ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದ ಮಹಾರಾಷ್ಟ್ರ ಸ್ಪೀಕರ್; ಶಾಸಕರ ವಿರುದ್ಧದ ಅನರ್ಹತೆ ಅರ್ಜಿ ವಜಾ

ಬಣಗಳು ಹೊರಹೊಮ್ಮಿದ ನಂತರ ಶಿಂಧೆ ಬಣವು 55 ಶಾಸಕರ ಪೈಕಿ 37 ಶಾಸಕರ ಬಹುಮತ ಗಳಿಸಿತ್ತು ಎಂದು ಸ್ಪೀಕರ್ ರಾಹುಲ್ ನರ್ವೇಕರ್ ಒತ್ತಿಹೇಳಿದರು.
ಏಕನಾಥ್ ಶಿಂಧೆ, ಉದ್ಧವ್ ಠಾಕ್ರೆ ಮತ್ತು ಶಿವಸೇನೆ ಪಕ್ಷ
ಏಕನಾಥ್ ಶಿಂಧೆ, ಉದ್ಧವ್ ಠಾಕ್ರೆ ಮತ್ತು ಶಿವಸೇನೆ ಪಕ್ಷ

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದ್ದ ಶಿವಸೇನೆಯ ವಿಭಜನೆಯಿಂದ ಉದ್ಭವಿಸಿದ್ದ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನರ್ವೇಕರ್ ಬುಧವಾರ ತೀರ್ಪು ನೀಡಿದ್ದು ಕುರಿತು ಶಿವಸೇನೆಯ ಏಕನಾಥ್ ಶಿಂಧೆ ಬಣವೇ ಮೂಲ ಶಿವಸೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ಉದ್ಧವ್ ಠಾಕ್ರೆ ಬಣವು ಶಿಂಧೆ ಬಣದ ಶಾಸಕರ ವಿರುದ್ಧ ಸಲ್ಲಿಸಿದ ಅನರ್ಹತೆ ಅರ್ಜಿಗಳನ್ನು ಮತ್ತು ಠಾಕ್ರೆ ಬಣದ ವಿರುದ್ಧ ಶಿಂಧೆ ಬಣ ಸಲ್ಲಿಸಿದ ಅನರ್ಹತೆ ಅರ್ಜಿಗಳನ್ನು ವಜಾಗೊಳಿಸಿದರು.

ಶಿವಸೇನೆಯು 2022 ರ ಜೂನ್‌ನಲ್ಲಿ ಏಕನಾಥ್‌ ಶಿಂಧೆ ಹಾಗೂ ಉದ್ಧವ್‌ ಠಾಕ್ರೆ ಬಣಗಳಾಗಿ ವಿಭಜನೆ ಹೊಂದಿದ ನಂತರ ಶಿಂಧೆ ಬಣವು 55 ಶಾಸಕರ ಪೈಕಿ 37 ಬಹುಮತವನ್ನು ಹೊಂದಿತ್ತು ಮತ್ತು ಇದರ ಪರಿಣಾಮವಾಗಿ ಪಕ್ಷದ ವಿಪ್‌ ಆಗಿದ್ದ ಸುನಿಲ್ ಪ್ರಭು ಅವರ ಅಧಿಕಾರ ಅಂತ್ಯಗೊಂಡಿತು ಎಂದು ನರ್ವೇಕರ್ ಒತ್ತಿಹೇಳಿದರು.

ಇದಲ್ಲದೆ, ಭರತ್ ಗೋಗಾವಳೆ ಅವರನ್ನು ಪಕ್ಷದ ವಿಪ್ ಆಗಿ ಸೂಕ್ತ ರೀತ್ಯಾ ನೇಮಿಸಲಾಗಿದೆ ಮತ್ತು ಏಕನಾಥ್ ಶಿಂಧೆ ಅವರನ್ನು ನಾಯಕರಾಗಿ ಸೂಕ್ತ ರೀತ್ಯಾ ನೇಮಿಸಲಾಗಿದೆ ಎಂದು ಅವರು ತೀರ್ಪು ನೀಡಿದರು.

ಶಿವಸೇನೆ ಶಾಸಕಾಂಗ ಪಕ್ಷದ (ಎಸ್ಎಸ್ಎಲ್ಪಿ) ಸಭೆಯನ್ನು ಕರೆಯಲು ಸುನಿಲ್ ಪ್ರಭು ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ನರ್ವೇಕರ್ ಅಭಿಪ್ರಾಯಪಟ್ಟರು ಮತ್ತು ಸಭೆ ಕರೆಯಲಾದ ವಾಟ್ಸಾಪ್ ಸಂದೇಶವನ್ನು 12 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಕಳುಹಿಸಲಾಗಿದೆ ಎನ್ನುವ ಅಂಶವನ್ನು ಒತ್ತಿ ಹೇಳಿದರು.

"ವಾಟ್ಸಾಪ್ ಸಂದೇಶವನ್ನು ಪರಿಶೀಲಿಸಿದಾಗ ಈ ಸಂದೇಶವನ್ನು ಮಧ್ಯಾಹ್ನ 12.30 ಕ್ಕೆ ನಿಗದಿಯಾಗಿದ್ದ ಸಭೆಗೆ ಕಳುಹಿಸಲಾಗಿದೆ ಎಂದು ತೋರಿಸುತ್ತದೆ. ಶಿಂಧೆ ಬಣದ ಯಾವುದೇ ಸದಸ್ಯರಿಗೆ ಸಭೆಯ ನೋಟಿಸ್ ನೀಡಲಾಗಿಲ್ಲ. ಅವರ ಅನರ್ಹತೆ ಸಲ್ಲಿಕೆಯನ್ನು ತಿರಸ್ಕರಿಸಲಾಗುತ್ತದೆ. ಅವರು ಅನರ್ಹರಾಗಲು ಅರ್ಹರು ಎಂಬ ಅರ್ಜಿದಾರರ ಪ್ರಕರಣವನ್ನು ತಿರಸ್ಕರಿಸಬೇಕು" ಎಂದು ಅವರು ಹೇಳಿದರು.

ಇದಲ್ಲದೆ, ಪಕ್ಷದ ಸಭೆಗಳಿಗೆ ಹಾಜರಾಗದಿರುವುದು ಮತ್ತು ಶಾಸಕಾಂಗ ಸಭೆಯ ಹೊರಗೆ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಪಕ್ಷದ ಆಂತರಿಕ ವಿಷಯ ಎಂದು ಸ್ಪೀಕರ್ ತೀರ್ಪು ನೀಡಿದರು.

ಅಂತಹ ನಡವಳಿಕೆಯನ್ನು ಪಕ್ಷದೊಳಗಿನ ಭಿನ್ನಾಭಿಪ್ರಾಯದ ಕ್ರಿಯೆ ಎಂದು ಕರೆಯಬಹುದು ಮತ್ತು ಅದನ್ನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ರಕ್ಷಿಸಲಾಗುತ್ತದೆ ಎಂದರು.

ಅದರಂತೆ, ಶಿವಸೇನೆಯ ಏಕಕಾಂತ್ ಶಿಂಧೆ ಬಣದ 40 ಸದಸ್ಯರನ್ನು ಅನರ್ಹಗೊಳಿಸಲು ನರ್ವೇಕರ್ ನಿರಾಕರಿಸಿದರು.

ವಿಧಾನಸಭೆಯ 54 ಸದಸ್ಯರನ್ನು ಅನರ್ಹಗೊಳಿಸುವಂತೆ ಕೋರಿ ಶಿವಸೇನೆಯ ಎರಡು ಪ್ರತಿಸ್ಪರ್ಧಿ ಬಣಗಳು ಪರಸ್ಪರರ ವಿರುದ್ಧ ಸಲ್ಲಿಸಿದ 34 ಅರ್ಜಿಗಳ ಮೇಲೆ ನರ್ವೇಕರ್ ಅವರ ತೀರ್ಪು ಬಂದಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಎಂ.ಆರ್.ಶಾ, ಕೃಷ್ಣ ಮುರಾರಿ,  ಹಿಮಾ ಕೊಹ್ಲಿ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು ಮಹಾರಾಷ್ಟ್ರ ರಾಜಕೀಯ ಪ್ರಕರಣದ  ಕುರಿತಾದ ತನ್ನ ತೀರ್ಪಿನಲ್ಲಿ ಅನರ್ಹತೆ ವಿಷಯದ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಲು ವಿಧಾನಸಭೆಯ ಸ್ಪೀಕರ್ ಸೂಕ್ತ ಸಾಂವಿಧಾನಿಕ ಅಧಿಕಾರ ಎಂದು ತೀರ್ಪು ನೀಡಿದ್ದನ್ನು ಇಲ್ಲಿ ನೆನೆಯಬಹುದು. 

ಸ್ಪೀಕರ್ ಪ್ರಕರಣದ ಸಂಬಂಧ ವಿಚಾರಣೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪಗಳು ಸುಪ್ರೀಂ ಕೋರ್ಟ್ ಮುಂದೆ ಕೇಳಿಬಂದ ನಂತರ ಡಿಸೆಂಬರ್ 31 ರೊಳಗೆ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಪೀಠ ಸ್ಪೀಕರ್‌ಗೆ ಆದೇಶಿಸಿತ್ತು.

Related Stories

No stories found.
Kannada Bar & Bench
kannada.barandbench.com