ಮಹಾರಾಷ್ಟ್ರ ರಾಜಕೀಯ: ಸರ್ಕಾರ ರಚನೆ ಪರ ರಾಜ್ಯಪಾಲರೇ ವಕಾಲತ್ತು ವಹಿಸುವುದು ಸಾಧ್ಯವೇ ಎಂದು ಸುಪ್ರೀಂ ಪ್ರಶ್ನೆ

ನಬಮ್ ರೆಬಿಯಾ ಮತ್ತು ಡೆಪ್ಯೂಟಿ ಸ್ಪೀಕರ್ ನಡುವಣ ಪ್ರಕರಣದಲ್ಲಿ ನೀಡಲಾಗಿದ್ದ ತೀರ್ಪನ್ನು ಐವರು ನ್ಯಾಯಮೂರ್ತಿಗಳ ಮತ್ತೊಂದು ಪೀಠ ತಿರುಚಬಹುದೇ ಎಂದು ಕೂಡ ನ್ಯಾಯಾಲಯ ಕೇಳಿತು.
ಮಹಾರಾಷ್ಟ್ರ ರಾಜಕೀಯ: ಸರ್ಕಾರ ರಚನೆ ಪರ ರಾಜ್ಯಪಾಲರೇ ವಕಾಲತ್ತು ವಹಿಸುವುದು ಸಾಧ್ಯವೇ ಎಂದು ಸುಪ್ರೀಂ ಪ್ರಶ್ನೆ
Published on

ಮಹಾರಾಷ್ಟ್ರದ ಶಿವಸೇನೆಯ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳ ನಡುವಿನ ಪ್ರಕರಣದ ವಿಚಾರಣೆ ವೇಳೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕುರಿತಾದ ಮೈತ್ರಿ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿದ ಅಲ್ಲಿನ ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್‌ ಬುಧವಾರ ಅಸಮಾಧಾನ ವ್ಯಕ್ತಪಡಿಸಿತು [ಸುಭಾಷ್ ದೇಸಾಯಿ ಮತ್ತು ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರದ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಇನ್ನಿತರರ ನಡುವಣ ಪ್ರಕರಣ].

ರಾಜ್ಯದಲ್ಲಿನ ರಾಜಕೀಯ ಮೈತ್ರಿಗಳು ಮತ್ತು ಸರ್ಕಾರ ರಚನೆಯ ಬಗ್ಗೆ ರಾಜ್ಯಪಾಲರು ಪ್ರತಿಕ್ರಿಯಿಸಿರುವ ರೀತಿಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠ ಪ್ರಶ್ನಿಸಿತು.

ಇಂದು ಪ್ರಕರಣದ ವಿಚಾರಣೆ ವೇಳೆ ಮಹಾರಾಷ್ಟ್ರ ರಾಜ್ಯಪಾಲರ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು  ಉದ್ಧವ್‌ ಠಾಕ್ರೆ ಅವರು 2019ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಿದ್ದು ಕಾಂಗ್ರೆಸ್‌ ಮತ್ತು ಎನ್‌ಸಿಪಿಯೊಂದಿಗೆ ಸೇರಿ ಸರ್ಕಾರ ರಚಿಸಿದ್ದನ್ನು ವಿವರಿಸಿದರು.

ಆಗ  ಈ ವಾದ ಒಪ್ಪದ ಸಿಜೆಐ ಚಂದ್ರಚೂಡ್‌, “ರಾಜ್ಯಪಾಲರು ಇದನ್ನೆಲ್ಲಾ ಹೇಳುತ್ತಾರೆಂದರೆ ಕೇಳುವುದಾದರೂ ಹೇಗೆ? ಸರ್ಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಈ ಮಾತನ್ನು ಹೇಗೆ ಹೇಳಲು ಸಾಧ್ಯ? ರಾಜಕೀಯಕ್ಕೆ ಇಳಿಯಬಾರದು ಎಂದಷ್ಟೇ ನಾವು ಹೇಳುತ್ತಿದ್ದೇವೆ” ಎಂದು ಚಾಟಿ ಬೀಸಿದರು.

ಶಿವಸೇನೆಯ ಬಂಡಾಯ ಶಾಸಕರನ್ನು ಅನರ್ಹಗೊಳಿಸಬೇಕೇ ಹಾಗೂ ಶಿವಸೇನೆಯ ಬಿಲ್ಲು- ಬಾಣದ ಗುರುತಿಗೆ ಸಂಬಂಧಿಸಿದಂತೆ ಯಾವ ಬಣಕ್ಕೆ ಹಕ್ಕಿದೆ ಎಂಬ ವಿಷಯದ ಕುರಿತು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ.

ಶಾಸಕರನ್ನು ಅನರ್ಹಗೊಳಿಸಲು ಉಪ ಸ್ಪೀಕರ್‌ಗೆ ಇರುವ ಅಧಿಕಾರಕ್ಕೆ ಸಂಬಂಧಿಸಿದಂತೆ ನಬಮ್ ರೆಬಿಯಾ ಮತ್ತು ಡೆಪ್ಯೂಟಿ ಸ್ಪೀಕರ್‌ ನಡುವಣ ಪ್ರಕರಣದಲ್ಲಿ ಸಾಂವಿಧಾನಿ ಪೀಠ ನೀಡಿದ್ದ ತೀರ್ಪನ್ನು ಐವರು ನ್ಯಾಯಮೂರ್ತಿಗಳ ಮತ್ತೊಂದು ಪೀಠ ತಿರುಚಬಹುದೇ ಎಂದು ಕೂಡ ನ್ಯಾಯಾಲಯ ಇದೇ ವೇಳೆ ಪ್ರಶ್ನಿಸಿತು.

ನಬಮ್ ರೆಬಿಯಾ ಪ್ರಕರಣದ ತೀರ್ಪನ್ನು ಮರುಪರಿಶೀಲಿಸುವುದಕ್ಕೆ ಎರಡೂ ಬಣಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದಾಗ, ಸಿಜೆಐ ಚಂದ್ರಚೂಡ್ ನಬಮ್‌ ರೆಬಿಯಾ ಪ್ರಕರಣದ ತೀರ್ಪನ್ನು ಪರಿಗಣಿಸುವುದಾದರೆ ಅದು ಪಕ್ಷಾಂತರಕ್ಕೆ ಅನುಮತಿಸುತ್ತದೆ. ಇದೇ ವೇಳೆ ರಾಜಕೀಯ ಪಕ್ಷದ ನಾಯಕ ಸಂಖ್ಯಾಬಲ ಕಳೆದುಕೊಂಡರೂ ಆತ ಅಧಿಕಾರದಲ್ಲಿ ಮುಂದುವರೆಯಬಹುದು ಎನ್ನುತ್ತದೆ. ನೀವು ಯಾವ ರೀತಿಯಲ್ಲಿ ಒಪ್ಪಿಕೊಂಡರೂ ಅದು ತುಂಬಾ ಗಂಭೀರ ಪರಿಣಾಮ ಬೀರಲಿದ್ದು ಅದು ಅಪೇಕ್ಷಣೀಯವಲ್ಲ” ಎಂದು ಹೇಳಿದರು.

ಏಕನಾಥ್‌ ಶಿಂಧೆ ಬಣದ ಪರವಾಗಿ ಹಿರಿಯ ನ್ಯಾಯವಾದಿಗಳಾದ ಹರೀಶ್‌ ಸಾಳ್ವೆ, ನೀರಜ್‌ ಕಿಶನ್‌ ಕೌಲ್‌ ವಾದ ಮಂಡಿಸಿದರು. ಉದ್ಧವ್‌ ಠಾಕ್ರೆ ಬಣದ ಪರವಾಗಿ ಕಪಿಲ್‌ ಸಿಬಲ್‌ ಹಾಜರಿದ್ದರು.

Kannada Bar & Bench
kannada.barandbench.com