ಮಹಾರಾಷ್ಟ್ರದ ಹಿಂದಿನ ಸಭಾಧ್ಯಕ್ಷರ ಪುನರ್‌ಸ್ಥಾಪಿಸಿ ನಡೆಯದೆ ಹೋದ ವಿಶ್ವಾಸಮತವ ಅಮಾನ್ಯಗೊಳಿಸಬಹುದೆ? ಸುಪ್ರೀಂ ಪ್ರಶ್ನೆ

ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಎಲ್ಲಾ ಬದಲಾವಣೆಗಳು ಪ್ರಕರಣದ ತೀರ್ಪಿಗೆ ಬದ್ಧವಾಗಿರಬೇಕು ಎಂದು ಪೀಠ ಈ ಹಿಂದೆ ಹೇಳಿದ್ದನ್ನು ಉದ್ಧವ್ ಠಾಕ್ರೆ ಬಣದ ಪರ ವಕೀಲ ಕಪಿಲ್ ಸಿಬಲ್ ನೆನಪಿಸಿದರು.
Justices Hima Kohli, MR Shah, CJI DY Chandrachud, Krishna Murari and PS Narasimha
Justices Hima Kohli, MR Shah, CJI DY Chandrachud, Krishna Murari and PS Narasimha

ಕಳೆದ ವರ್ಷ ಉಂಟಾಗಿದ್ದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಾಲವನ್ನು ಎಷ್ಟರ ಮಟ್ಟಿಗೆ ಹಿಂದಕ್ಕೆ ಸರಿಸಬಹುದು ಎನ್ನುವ ಬಗ್ಗೆ ಸುಪ್ರೀಂ ಕೋರ್ಟ್‌ ತನ್ನ ಅನುಮಾನಗಳನ್ನು ಬುಧವಾರ ವ್ಯಕ್ತಪಡಿಸಿತು [ಸುಭಾಷ್ ದೇಸಾಯಿ ಮತ್ತು ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರದ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಇನ್ನಿತರರ ನಡುವಣ ಪ್ರಕರಣ].

ಏಕನಾಥ್ ಶಿಂಧೆ ಪಾಳೆಯದ ಶಾಸಕರ ಅನರ್ಹತೆ ಅರ್ಜಿಗಳ ಬಗ್ಗೆ ನಿರ್ಧರಿಸಲು ಹಿಂದಿನ ಸ್ಪೀಕರ್‌ ಅವರನ್ನು ಪುನರ್‌ಸ್ಥಾಪಿಸಿ, ನಡೆಯದೇ ಹೋದ ವಿಶ್ವಾಸ ಮತ ಯಾಚನೆಯನ್ನು ಅಮಾನ್ಯಗೊಳಿಸಲು (ವಿಶ್ವಾಸ ಮತ ಯಾಚಿಸುವ ಮೊದಲೇ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದರು) ಬಹುಶಃ ಸಾಧ್ಯವಾಗದೆ ಹೋಗಬಹುದು ಎಂದು ಅದು ಹೇಳಿತು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಿಜೆಐ  ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠ ಶಾಸಕರ ಅನರ್ಹತೆ ಬಗ್ಗೆ ಸ್ಪೀಕರ್ ಮಾತ್ರ ನಿರ್ಧರಿಸಬಹುದಾದರೂ 8 ತಿಂಗಳ ಹಿಂದೆ ಚಾಲ್ತಿಯಲ್ಲಿದ್ದ ಅದೇ ಸ್ಥಿತಿಯನ್ನು ಮತ್ತೆ ಅಸ್ತಿತ್ವಕ್ಕೆ ತರುವುದು ನ್ಯಾಯಾಲಯಕ್ಕೆ ವಾಸ್ತವದಲ್ಲಿ ಸಾಧುವೆನಿಸದೆ ಹೋಗಬಹುದು ಎಂದಿತು.

“(ಶಾಸಕರನ್ನು) ಅನರ್ಹಗೊಳಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ಸ್ಪೀಕರ್‌ ನಿರ್ಧರಿಸಬೇಕಿದ್ದು ಇದು ನಮ್ಮ (ನ್ಯಾಯಾಲಯದ) ವ್ಯಾಪ್ತಿ ಮೀರುವಂತಹ ಆತಂಕ ಇರುವ ಕ್ಷೇತ್ರವಾಗಿದೆ. ಯಾವುದೇ ನ್ಯಾಯಾಂಗ ಆದೇಶ ಇಲ್ಲದಿದ್ದರೆ ನಾವು ವಿಷಯವನ್ನು ಸ್ಪೀಕರ್‌ಗೆ ಕಳಿಸುತ್ತಿದ್ದೆವು. ಎಂಟು ತಿಂಗಳ ಹಿಂದಕ್ಕೆ ಮರಳಿ ಈಗ ಸ್ಪೀಕರ್‌ ಅಲ್ಲದೆ ಇರುವವರನ್ನು ಮರಳಿ ಸ್ಪೀಕರ್‌ ಸ್ಥಾನದಲ್ಲಿ ಕೂರಿಸಿ ಕ್ರಮ ಕೈಗೊಳ್ಳಿ ಎಂದು ಹೇಳಲು ಸಾಧ್ಯವೇ? ನಮ್ಮನ್ನು ಚಿಂತೆಗೀಡು ಮಾಡಿರುವುದು ಏನು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು” ಎಂದು ನ್ಯಾಯಾಲಯ ಹೇಳಿತು.

ನ್ಯಾಯಾಲಯದ ಮಧ್ಯಂತರ ಆದೇಶಗಳಿಂದಾಗಿ ಮಹಾರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಉಂಟಾಗಿದೆ ಎಂದು ಉದ್ಧವ್‌ ಠಾಕ್ರೆ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಮತ್ತು ವಕೀಲ ಅಮಿತ್ ಆನಂದ್ ತಿವಾರಿ ಅವರು, ಎಲ್ಲಾ ಬದಲಾವಣೆಗಳು ಪ್ರಕರಣದ ತೀರ್ಪಿಗೆ ಬದ್ಧವಾಗಿರಬೇಕು ಎಂದು ಪೀಠ ಈ ಹಿಂದೆ ಹೇಳಿದ್ದನ್ನು ನೆನಪಿಸಿದರು.

ಶಿಂಧೆ ಮತ್ತು ಬಂಡಾಯ ಶಾಸಕರ ಗುಂಪಿಗೆ ಉಪ ಸ್ಪೀಕರ್ ಕಳುಹಿಸಿದ್ದ ಅನರ್ಹತೆಯ ನೋಟಿಸ್‌ಗಳಿಗೆ ಪ್ರತಿಕ್ರಿಯೆ ನೀಡಲು ಜುಲೈ 12ರವರೆಗೆ ಗಡುವು ವಿಸ್ತರಿಸುವ ಮೂಲಕ  ಸುಪ್ರೀಂ ಕೋರ್ಟ್‌ ಜೂನ್ 27, 2022ರಲ್ಲಿ ನಡೆದ ವಿಚಾರಣೆ ವೇಳೆ ಮಧ್ಯಂತರ ಪರಿಹಾರ ನೀಡಿತ್ತು.

ತರುವಾಯ, ಜೂನ್ 29ರಂದು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಕರೆದಿದ್ದ ವಿಶ್ವಾಸಮತ ಯಾಚನೆ ಪ್ರಕಿಯೆಗೆ ಕೂಡ ನ್ಯಾಯಾಲಯ ಅನುಮತಿಸಿತ್ತು. ಆದರೆ ಉದ್ಧವ್‌ ಅವರು ವಿಶ್ವಾಸಮತ ಯಾಚನೆಗೂ ಮುನ್ನವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶಿಂಧೆ ಅವರು ಮಹಾರಾಷ್ಟ್ರದ ಚುಕ್ಕಾಣಿ ಹಿಡಿದಿದ್ದರು.

Related Stories

No stories found.
Kannada Bar & Bench
kannada.barandbench.com