[ಮಹಾರಾಷ್ಟ್ರ ರಾಜಕೀಯ] ಅನರ್ಹತೆ ಮನವಿಗಳ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದಂತೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್‌ ಆದೇಶ

ಪ್ರಕರಣದ ವಿಚಾರಣೆಗೆ ಪ್ರತ್ಯೇಕ ಪೀಠ ರಚನೆಯ ಅಗತ್ಯವಿದ್ದು, ಅದನ್ನು ಪಟ್ಟಿ ಮಾಡಲು ಸ್ವಲ್ಪ ಸಮಯಬೇಕಾಗಬಹುದು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
Eknath Shinde, Uddhav Thackeray and Supreme Court
Eknath Shinde, Uddhav Thackeray and Supreme Court

ಶಿವಸೇನೆಯ 53 ಶಾಸಕರಿಗೆ ಅನರ್ಹತೆ ನೋಟಿಸ್‌ಗಳನ್ನು ಜಾರಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮಕೈಗೊಳ್ಳದಂತೆ ಮಹಾರಾಷ್ಟ್ರದ ನೂತನ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರಿಗೆ ಸೋಮವಾರ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಣದ ಸುನಿಲ್‌ ಪ್ರಭು ಸಲ್ಲಿಸಿರುವ ಮನವಿಯನ್ನು ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ನೇತೃತ್ವದ ಪೀಠದ ಮುಂದೆ ಉಲ್ಲೇಖಿಸಿದರು. ಪ್ರಭು ಅವರು ಶಿವಸೇನೆಯ ಮುಖ್ಯ ವಿಪ್‌ ಆಗಿದ್ದಾರೆ.

“ಸ್ಪೀಕರ್‌ ಮುಂದೆ ನಾಳೆ ಅನರ್ಹತೆ ಮನವಿಯನ್ನು ಪಟ್ಟಿ ಮಾಡಲಾಗಿದೆ. ಪ್ರಕರಣ ಇತ್ಯರ್ಥವಾಗುವವರೆಗೆ ಅನರ್ಹತೆ ಮಾಡಬಾರದು” ಎಂದು ಸಿಬಲ್‌ ಕೋರಿದರು.

ಆಗ ಸಿಜೆಐ ಅವರು “ಮನವಿಯನ್ನು ಇತ್ಯರ್ಥಪಡಿಸುವವರೆಗೆ ಯಾವುದೇ ತೀರ್ಮಾನ ಮಾಡದಂತೆ ಸ್ಪೀಕರ್‌ಗೆ ದಯಮಾಡಿ ತಿಳಿಸಿ” ಎಂದು ಮಹಾರಾಷ್ಟ್ರದ ರಾಜ್ಯಪಾಲರನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಹೇಳಿದರು.

“ಈ ಪ್ರಕರಣದ ವಿಚಾರಣೆ ನಡೆಸಲು ಪ್ರತ್ಯೇಕ ಪೀಠವನ್ನು ರಚಿಸಬೇಕಿದೆ. ಪ್ರಕರಣ ಪಟ್ಟಿ ಮಾಡಲು ಸ್ವಲ್ಪ ಸಮಯಬೇಕಿದೆ. ನಾಳೆ ಆಗದು. ಆದರೆ, ನಾವು ಏನು ಹೇಳಿದ್ದೇವೆಯೋ ಅದನ್ನು ಸ್ಪೀಕರ್‌ಗೆ ತಿಳಿಸಿ” ಎಂದು ಸಿಜೆಐ ಹೇಳಿದರು.

ಡೆಪ್ಯುಟಿ ಸ್ಪೀಕರ್‌ ಅವರು ಶಿವಸೇನೆಯ ಬಂಡಾಯ ಶಾಸಕರನ್ನು ಅನರ್ಹಗೊಳಿಸಿರುವುದನ್ನು ಪ್ರಸ್ನಿಸಿರುವ ಎರಡು ಮನವಿಗಳು ನ್ಯಾಯಾಲಯದ ಮುಂದಿವೆ. ಬಹುಮತ ಸಾಬೀತುಪಡಿಸುವಂತೆ ಕಾನೂನುಬಾಹಿರವಾಗಿ ಮಹಾರಾಷ್ಟ್ರ ರಾಜ್ಯಪಾಲರು ಆದೇಶಿಸಿರುವುದನ್ನು ಪ್ರಶ್ನಿಸಿ ಸುನಿಲ್‌ ಪ್ರಭು ಅವರು ಸಲ್ಲಿಸಿರುವ ಮೂರನೇ ಮನವಿಯು ಸರ್ವೋಚ್ಚ ನ್ಯಾಯಾಲಯದ ಮುಂದಿದೆ. ಅಜಯ್‌ ಚೌಧರಿ ಮತ್ತು ಸುನಿಲ್‌ ಅವರನ್ನು ಕ್ರಮವಾಗಿ ಶಿವಸೇನೆಯ ಸದನದ ನಾಯಕ ಮತ್ತು ಮುಖ್ಯ ವಿಪ್‌ ಸ್ಥಾನದಿಂದ ಹೊಸ ಸ್ಪೀಕರ್‌ ವಜಾ ಮಾಡಿದ್ದನ್ನು ಪ್ರಶ್ನಿಸಿ ಪ್ರಭು ಸಲ್ಲಿಸಿರುವ ನಾಲ್ಕನೇ ಮನವಿಯು ಸುಪ್ರೀಂ ಕೋರ್ಟ್‌ ಮುಂದಿದೆ.

Related Stories

No stories found.
Kannada Bar & Bench
kannada.barandbench.com