ಮಾಸಿಕ ಗೌರವ ಸಂಭಾವನೆ ಬಾಕಿ ಪಡೆಯಲು ಹೈಕೋರ್ಟ್‌ ಮೆಟ್ಟಿಲೇರಿದ ಮಹೇಶ್‌ ಜೋಶಿ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ತಮಗೆ ಸಂಪುಟದ ರಾಜ್ಯ ಸಚಿವರ ಸ್ಥಾನಮಾನ ನೀಡಲಾಗಿತ್ತು. ಅದರಂತೆ, ವೇತನ, ಸಂಭಾವನೆ, ಇತರೆ ಭತ್ಯೆಗಳನ್ನು ನೀಡಲಾಗಿತ್ತು ಎಂದಿರುವ ಮಾಜಿ ಅಧ್ಯಕ್ಷ ಜೋಶಿ.
Mahesh Joshi and Karnataka HC
Mahesh Joshi and Karnataka HC
Published on

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯ ಮಾಸಿಕ ಗೌರವ ಸಂಭಾವನೆಯ ಬಾಕಿ ಪಡೆದುಕೊಳ್ಳಲು ಪರಿಷತ್ತಿನ ಮಾಜಿ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಗೌರವ ಸಂಭಾವನೆಯ ಬಾಕಿ ಮೊತ್ತ ತಡೆ ಹಿಡಿದಿರುವ ಕ್ರಮ ಪ್ರಶ್ನಿಸಿ ಡಾ. ಮಹೇಶ್ ಜೋಶಿ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ಏಕಸದಸ್ಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ಅರ್ಜಿದಾರರ ಪರ ವಕೀಲ ಅಜಿತ್ ಕಲ್ಯಾಣ ವಾದ ಆಲಿಸಿದ ಪೀಠಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪರಿಷತ್ತಿನ ಆಡಳಿತಾಧಿಕಾರಿ ಐಎಎಸ್ ಅಧಿಕಾರಿ ಕೆ ಎ ದಯಾನಂದ್ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ತಮಗೆ ಸಂಪುಟದ ರಾಜ್ಯ ಸಚಿವರ ಸ್ಥಾನಮಾನ ನೀಡಲಾಗಿತ್ತು. ಅದರಂತೆ, ವೇತನ, ಸಂಭಾವನೆ, ಇತರೆ ಭತ್ಯೆಗಳನ್ನು ನೀಡಲಾಗಿತ್ತು. 2025ರ ಅಕ್ಟೋಬರ್‌ 28ರವರೆಗೆ ನಾನು ಅಧಿಕಾರದಲ್ಲಿದ್ದೆ. ಆರ್ಥಿಕ ಹೊರೆ ತಪ್ಪಿಸಲು ಮಾಸಿಕ ಸಂಭಾವನೆ ಹೊರತುಪಡಿಸಿ ಬೇರೆ ಯಾವ ಭತ್ಯೆ, ಸೌಲಭ್ಯಗಳನ್ನು ಪಡೆದುಕೊಂಡಿಲ್ಲ. ಪ್ರಕರಣದ ಕಾರಣ ನೀಡಿ ಗೌರವ ಸಂಭಾವನೆ ತಡೆ ಹಿಡಿಯಲಾಗಿದೆ. ಆಡಳಿತಾಧಿಕಾರಿಗೆ ಅಂತಹ ಅಧಿಕಾರ ಇಲ್ಲ, ಈ ಬಗ್ಗೆ ಮನವಿ ಕೊಟ್ಟರೂ ಪರಿಗಣಿಸಿಲ್ಲ. ಆದ್ದರಿಂದ ಬಾಕಿ ಗೌರವ ಸಂಭಾವನೆ ಮೊತ್ತ ಬಿಡುಗಡೆ ಮಾಡುವಂತೆ ಆಡಳಿತಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com