ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಸುಪ್ರೀಂ ಕೋರ್ಟ್‌ನಿಂದ ಏಕನಾಥ್ ಶಿಂಧೆ ಬಣ ಕೋರಿರುವ ಪರಿಹಾರಗಳೇನು?

ಉಪಸಭಾಧ್ಯಕ್ಷರ ಪದಚ್ಯುತಿ ನಿರ್ಣಯದ ಬಗ್ಗೆ ತೀರ್ಪು ನೀಡುವವರೆಗೆ ಅನರ್ಹತೆ ಅರ್ಜಿಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಉಪಸಭಾಪತಿಗೆ ನಿರ್ದೇಶನ ನೀಡಬೇಕು ಎಂದು ಕೋರಿಕೆ.
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಸುಪ್ರೀಂ ಕೋರ್ಟ್‌ನಿಂದ ಏಕನಾಥ್ ಶಿಂಧೆ ಬಣ ಕೋರಿರುವ ಪರಿಹಾರಗಳೇನು?
A1

ಶಿವಸೇನೆ ಬಂಡಾಯ ಶಾಸಕರ ಏಕನಾಥ್‌ ಶಿಂಧೆ ಬಣವು ಸುಪ್ರೀಂ ಕೋರ್ಟ್‌ನಲ್ಲಿ ಎರಡು ಅರ್ಜಿಗಳನ್ನು ದಾಖಲಿಸುವ ಮೂಲಕ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿರುವುದು ಸರಿಯಷ್ಟೇ. ಶಿವಸೇನಾ ಶಾಸಕಾಂಗ ಪಕ್ಷದ ನಾಯಕರಾಗಿ ಅಜಯ್ ಚೌಧರಿ ನೇಮಕವನ್ನು ಪ್ರಶ್ನಿಸಿ ಒಂದು ಅರ್ಜಿಯನ್ನು ಸಲ್ಲಿಸಲಾಗಿದ್ದರೆ ಮತ್ತೊಂದು ಅರ್ಜಿಯಲ್ಲಿ 16 ಬಂಡಾಯ ಶಾಸಕರಿಗೆ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನೀಡಿದ ಅನರ್ಹತೆ ನೋಟಿಸನ್ನು ಪ್ರಶ್ನಿಸಲಾಗಿದೆ.

ಪ್ರಕರಣವನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ರಜಾಕಾಲೀನ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.

ಅರ್ಜಿಗಳಲ್ಲಿನ ಪ್ರಮುಖ ಕೋರಿಕೆ ಹೀಗಿದೆ:

  • ಶಿಂಧೆ ಮತ್ತಿತರ 15 ಮಂದಿ ವಿರುದ್ಧ ಸಲ್ಲಿಸಲಾದ ಅನರ್ಹತೆ ಅರ್ಜಿಯ ಮೇಲಿನ ಉಪಸಭಾಧ್ಯಕ್ಷರ ನೋಟಿಸ್‌ಗೆ ತಡೆ ನೀಡಬೇಕು.

  • ಉಪಸಭಾಧ್ಯಕ್ಷರ ಪದಚ್ಯುತಿ ನಿರ್ಣಯದ ಬಗ್ಗೆ ತೀರ್ಪು ನೀಡುವವರೆಗೆ ಅನರ್ಹತೆ ಅರ್ಜಿಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಉಪಸಭಾಧ್ಯಕ್ಷರಿಗೆ ನಿರ್ದೇಶನ ನೀಡಬೇಕು.

  • ಅಜಯ್ ಚೌಧರಿ ಅವರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕ ಎಂದು ಗುರುತಿಸುವ ಉಪಸಭಾಧ್ಯಕ್ಷರ ಆದೇಶವನ್ನು ರದ್ದುಗೊಳಿಸಬೇಕು.

  • ಭಿನ್ನಮತೀಯ ಶಾಸಕರ ಕುಟುಂಬಕ್ಕೆ ಭದ್ರತೆ ಒದಗಿಸುವಂತೆ ಕೇಂದ್ರ ಮತ್ತು ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಬೇಕು.

  • ಯಾವುದೇ ಸಂದರ್ಭದಲ್ಲಿ ಬಹುಮತದಿಂದ ಚುನಾಯಿತರಾದ ಪಕ್ಷದ ನಾಯಕ ಮತ್ತು ಮುಖ್ಯ ಸಚೇತಕರ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಬಹುಪಾಲು ಸದಸ್ಯರ ಕ್ರಮವನ್ನು ಪ್ರಶ್ನಿಸುವ ನೋಟಿಸ್‌ ಸ್ವೀಕಾರಾರ್ಹವಲ್ಲ.

  • ಮಹಾ ವಿಕಾಸ್ ಅಘಾಡಿ ಸರ್ಕಾರದೊಂದಿಗೆ ಶಾಮೀಲಾಗಿ ಉಪ ಸಭಾಪತಿ ಕ್ರಮ ಕೈಗೊಂಡಿದ್ದಾರೆ.

  • ಅನರ್ಹತೆ ನೋಟಿಸ್‌ಗೆ ಪ್ರತಿಕ್ರಿಯಿಸಲು 7 ದಿನಗಳ ಕಾಲಾವಕಾಶ ನೀಡುವ ಬದಲು ಉಪಸಭಾಧ್ಯಕ್ಷರು ಅನರ್ಹತೆಯ ನಿಯಮಾವಳಿ ಮತ್ತು ಮಹಾರಾಷ್ಟ್ರ ವಿಧಾನಸಭೆಯ ನಿಯಮಗಳಿಗೆ ವಿರುದ್ಧವಾಗಿ ಕೇವಲ 48 ಗಂಟೆಗಳ ಕಾಲಾವಕಾಶ ನೀಡಿದರು.

  • ಉಪಸಭಾಧ್ಯಕ್ಷ ಪದಚ್ಯುತಿ ಕೋರಿ ಅವಿಶ್ವಾಸ ನಿರ್ಣಯ ಬಾಕಿ ಇದ್ದು ನಬಮ್ ರೆಬಿಯಾ ಮತ್ತು ಬಮಾಂಗ್ ಫೆಲಿಕ್ಸ್ ಹಾಗೂ ಅರುಣಾಚಲ ಪ್ರದೇಶ ವಿಧಾನಸಭೆ ಉಪಾಧ್ಯಕ್ಷರು ಇನ್ನಿತರರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ನೀಡಲಾದ ತೀರ್ಪಿನ ಪ್ರಕಾರ ಅವಿಶ್ವಾಸ ನಿರ್ಣಯ ಇತ್ಯರ್ಥಗುವವರೆಗೆ ಯಾವುದೇ ಅನರ್ಹತೆ ಅರ್ಜಿಯ ಬಗ್ಗೆ ನಿರ್ಣಯ ಕೈಗೊಳ್ಳಲು ಉಪಸಭಾಧ್ಯಕ್ಷರು ಅನರ್ಹರಗಿರುತ್ತಾರೆ.

  • ಶಿವಸೇನೆಯ ಅಲ್ಪಸಂಖ್ಯಾತ ಬಣಕ್ಕೆ ಸೇರಿದ ಅಜಯ್ ಚೌಧರಿ ಅವರನ್ನು ಶಿವಸೇನಾ ಶಾಸಕಾಂಗ ಪಕ್ಷದ ನಾಯಕ ಎಂದು ಘೋಷಿಸಿರುವ ಉಪಸಭಾಧ್ಯಕ್ಷರ ಆದೇಶವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

  • ಬದಲಿಗೆ ಶಿಂಧೆಯವರ ಬಹುಸಂಖ್ಯಾತ ಬಣದಿಂದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಗೋಗಾವಳೆ ಅವರನ್ನು ಪರಿಗಣಿಸಬೇಕಿತ್ತು.

Related Stories

No stories found.
Kannada Bar & Bench
kannada.barandbench.com