[ಮಹಾ ರಾಜಕಾರಣ] ಮುಖ್ಯಮಂತ್ರಿ ಬದಲಾದ ಮಾತ್ರಕ್ಕೆ ದೇವಲೋಕ ಬೀಳದು ಎಂದ ಸಾಳ್ವೆ; ಇದು 'ಯೋಜಿತ ಬಹುಮತ'ವೆಂದ ಸಿಂಘ್ವಿ

ಮಹಾರಾಷ್ಟ್ರ ರಾಜಕಾರಣದ ವಿವಿಧ ಬಣಗಳು ಎತ್ತಿರುವ ಪ್ರಮುಖ ಕಾನೂನು ಪ್ರಶ್ನೆಗಳ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ವಿವಿಧ ಪಕ್ಷಕಾರರ ಪರವಾಗಿ ಮಂಡನೆಯಾದ ಪ್ರಮುಖ ವಾದಗಳ ಮಾಹಿತಿ ಇಲ್ಲಿದೆ.
Maharashtra Politics
Maharashtra Politics

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಬುಧವಾರ ಎಲ್ಲ ಪಕ್ಷಕಾರರಿಗೆ ನೋಟಿಸ್‌ ಜಾರಿಗೊಳಿಸಿದ್ದು ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಕಾಲಾವಕಾಶ ಕಲ್ಪಿಸಿದೆ.

ಪ್ರಕರಣಗಳ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೋಹ್ಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಮನವಿಗಳಲ್ಲಿ ಎತ್ತಲಾಗಿರುವ ಕೆಲ ವಿಷಯಗಳ ಬಗ್ಗೆ ವಿಸ್ತೃತ ಪೀಠದ ವಿಚಾರಣೆಯ ಅಗತ್ಯವಿರುವುದನ್ನು ಸಹ ಗಮನಿಸಿತು.

ಬಹುಮತದ ಗುಂಪು ಮಾಡಿರುವ ನೇಮಕಾತಿಗಳನ್ನು ಅಲ್ಪಮತದ ಗುಂಪು ವಿಸರ್ಜಿಸಬಹುದೇ ಎನ್ನುವ ಪ್ರಶ್ನೆಯನ್ನು ಸಹ ಈ ಸಂದರ್ಭದಲ್ಲಿ ನಿರ್ಧರಿಸಬೇಕಿದೆ ಎಂದು ಪೀಠವು ಅಭಿಪ್ರಾಯಪಟ್ಟಿತು. ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ 1ಕ್ಕೆ ಮುಂದೂಡಲಾಗಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕ್‌ನಾಥ್‌ ಶಿಂಧೆ ಹಾಗೂ ಶಿವಸೇನೆಯ ಇತರ 14 ಮಂದಿ ಶಾಸಕರು ತಮ್ಮನ್ನು ಅನರ್ಹಗೊಳಿಸಲು ವಿಧಾನಸಭೆಯ ಉಪಸ್ಪೀಕರ್‌ ಅವರು ಚಾಲನೆ ನೀಡಿದ್ದ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಹಿತ ಮಹಾರಾಷ್ಟ್ರ ರಾಜಕಾರಣದಲ್ಲಿ ಉದ್ಭವಿಸಿದ್ದ ಬಿಕ್ಕಟ್ಟಿನ ಸಂಬಂಧ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಬುಧವಾರ ಒಟ್ಟಿಗೆ ನಡೆಸಿತು.

ವಿಚಾರಣೆಯ ವೇಳೆ ವಿವಿಧ ಪಕ್ಷಕಾರರ ಪರ ಮಂಡಿಸಲಾದ ಪ್ರಮುಖ ವಾದಗಳ ಸಾರಾಂಶವನ್ನು ಇಲ್ಲಿ ಪಟ್ಟಿ ಮಾಡಲಗಿದೆ. ಮೊದಲಿಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಬಣವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದಾಂಶಗಳು:

  • ವ್ಹಿಪ್‌ ಉಲ್ಲಂಘಿಸಿ ಅದಕ್ಕೆ ವಿರುದ್ಧವಾಗಿ ಶಿವಸೇನೆಯ ಹಲ ಸದಸ್ಯರು ಮಾಡಿರುವ ಮತದಾನವು ಹತ್ತನೇ ಶೆಡ್ಯೂಲ್‌ಗೆ (ಪಕ್ಷಾಂತರದ ಕಾರಣಕ್ಕೆ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಲು ಇರುವ ನಿಯಮಾವಳಿಗಳು) ವಿರುದ್ಧವಾಗಿದೆ.

  • ಜನರಿಂದ ಆಯ್ಕೆಯಾಗಿರುವ ತನ್ನ ಪಕ್ಷದಿಂದ ಪ್ರತ್ಯೇಕಿತಗೊಂಡ ವ್ಯಕ್ತಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಬಾರದಿತ್ತು. ಹತ್ತನೇ ಶೆಡ್ಯೂಲ್‌ ಪ್ರಕಾರ ಅವರು ಅನರ್ಹರು.

  • ಹೀಗೆ ಮುಂದುವರೆದರೆ, ಜನತೆ ನೀಡಿರುವ ತೀರ್ಪು ಏನಾಗಬೇಕು? ಹತ್ತನೇ ಶೆಡ್ಯೂಲ್‌ನಲ್ಲಿನ ನ್ಯೂನತೆ ಬಳಸಿಕೊಂಡು ಪಕ್ಷಾಂತರವನ್ನು ಪ್ರಚೋದಿಸಲಾಗುತ್ತಿದೆ.

ಶಿವಸೇನೆಯ ಮಾಜಿ ಮುಖ್ಯ ಸಚೇತಕ ಸುನಿಲ್‌ ಪ್ರಭು ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರ ವಾದ ಮಂಡನೆಯ ಪ್ರಮುಖ ಅಂಶಗಳು:

  • ಶಿವಸೇನೆಯಿಂದ ಹೊರನಡೆದಿರುವ ಬಣವು ಗುವಾಹಟಿಗೆ ಪಯಣ ಬೆಳೆಸುವುದಕ್ಕೂ ಮುನ್ನ ಉಪ ಸ್ಪೀಕರ್‌ ಅವರಿಗೆ ಪತ್ರವೊಂದನ್ನು ಅನಧಿಕೃತ ಇಮೇಲ್‌ ಮೂಲಕ ಕಳುಹಿಸುತ್ತದೆ. ಅದರಲ್ಲಿ ಉಪಸ್ಪೀಕರ್‌ ಅವರನ್ನು ತೆಗೆದುಹಾಕಲು ನೋಟಿಸ್‌ ನೀಡಲಾಗಿರುತ್ತದೆ. ಅನಧಿಕೃತ ಇಮೇಲ್‌ನಿಂದ ಕಳುಹಿಸಲಾದ ಈ ಪತ್ರವನ್ನು ಉಪ ಸ್ಪೀಕರ್ ಅವರು ಅಧಿಕೃತವಲ್ಲ ಎಂದು ಹೇಳುತ್ತಾರೆ. ವಿಪರ್ಯಾಸವೆಂದರೆ, ಇದೇ ಪತ್ರವನ್ನು ಈಗ ಶಾಸನಸಭೆಯ ಸ್ಪೀಕರ್‌ ಅವರು ಅಫಿಡವಿಟ್‌ ಆಗಿ ಸಲ್ಲಿಸಿದ್ದಾರೆ. ನಬಾಮ್‌ ರೆಬಿಯಾ ಪ್ರಕರಣದಲ್ಲಿನ ತತ್ವವನ್ನು ಇಲ್ಲಿ ಅನ್ವಯಿಸಲಾಗದು. ಅಪ್ರಾಮಾಣಿಕ ಸನ್ನಿವೇಶವೊಂದನ್ನು ಸೃಷ್ಟಿಸಲಾಗದು...

  • ಶಿಂಧೆಯವರ ಬಹುಮತವು "ಯೋಜಿತ ಬಹುಮತವಾಗಿದೆ" ಸಹಜವಾದುದಲ್ಲ. ಬಿಜೆಪಿಯೊಂದಿಗೆ ಶಿಂಧೆ ಬಣವು ವಿಲೀನವಾಗಿಲ್ಲ. ಹಾಗಾಗಿ, ಈ ಶಾಸಕರು ಪಕ್ಷಾಂತರ ನಿಷೇಧದ ಹಿನ್ನೆಲೆಯಲ್ಲಿ ಅನರ್ಹತೆಗೆ ಅರ್ಹರು.

  • ಘನತೆವೆತ್ತ ನ್ಯಾಯಮೂರ್ತಿಗಳು ಪ್ರಕ್ರಿಯಾ ಶುದ್ಧತೆಯನ್ನು ಎತ್ತಿಹಿಡಿಯುವ ಮೂಲಕ ಹತ್ತನೇ ಶೆಡ್ಯೂಲ್‌ಅನ್ನು ಎತ್ತಿ ಹಿಡಿಯಬೇಕಿದೆ. ಇಲ್ಲವಾದಲ್ಲಿ ಇದು ವ್ಯವಸ್ಥೆಯ ಅಪಹಾಸ್ಯವಾಗುತ್ತದೆ.

ಶಿಂಧೆ ಬಣದ ಪರವಾಗಿ ವಾದಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆಯವರ ಮಂಡನೆಯ ಪ್ರಮುಖ ಅಂಶಗಳು:

  • ಮುಖ್ಯಮಂತ್ರಿ ಬದಲಾದ ಮಾತ್ರಕ್ಕೆ ದೇವಲೋಕವೇನೂ ಬಿದ್ದು ಹೋಗುವುದಿಲ್ಲ. ಸ್ಪೀಕರ್‌ ಅವರು ನಿಯಮಾನುಸಾರ ಆಯ್ಕೆಯಾಗಿದ್ದಾರೆ ಎನ್ನುವ ವಿಷಯವನ್ನಷ್ಟೇ ಚರ್ಚಿಸಬೇಕು, ಅದರ ಹೊರತಾಗಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಇನ್ನು ಮುಂತಾದ ವಿಷಯಗಳನ್ನಲ್ಲ.

  • ನೀವು ಪಕ್ಷದಿಂದ ಹೊರಗಿದ್ದ ಮಾತ್ರಕ್ಕೆ ನಿಮ್ಮನ್ನು ಪಕ್ಷದಿಂದ ತೆಗೆದುಹಾಕಲಾಗುತ್ತದೆ ಎನ್ನುವ ಅಂಶವನ್ನು ಹತ್ತನೇ ಶೆಡ್ಯೂಲ್‌ನಿಂದ ತೆಗೆದು ಹಾಕಲಾಗಿದೆ. ನ್ಯಾಯಾಲಯಗಳು ಎಂದಿಗೂ ರಾಜಕೀಯ ಪಕ್ಷಗಳ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸಿಲ್ಲ.

  • ಪಕ್ಷದ ಆಂತರಿಕ ಪ್ರಜಾಪ್ರಭುತ್ವವು ನನಗೆ ದನಿ ಎತ್ತುವ ಅವಕಾಶ ನೀಡಿದೆ. ಲಕ್ಷಣ ರೇಖೆಯನ್ನು ದಾಟದೆ ನನ್ನ ದನಿಯನ್ನು ಎತ್ತುವುದು ಪಕ್ಷಾಂತರವಾಗಲಾರದು.

ಪಕ್ಷಕಾರರ ವಾದಗಳನ್ನು ಆಲಿಸಿದ ಬಳಿಕ ಸಿಜೆಐ ಅವರು ಕೆಲವೊಂದು ಪ್ರಮುಖ ವಿಷಯಗಳನ್ನು ವಿಸ್ತೃತ ಪೀಠದ ಮುಂದಿರಿಸಬೇಕಾದ ಸಾಧ್ಯತೆಯ ಬಗ್ಗೆ ಉಲ್ಲೇಖಿಸಿದರು.

Related Stories

No stories found.
Kannada Bar & Bench
kannada.barandbench.com