ರಾಜ್ಯಪಾಲರಿಗೆ ರಾಜಕಾರಣ, ಪಕ್ಷಗಳ ಗೊಡವೆ ಬೇಡ: ಮಹಾರಾಷ್ಟ್ರ ರಾಜಕೀಯ ಕುರಿತಾದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌

ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ಬಣಗಳ ನಡುವಿನ ಭಿನ್ನಾಭಿಪ್ರಾಯದಿಂದ ಉದ್ಭವಿಸಿದ ಮಹಾರಾಷ್ಟ್ರ ರಾಜಕೀಯ ಪ್ರಕರಣದ ತೀರ್ಪಿನಲ್ಲಿ ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
Bhagat Singh Koshyari, Eknath Shinde and Uddhav Thackeray
Bhagat Singh Koshyari, Eknath Shinde and Uddhav Thackeray

ರಾಜ್ಯಪಾಲರಿಗೆ ರಾಜಕೀಯ ರಂಗ ಪ್ರವೇಶಿಸಲು ಅಥವಾ ಯಾವುದೇ ಪಕ್ಷದ ಆಂತರಿಕ ಇಲ್ಲವೇ ವಿವಿಧ ಪಕ್ಷಗಳ ನಡುವಿನ ವಿವಾದಗಳಲ್ಲಿ ಪಾಲ್ಗೊಳ್ಳಲು ಯಾವುದೇ ಅಧಿಕಾರ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ [ಸುಭಾಷ್ ದೇಸಾಯಿ ಮತ್ತು ಮಹಾರಾಷ್ಟ್ರ ಸರ್ಕಾರ ಪ್ರಧಾನ ಕಾರ್ಯದರ್ಶಿ ಇನ್ನಿತರರ ನಡುವಣ ಪ್ರಕರಣ].

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಹಾಲಿ ಸಿಎಂ ಏಕನಾಥ್ ಶಿಂಧೆ ನಡುವಿನ ಭಿನ್ನಾಭಿಪ್ರಾಯದಿಂದ ಉಂಟಾದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನಿಂದ ಉದ್ಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸದನದಲ್ಲಿ ಬಹುಮತ ಸಾಬೀತುಪಡಿಸಲು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ಕರೆ ನೀಡುವಾಗ ಆಗಿನ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಅವರು ಕೈಗೊಂಡಿದ್ದ ನಿರ್ಧಾರವನ್ನು ನ್ಯಾಯಾಲಯ ನಿರ್ದಿಷ್ಟವಾಗಿ ಪ್ರಸ್ತಾಪಿಸಿದೆ.

ತೀರ್ಪಿನ ಪ್ರಮುಖಾಂಶಗಳು

 • ರಾಜ್ಯಪಾಲರು ತಮಗೆ ನೀಡದ ಅಧಿಕಾರವನ್ನು ಬಳಸಲು ಸಾಧ್ಯವಿಲ್ಲ.. ರಾಜ್ಯಪಾಲರು ರಾಜಕೀಯ ಕ್ಷೇತ್ರಕ್ಕೆ ಇಳಿದು ಪಕ್ಷದೊಳಗಿನ ಇಲ್ಲವೇ ಪಕ್ಷಗಳ ನಡುವಿನ ವಿವಾದದಲ್ಲಿ ಪಾತ್ರ ವಹಿಸಲು ಅರ್ಹರಲ್ಲ, ಕೆಲವು ಸದಸ್ಯರು ಶಿವಸೇನೆ ತೊರೆಯಲು ಬಯಸುತ್ತಾರೆ ಎಂಬುದನ್ನು ಆಧಾರವಾಗಿಟ್ಟುಕೊಂಡು ಅವರು ಕಾರ್ಯನಿರ್ವಹಣೆ ಮಾಡುವುದು ಸಾಧ್ಯವಿಲ್ಲ.

 • ಸರ್ಕಾರ ಬಹುಮತ ಕಳೆದುಕೊಳ್ಳುವುದಕ್ಕೂ ಹಾಲಿ ಸರ್ಕಾರದ ಶಾಸಕರು ಅತೃಪ್ತಿ ಹೊಂದಿರುವುದಕ್ಕೂ ವ್ಯತ್ಯಾಸವಿದೆ.

 • ಸದಸ್ಯರ ಅತೃಪ್ತಿಯು ವ್ಯಕ್ತಿನಿಷ್ಠ ಅಂಶವಾಗಿದ್ದು ಇದನ್ನೇ ಆಧರಿಸಿ ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಸೂಚಿಸಬಾರದಿತ್ತು. ಬದಲಾಗಿ, ವಸ್ತುನಿಷ್ಠ ಮಾನದಂಡಗಳನ್ನು ಅವಲಂಬಿಸಬೇಕಾಗಿತ್ತು.

 • ಶಿವಸೇನೆಯ ಶಿಂಧೆ ಬಣದ 34 ಶಾಸಕರ ಕೋರಿಕೆಯ ಮೇರೆಗೆ ಮಹರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ವಿಶ್ವಾಸಮತ ಯಾಚನೆಗೆ ಸೂಚಿಸಿದ್ದು ಸರಿಯಲ್ಲ.

 • ಉದ್ಧವ್ ಠಾಕ್ರೆ ಅವರು ಸದನದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ನಿರ್ಣಯಕ್ಕೆ ಬರಲು ಅಗತ್ಯವಾದ ಯಾವುದೇ ವಾಸ್ತವಿಕ ಮಾಹಿತಿ  ರಾಜ್ಯಪಾಲರ ಬಳಿ ಇರಲಿಲ್ಲ.   

 • ಠಾಕ್ರೆ ಸರ್ಕಾರದ ಬಹುಮತವನ್ನು ರಾಜ್ಯಪಾಲರು ಅನುಮಾನಿಸುವುದಕ್ಕೆ ಸಾಧ್ಯವಿರಲಿಲ್ಲ. ಕೆಲವು ಶಾಸಕರು ಅತೃಪ್ತಿ ಹೊಂದಿದ್ದಾರೆ ಎನ್ನುವುದಷ್ಟೇ ವಿಶ್ವಾಸಮತ ಯಾಚನೆಗೆ ಸೂಚಿಸಲು ಸಾಕಾಗುವುದಿಲ್ಲ.

 • ರಾಜ್ಯಪಾಲರು ವಸ್ತುನಿಷ್ಠ ಮಾನದಂಡಗಳನ್ನು ಬಳಸಬೇಕು, ವ್ಯಕ್ತಿನಿಷ್ಠ ತೃಪ್ತಿಯನ್ನಲ್ಲ.

 • ಶಾಸಕರು ಸರ್ಕಾರ ತೊರೆಯಲು ಬಯಸಿದ್ದರು ಎಂದು ಒಂದು ವೇಳೆ ಭಾವಿಸಿದರೂ, ಅದು ಕೇವಲ ಅತೃಪ್ತಿಯನ್ನು ಮಾತ್ರ ಬಿಂಬಿಸುತ್ತದೆ.

 • ಪಕ್ಷದೊಳಗಿನ ಭಿನ್ನಾಭಿಪ್ರಾಯ ಅಥವಾ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಮಾಧ್ಯಮವಾಗಿ ವಿಶ್ವಾಸಮತ ಯಾಚಿಸುವಂತೆ ಸೂಚಿಸಲು ಬಳಸುವಂತಿಲ್ಲ.

 • ಹಾಗಾಗಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ವಿಶ್ವಾಸಮತ ಪರೀಕ್ಷೆಗೆ ಕರೆ ನೀಡಿದ್ದು ತಪ್ಪು

 • ಉದ್ಧವ್ ಠಾಕ್ರೆ ಬಹುಮತ ಕಳೆದುಕೊಂಡಿದ್ದಾರೆ ಎಂದು ರಾಜ್ಯಪಾಲರು ತಪ್ಪಾಗಿ ತೀರ್ಮಾನಿಸಿದ್ದಾರೆ.

 • ಭದ್ರತೆಯ ಕೊರತೆಯು ಸರ್ಕಾರ ಬಿದ್ದಿದೆ ಎಂದು ತೀರ್ಮಾನಿಸಲು ಕಾರಣವಾಗಬಾರದು ಮತ್ತು ಇದು ರಾಜ್ಯಪಾಲರು ಅವಲಂಬಿತವಾಗುವ ಹೆಚ್ಚುವರಿ ಕಾರಣವಲ್ಲ.

 • ರಾಜ್ಯಪಾಲರ ವಿವೇಚನಾಧಿಕಾರ ಸಂವಿಧಾನದ 163ನೇ ವಿಧಿಯಡಿ ಸ್ಪಷ್ಟವಾಗಿ ಹೇಳಲಾದ ವಿಷಯಗಳಿಗೆ ಮಾತ್ರವೇ ಸಂಬಂಧಿಸಿದೆ.

 • ಬಹುಮತ ಸಾಬೀತಿಗೆ ಆದೇಶ ನೀಡುವಲ್ಲಿ ರಾಜ್ಯಪಾಲರು ಎಡವಿದ್ದರೂ ಠಾಕ್ರೆ ಅವರು ವಿಶ್ವಾಸ ಮತ ಯಾಚಿಸದೆ ರಾಜೀನಾಮೆ ನೀಡಿದ ಕಾರಣ ಯಥಾಸ್ಥಿತಿಗೆ ಮರಳಲು ಸಾಧ್ಯವಿಲ್ಲ. ಹೀಗಾಗಿ ಶಿಂಧೆ ಸರ್ಕಾರ ಅಧಿಕಾರದಲ್ಲಿ ಮುಂದುವರೆಯಬಹುದು.

Kannada Bar & Bench
kannada.barandbench.com