ಆದೇಶ ಪಾಲಿಸಲು ವಿಫಲ; ಮಹೇಶ್​ ಜೋಶಿಗೆ ಒಟ್ಟು ರೂ. 50 ಸಾವಿರ ದಂಡ ವಿಧಿಸಿದ ಹೈಕೋರ್ಟ್‌

ಮಾಹಿತಿ ಅಧಿಕಾರಿಯು ಸಾರ್ವಜನಿಕರು ಕೇಳಿದ ಮಾಹಿತಿ ಒದಗಿಸಬೇಕಾಗುತ್ತದೆ. ಆದರೆ, ಮೇಲ್ಮನವಿ ಪ್ರಾಧಿಕಾರ ನೀಡಿದ ಆದೇಶ ಪಾಲಿಸುವ ಬದಲು ಅದನ್ನು ಪ್ರಶ್ನೆ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದಿರುವ ನ್ಯಾಯಾಲಯ.
Mahesh Joshi and Karnataka HC
Mahesh Joshi and Karnataka HC
Published on

ಮಾಹಿತಿ ಹಕ್ಕು ಕಾಯಿದೆಯಡಿ (ಆರ್‌ಟಿಐ) ಕೇಳಿದ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದ್ದ ಮೇಲ್ಮನವಿ ಪ್ರಾಧಿಕಾರದ ಸೂಚನೆ ಪಾಲಿಸದ ಮತ್ತು ಮಾಹಿತಿ ನೀಡಲು ವಿಳಂಬ ಮಾಡಿದ್ದರ ಪರಿಣಾಮವಾಗಿ ತಮಗೆ ವಿಧಿಸಲಾಗಿದ್ದ ದಂಡವನ್ನು ರದ್ದು ಪಡಿಸಲು ಕೋರಿದ್ದ ಬೆಂಗಳೂರಿನ ದೂರದರ್ಶನ ಕೇಂದ್ರದ ನಿವೃತ್ತ ಉಪ ಮಹಾನಿರ್ದೇಶಕ ಹಾಗೂ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದ (ಸಿಪಿಐಒ) ಮಹೇಶ್​ ಜೋಶಿ ಅವರನ್ನು ಇತ್ತೀಚೆಗೆ ತೀವ್ರ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್ ಒಟ್ಟು ರೂ. 50 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಮಾಹಿತಿ ಹಕ್ಕು ಕಾಯಿದೆಯಡಿ ಸ್ಥಾಪನೆಯಾಗಿರುವ ಎರಡನೇ ಮೇಲ್ಮನವಿ ಪ್ರಾಧಿಕಾರದ ಆದೇಶ ಪ್ರಶ್ನಿಸಿ ಮಹೇಶ್​ ಜೋಶಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎನ್ ಎಸ್ ಸಂಜಯ್​ ಗೌಡ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಸಾರ್ವಜನಿಕರು ಯಾವುದೇ ಮಾಹಿತಿ ಕೇಳಿದರೂ ಸಂಬಂಧ ಪಟ್ಟ ಅಧಿಕಾರಿಗಳು ನಿರಾಕರಿಸುವಂತಿಲ್ಲ. ಕೋರಿದ ಮಾಹಿತಿಗೆ ಕಾರಣವನ್ನು ನೀಡಿಲ್ಲ ಎಂಬುದಾಗಿ ಸಬೂಬು ನೀಡಿ ಮಾಹಿತಿ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಅರ್ಜಿದಾರರ ವಾದ ಅಂಗೀಕರಿಸಿದಲ್ಲಿ ಕಾಯಿದೆ ನಿಷ್ಪ್ರಯೋಜಕಗೊಳಿಸಬೇಕಾಗುತ್ತದೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಮಾಹಿತಿ ಅಧಿಕಾರಿಯು ಸಾರ್ವಜನಿಕರು ಕೇಳಿದ ಮಾಹಿತಿ ಒದಗಿಸಬೇಕಾಗುತ್ತದೆ. ಆದರೆ, ಮೇಲ್ಮನವಿ ಪ್ರಾಧಿಕಾರ ನೀಡಿದ ಆದೇಶ ಪಾಲಿಸುವ ಬದಲು ಅದನ್ನು ಪ್ರಶ್ನೆ ಮಾಡುವುದಕ್ಕೆ ಅರ್ಜಿದಾರರು ಮುಂದಾಗಿದ್ದಾರೆ. ಜತೆಗೆ, ಈ ಅರ್ಜಿ ಸಲ್ಲಿಸುವುದಕ್ಕೆ ಅವರು ಯಾವುದೇ ಅಧಿಕಾರ ಹೊಂದಿಲ್ಲ. ಹೀಗಾಗಿ, ಅರ್ಜಿ ವಿಚಾರಣೆಗೆ ಅರ್ಹವಿಲ್ಲ ಎಂದು 25 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ಅಲ್ಲದೇ, ಎರಡನೇ ಮೇಲ್ಮನವಿ ಪ್ರಾಧಿಕಾರ 25 ಸಾವಿರ ರೂಪಾಯಿ ದಂಡ ವಿಧಿಸಿದ್ದನ್ನು ಎತ್ತಿ ಹಿಡಿದಿದೆ. ಇದರಿಂದ ಜೋಶಿ ಅವರು ಒಟ್ಟು 50 ಸಾವಿರ ರೂಪಾಯಿ ದಂಡ ಪಾವತಿಸಬೇಕಿದೆ.

“ಸರ್ಕಾರದ ಕಾರ್ಯ ಮತ್ತು ಸೇವೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದಕ್ಕಾಗಿ ಮಾಹಿತಿ ಹಕ್ಕು ಕಾಯಿದೆ 2005ನ್ನು ಜಾರಿ ಮಾಡಲಾಗಿದ್ದು, ಇದಕ್ಕಾಗಿ ಮಾಹಿತಿ ಅಧಿಕಾರಿ ಹುದ್ದೆ ಸೃಷ್ಟಿಸಬೇಕು ಎಂದು ಕಾಯಿದೆಯಲ್ಲಿ ಹೇಳಲಾಗಿದೆ. ಸಾರ್ವಜನಿಕರು ಕೇಳಿದ ಮಾಹಿತಿ ಒದಗಿಸುವುದು ಈ ಅಧಿಕಾರಿಗಳ ಜವಾಬ್ದಾರಿಯಾಗಿದೆ” ಎಂದು ಪೀಠ ತಿಳಿಸಿದೆ.

ಪ್ರಕರಣಗಳ ಹಿನ್ನೆಲೆ: ದೂರದರ್ಶನಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು 2009ರ ಫೆಬ್ರವರಿ 26 ರಂದು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದು, ಮಾಹಿತಿ ಒದಗಿಸಿರುವುದಿಲ್ಲ. ಮೊದಲನೇ ಮೇಲ್ಮನವಿ ಪ್ರಾಧಿಕಾರವ 15 ದಿನದಲ್ಲಿ ಮಾಹಿತಿ ಒದಗಿಸುವಂತೆ 2009ರ ಮೇ 5 ರಂದು ಜೋಶಿ ಅವರಿಗೆ ನಿರ್ದೇಶಿಸಿತ್ತು. ಆದರೂ ಮಾಹಿತಿ ಒದಗಿಸಿರಲಿಲ್ಲ. ಇದರಿಂದ ಅರ್ಜಿದಾರರು 2009ರ ಸೆಪ್ಟೆಂಬರ್​ 21ರಂದು ಎರಡನೇ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಎರಡನೇ ಮೇಲ್ಮನವಿ ಪ್ರಾಧಿಕಾರವು ಕೇಳಿದ ಮಾಹಿತಿಯನ್ನು 10 ದಿನದಲ್ಲಿ ಒದಗಿಸುವಂತೆ ನಿರ್ದೇಶಿಸಿತ್ತು.

ಮಾಹಿತಿ ಹಕ್ಕು ಕಾಯಿದೆಯ ಮೂಲಕ ಕೆಲವರು ಮಾಹಿತಿ ಪಡೆದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ಅಧಿಕಾರಿ ಹೇಳಿದ್ದರು. ಹೀಗಾಗಿ, ಮಾಹಿತಿ ನಿರಾಕರಿಸಲಾಗಿತ್ತು ಎಂದು ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಐಪಿಒ) ಜೋಶಿ ಅವರು ಸಬೂಬು ನೀಡಿದ್ದರು.

ಉಚಿತ ಮಾಹಿತಿ ಒದಗಿಸುವಂತೆ ಸೂಚನೆ ಪ್ರಶ್ನೆ: 2008ರ ಆಗಸ್ಟ್​ 13ರಿಂದ ಆಗಸ್ಟ್​ 29ರ ವರೆಗೆ 9 ಮಂದಿ ಅರ್ಜಿ ಸಲ್ಲಿಸಿ, ವಿವಿಧ ರೀತಿಯ ಮಾಹಿತಿ ಕೋರಿದ್ದರು. ಅವರಿಗೂ ಮಾಹಿತಿ ನೀಡಿರಲಿಲ್ಲ. ಹೀಗಾಗಿ, ಅವರು ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು. ಈ ಸಂಬಂಧ ಕೇಂದ್ರ ಮಾಹಿತಿ ಆಯೋಗದ ಸಲಹೆಗಾಗಿ ಕಾಯುತ್ತಿರುವುದಾಗಿ ಜೋಶಿ ಅವರು ತಿಳಿಸಿದ್ದರು. ಬಳಿಕ ಮಾಹಿತಿ ಲಭ್ಯವಿದ್ದು, ಒದಗಿಸಲು 18,240 ರೂಪಾಯಿ ಪಾವತಿಸಬೇಕು ತಿಳಿಸಿದ್ದರು. ಇದಾದ ಐದು ದಿನಗಳ ಬಳಿಕ 50,160 ರೂಪಾಯಿ ಪಾವತಿಸಿ ಮಾಹಿತಿ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಇದನ್ನು ಪ್ರಶ್ನಿಸಿ ಮಾಹಿತಿ ಕೋರಿದ್ದವರು ಎರಡನೇ ಮೇಲ್ಮನವಿ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಪ್ರಾಧಿಕಾರ ಯಾವುದೇ ಹಣ ಪಡೆಯದೇ ಎರಡು ವಾರಗಳಲ್ಲಿ ಮಾಹಿತಿ ಒದಗಿಸುವಂತೆ ಕಟ್ಟುನಿಟ್ಟಾಗಿ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ದಂಡ ವಿಧಿಸಿರುವುದು ಮತ್ತು ಮಾಹಿತಿ ಒದಗಿಸುವಂತೆ ಸೂಚನೆ ನೀಡಿದ್ದ ಕ್ರಮಗಳನ್ನು ಮಹೇಶ್​ ಜೋಶಿ ಅವರು ಪ್ರಶ್ನಿಸಿದ್ದರು. ಈಗ ಆ ಎರಡೂ ಅರ್ಜಿಗಳನ್ನು ಹೈಕೋರ್ಟ್‌ ವಜಾ ಮಾಡಿದೆ.

Kannada Bar & Bench
kannada.barandbench.com