ಪ್ರಕರಣದ ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠವನ್ನು ಕೋರಿದರು.

ಏಕನಾಥ್‌ ಶಿಂಧೆ ಬಣದಲ್ಲಿರುವ ಶಿವಸೇನೆ ಬಂಡಾಯ ಶಾಸಕರ ಬಣಕ್ಕೆ ವಿಶ್ವಾಸಮತ ಯಾಚನೆ ವೇಳೆ ಮತದಾನ ಮಾಡಲು ಅವಕಾಶ ನೀಡಬಾರದು ಎಂದು ಅರ್ಜಿದಾರ ಹಾಗೂ ಶಿವಸೇನಾ ಸಚೇತಕ ಸುನೀಲ್‌ ಪ್ರಭು ಪರವಾಗಿ ಸಿಂಘ್ವಿ ವಾದ ಮಂಡಿಸಿದರು.

Also Read
ಮಹಾರಾಷ್ಟ್ರ ಬಿಕ್ಕಟ್ಟು: ಶಿಂಧೆ ಬಣಕ್ಕೆ ಮಧ್ಯಂತರ ಪರಿಹಾರ, ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್

"ಕಾನೂನುಬಾಹಿರವಾದ ವಿಶ್ವಾಸಮತ ಯಾಚನೆ ಪ್ರಕರಣವನ್ನು ನಾನು ಪ್ರಸ್ತಾಪಿಸುತ್ತಿದ್ದೇನೆ. ಕಳಂಕಿತ ವ್ಯಕ್ತಿಗಳನ್ನು ಬಹುಮತ ಸಾಬೀತು ಪರೀಕ್ಷೆ ಒಳಗೊಂಡಿರಬಾರದು. ಸಂಜೆಯ ನಂತರ ವಿಚಾರಣೆ ನಡೆಯಬೇಕು ಎಂದು ಬಯಸುತ್ತಿರುವೆ. ವಿಶ್ವಾಸಮತದ ವೇಳೆ ಎಣಿಕೆ ಮಾಡಬಾರದ ಮತಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಹಾಗಾದರೆ ಪ್ರಕ್ರಿಯೆ ನಿಷ್ಪ್ರಯೋಜಕವಾಗಲಿದೆ” ಎಂದು ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದರು.

ಶಿಂಧೆ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಮನವಿಗೆವಿರೋಧ ವ್ಯಕ್ತಪಡಿಸಿದರು. ಆದರೆ ವಿಶ್ವಾಸಮತ ಯಾಚನೆಗೂ ಮುನ್ನ ಈ ಪ್ರಕರಣವನ್ನು ಆಲಿಸಬೇಕು ಎಂದು ಪೀಠ ಹೇಳಿತು. “ನಾವು ಪರವಾಗಿ ತೀರ್ಪು ನೀಡುತ್ತೇವೋ ಇಲ್ಲವೋ, ಅವರ ಪ್ರಕರಣ ಆಲಿಸುವುದನ್ನು ನಿರಾಕರಿಸುವಂತಿಲ್ಲ. ಪ್ರಕರಣದ ತುರ್ತು ವಿಚಾರಣೆಗೆ ಅನುಮತಿ ನೀಡಲಾಗಿದೆ” ಎಂದು ನ್ಯಾಯಾಲಯ ಹೇಳಿತು.

Related Stories

No stories found.
Kannada Bar & Bench
kannada.barandbench.com