ಸಾಬರಮತಿ ಆಶ್ರಮ ಪುನರಾಭಿವೃದ್ಧಿ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋದ ಮಹಾತ್ಮ ಗಾಂಧಿ ಮರಿ ಮೊಮ್ಮಗ

ಯೋಜನೆ ಆಶ್ರಮದ ಸರಳತೆಯನ್ನು ಅಳಿಸಿಹಾಕುತ್ತದೆ ಮತ್ತು ಅದನ್ನು ಗಾಂಧಿ ಮೌಲ್ಯಗಳಿಂದ ದೂರವಾದ ಸರ್ಕಾರಿ ನಿಯಂತ್ರಿತ ಸ್ಮಾರಕವಾಗಿ ಪರಿವರ್ತಿಸುತ್ತದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
Mahatma Gandhi
Mahatma Gandhi
Published on

ಸಾಬರಮತಿ ಆಶ್ರಮದ ಪುನರಾಭಿವೃದ್ಧಿ ಯೋಜನೆ ಎತ್ತಿಹಿಡಿದಿದ್ದ ಗುಜರಾತ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್‌ ಗಾಂಧಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ [ತುಷಾರ್‌ ಅರುಣ್‌ ಗಾಂಧಿ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ].

ಒಟ್ಟು ₹1,200 ಕೋಟಿ ವೆಚ್ಚದ ಯೋಜನೆ  ಆಶ್ರಮದ ಸರಳತೆಯನ್ನು ಅಳಿಸಿಹಾಕುತ್ತದೆ ಮತ್ತು ಅದನ್ನು ಗಾಂಧಿ ಮೌಲ್ಯಗಳಿಂದ ದೂರವಾದ ಸರ್ಕಾರಿ ನಿಯಂತ್ರಿತ ಸ್ಮಾರಕವಾಗಿ ಪರಿವರ್ತಿಸುತ್ತದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಯೋಜನೆ ಗಾಂಧಿ ಪರಂಪರೆಗೆ ಮಾಡಿದ ದ್ರೋಹವಾಗಿದೆ. ಮೂಲ ಆಶ್ರಮ ಇರುವ ಸ್ಥಳ ಬದಲಾಯಿಸುವುದು ಜೊತೆಗೆ  ವಸ್ತುಸಂಗ್ರಹಾಲಯ, ಆಂಫಿಥಿಯೇಟರ್‌ ಹಾಗೂ ಆಹಾರ ಕೇಂದ್ರದೊಂದಿಗೆ ಆಧುನೀಕೃತ ಅಂಗಳವಾಗಿ ಮರುರೂಪಿಸಲು ಸರ್ಕಾರ ಯತ್ನಿಸುತ್ತಿದೆ. ಗಾಂಧಿವಾದಿ ಚಿಂತನೆಗೆ ಯೋಜನೆಯಲ್ಲಿ ಕಿಮ್ಮತ್ತಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

 ಅರ್ಜಿಯ ಪ್ರಮುಖಾಂಶಗಳು

  • ಶತಮಾನದಷ್ಟು ಹಳೆಯದಾದ ಆಶ್ರಮದ ಸ್ಥಳಾಕೃತಿಯನ್ನು ಯೋಜನೆ ಬದಲಿಸುತ್ತದೆ ಜೊತೆಗೆ ಅದರ ಆಶಯಗಳಿಗೆ ಮಾರಕ.

  • ಯೋಜನೆಯಡಿ 40 ಕಟ್ಟಡಗಳನ್ನು ಸಂರಕ್ಷಿಸಲಾಗುತ್ತಿದ್ದು ಉಳಿದ 200 ನಿರ್ಮಿತಿಗಳನ್ನು ನಾಶ ಪಡಿಸಲಾಗುತ್ತಿದೆ ಇಲ್ಲವೇ ಮರುನಿರ್ಮಾಣ ಮಾಡಲಾಗುತ್ತಿದೆ.

  • ಹರಿಜನ ಕುಟುಂಬಗಳನ್ನು ಸ್ಥಳಾಂತರಿಸಿ ಪ್ರಸ್ತುತ ಈ ಪ್ರದೇಶದ ಮೇಲ್ವಿಚಾರಣೆ ಮಾಡುತ್ತಿರುವ ಗಾಂಧಿವಾದಿ ಟ್ರಸ್ಟ್‌ಗಳನ್ನು ಮೂಲೆಗುಂಪಾಗಿಸುತ್ತದೆ.

  • ಮುಖ್ಯಮಂತ್ರಿ ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದ ಸರ್ಕಾರಿ ಪ್ರಾಬಲ್ಯದ ಸಂಸ್ಥೆಗೆ ಹಸ್ತಾಂತರಿಸುವ ಉದ್ದೇಶದಿಂದ ಯೋಜನೆ ಹಮ್ಮಿಕೊಳ್ಳಲಾಗಿದ್ದು ಸರ್ಕಾರ ಸ್ಮಾರಕವನ್ನು ಸ್ವಾಧೀನಪಡಿಸಿಕೊಳ್ಳುವ ಕುತಂತ್ರ ರೂಪಿಸಿದೆ.

  • ಘನಶ್ಯಾಮದಾಸ್ ಬಿರ್ಲಾ ಅವರಿಗೆ 1933ರಲ್ಲಿ ಬರೆದ ಪತ್ರದಲ್ಲಿ ಆಶ್ರಮವನ್ನು ಗಾಂಧೀಜಿ ಹರಿಜನರಿಗೆ ವರ್ಗಾಯಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅವರ ಇಚ್ಛೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು.  

  • ಸ್ವತಂತ್ರ ಗಾಂಧಿವಾದಿಗಳು, ಇತಿಹಾಸಕಾರರು ಮತ್ತು ಆಶ್ರಮದ ಪಾಲಕರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬೇಕು. ಸರ್ಕಾರದ ನಿಯಂತ್ರಣ ಇರಬಾರದು.

ಪುನರಾಭಿವೃದ್ಧಿ ಪ್ರಶ್ನಿಸಿ ಈ ಹಿಂದೆ ತುಷಾರ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಸೆಪ್ಟೆಂಬರ್ 2022ರಲ್ಲಿ ತಿರಸ್ಕರಿಸಿತ್ತು. ಆದರೆ ಹೈಕೋರ್ಟ್‌ ತೀರ್ಪು ಆಶ್ರಮದ ಸಜೀವ ಸ್ಫೂರ್ತಿ ಮತ್ತು ಪರಂಪರೆಯನ್ನು ನಿರ್ಲಕ್ಷಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿರುವ ಅರ್ಜಿಯಲ್ಲಿ ವಿವರಿಸಲಾಗಿದೆ.

ಹೈಕೋರ್ಟ್‌ ತೀರ್ಪನ್ನು ರದ್ದುಗೊಳಿಸಿ, ಪ್ರಕರಣದ ವಿಚಾರಣೆ ಮುಗಿಯುವವರೆಗೆ ಎಲ್ಲಾ ನಿರ್ಮಾಣ ಅಥವಾ ಪುನರಾಭಿವೃದ್ಧಿ ಚಟುವಟಿಕೆಗಳಿಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com