ಮರುಪರಿಶೀಲನೆಗಾಗಿ ನಬಮ್ ರೆಬಿಯಾ ಪ್ರಕರಣ ವಿಸ್ತೃತ ಪೀಠಕ್ಕೆ: ವಿಚಾರಣಾರ್ಹತೆಯೊಂದಿಗೆ ನಿರ್ಧರಿಸಲಾಗುವುದು ಎಂದ ಸುಪ್ರೀಂ

ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವ ಕುರಿತ ಅಂಶವನ್ನು ಪ್ರಕರಣದ ಅಂಶಗಳನ್ನುಪರಿಗಣಿಸದೆ ಪ್ರತ್ಯೇಕವಾಗಿ ತೀರ್ಮಾನಿಸಲು ಸಾಧ್ಯವಿಲ್ಲ.ಪ್ರಕರಣದ ವಿಚಾರಣಾರ್ಹತೆಯೊಂದಿಗೆ ಮಾತ್ರ ಅದನ್ನು ನಿರ್ಧರಿಸಲು ಸಾಧ್ಯ ಎಂದ ನ್ಯಾಯಾಲಯ.
Uddhav thackeray, Eknath shinde and Supreme court
Uddhav thackeray, Eknath shinde and Supreme court

ನಬಮ್‌ ರೆಬಿಯಾ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಮರುಪರಿಶೀಲಿಸುವಂತೆ ಮಾಡಲಾದ ಕೋರಿಕೆಯನ್ನು ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಕುರಿತಾದ ಪ್ರಕರಣದ ವಿಚಾರಣಾರ್ಹತೆಯ ಜೊತೆಗೆ ವಿಚಾರಣೆ ನಡೆಸಲಾಗುವುದೇ ವಿನಾ ಪ್ರತ್ಯೇಕವಾಗಿ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ [ಸುಭಾಷ್ ದೇಸಾಯಿ ಮತ್ತು ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರದ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಇನ್ನಿತರರ ನಡುವಣ ಪ್ರಕರಣ].

ಮಹಾರಾಷ್ಟ್ರದಲ್ಲಿ ಅಧಿಕಾರ ಬದಲಾವಣೆಗೆ ಕಾರಣವಾಗಿದ್ದ 2022ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಶಿವಸೇನೆಯ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ  ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠ ಈ ಆದೇಶ ನೀಡಿತು.

ಈ ಹಿನ್ನೆಲೆಯಲ್ಲಿ ಅರ್ಹತೆ ಆಧಾರದಲ್ಲಿ ಪ್ರಕರಣವನ್ನು ಫೆಬ್ರವರಿ 21ರಂದು ಮಂಗಳವಾರ ಬೆಳಗ್ಗೆ 10:30 ಕ್ಕೆ ವಿಚಾರಣೆಗೆ ಪಟ್ಟಿ ಮಾಡುವಂತೆ ಅದು ನಿರ್ದೇಶಿಸಿತು. ನಬಮ್‌ ರೆಬಿಯಾ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ವಿಸ್ತೃತ ಪೀಠಕ್ಕೆ ಉಲ್ಲೇಖಿಸಬೇಕೆ ಎಂಬ ಕುರಿತು ನಿರ್ಧರಿಸುವುದಕ್ಕಾಗಿ ಪೀಠ ತೀರ್ಪನ್ನು ನಿನ್ನೆ ಕಾಯ್ದಿರಿಸಿತ್ತು.

ನಬಮ್ ರೆಬಿಯಾ ಪ್ರಕರಣದಲ್ಲಿ ತಿಳಿಸಿರುವಂತೆ ಸ್ಪೀಕರ್‌ ಪದಚ್ಯುತಿಗೆ ಕೋರಿರುವ ವಿಚಾರ ಬಾಕಿ ಉಳಿದಿದ್ದಾಗ ಅದೇ ಸ್ಪೀಕರ್‌ ಶಾಸಕರನ್ನು ಅನಹರ್ಗೊಳಿಸಲು ಸಾಧ್ಯವಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ನಬಮ್‌ ರೆಬಿಯಾ ಪ್ರಕರಣದ ತೀರ್ಪಿನ ಕುರಿತಂತೆ ವಿವಿಧ ನ್ಯಾಯಮೂರ್ತಿಗಳು ನೀಡಿದ್ದ ಬೇರೆ ಬೇರೆ ಅಭಿಪ್ರಾಯಗಳನ್ನು ಇಂದಿನ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಪ್ರಸ್ತಾಪಿಸಿತು.

“ನಬಮ್‌ ರೆಬಿಯಾ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ಮೂರು ತೀರ್ಪುಗಳನ್ನು ನೀಡಿತು. ನ್ಯಾ. ಜೆ ಎಸ್‌ ಖೇಹರ್‌ ಹಾಗೂ ನ್ಯಾ ದೀಪಕ್‌ ಮಿಶ್ರಾ ಅವರು ʼತನ್ನನ್ನು ಅನರ್ಹಗೊಳಿಸುವಂತೆ ನೋಟಿಸ್‌ ಬಂದಾಗ ಸ್ಪೀಕರ್‌ ಬೇರಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಅಭಿಪ್ರಾಯಪಟ್ಟಿತು. ನ್ಯಾ ಮದನ್‌ ಲೋಕೂರ್‌ ಅವರು "ನ್ಯಾ. ಖೇಹರ್‌ ಮತ್ತು ನ್ಯಾ. ಮಿಶ್ರಾ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಆ ಮೇಲ್ಮನವಿಗಳಲ್ಲಿ ಉದ್ಭವಿಸುವುದಿಲ್ಲ ಎಂದಿದ್ದರು” ಎಂಬುದಾಗಿ ಸುಪ್ರೀಂ ಕೋರ್ಟ್‌ ವಿವರಿಸಿತು.

ಈ ಹಿನ್ನೆಲೆಯಲ್ಲಿ ನಬಿಮ್‌ ರೆಬಿಯಾ ಪ್ರಕರಣದ ತೀರ್ಪನ್ನು ಮತ್ತೆ ಪರಿಶೀಲಿಸುವ ವಿಚಾರವನ್ನು (ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳಿಗೆ ಸಂಬಂಧಿಸಿದ) ಪ್ರಕರಣದಿಂದ ಪ್ರತ್ಯೇಕವಾಗಿ ನೋಡಲಾಗದು. ಅದರ ಅರ್ಹತೆಯೊಂದಿಗೇ ಇದನ್ನೂ ಆಲಿಸಲಾಗುವುದು” ಎಂದು ನ್ಯಾಯಾಲಯ ಹೇಳಿತು.

Related Stories

No stories found.
Kannada Bar & Bench
kannada.barandbench.com