ಆರೋಪಿಯ ಕೃತ್ಯಗಳು ಸರ್ಕಾರ ಮತ್ತು ಸಮಾಜದ ಹಿತಾಸಕ್ತಿಗಳಿಗೆ ವಿರುದ್ಧವಾಗಿದ್ದಾಗ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಸಾಂವಿಧಾನಿಕ ಆಧಾರದ ಮೇಲೆ ಜಾಮೀನು ಕೋರುವುದು ಸಮರ್ಥನೀಯವಲ್ಲ ಎಂದು ಎನ್‌ಐಎ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.
ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಮಹೇಶ್ ರಾವುತ್ ಸಲ್ಲಿಸಿದ ನಿಯಮಿತ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿ ಎನ್‌ಐಎ ಈ ವಾರ ಅಫಿಡವಿಟ್ ಸಲ್ಲಿಸಿತು.
ಸಂವಿಧಾನದ 14 ಮತ್ತು 21ನೇ ವಿಧಿಗಳ ಅನ್ವಯ ಜಾಮೀನು ನೀಡುವಂತೆ ರಾವುತ್ ಸಲ್ಲಿಸಿದ್ದ ಅರ್ಜಿಯನ್ನು ಎನ್‌ಐಎ ವಿರೋಧಿಸಿದ್ದು, ರಾವುತ್ ಮಾಡಿದ ಕೃತ್ಯಗಳು ಸಮಾಜಕ್ಕೆ ವಿರುದ್ಧವಾಗಿವೆ ಎಂದು ದೂರಿದೆ.
"ಅಂತಹ ಕೃತ್ಯ ಎಸಗಿದ ಆರೋಪಿ ತನ್ನ ಕೃತ್ಯಗಳು ಸರ್ಕಾರ ಮತ್ತು ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಿರುವಾಗ ಸಾಂವಿಧಾನಿಕ ನೆಲೆಯಲ್ಲಿ ಪರಿಹಾರ ಪಡೆಯುವುದು ಸಮರ್ಥನೀಯವಲ್ಲ” ಎಂದು ಅದು ಪ್ರತಿಪಾದಿಸಿದೆ.
ರಾವುತ್ ಎಸಗಿದ್ದಾರೆ ಎನ್ನಲಾದ ಕೃತ್ಯಗಳು ದೇಶದ ಏಕತೆ, ಸಮಗ್ರತೆ, ಭದ್ರತೆ ಹಾಗೂ ಸಾರ್ವಭೌಮತ್ವದ ಮೇಲೆ ನೇರ ಪರಿಣಾಮ ಬೀರುತ್ತವೆ. ನಿಷೇಧಿತ ಮಾವೋವಾದಿ ಸಂಘಟನೆ ರಾವತ್‌ಗೆ ₹ 5 ಲಕ್ಷ ನೀಡಿತ್ತು ಎಂಬುದಕ್ಕೆ ಸಾಕ್ಷ್ಯ ದೊರೆತಿದೆ ಎಂದು ಎನ್ಐಎ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.
ರಾವುತ್ ಅವರನ್ನು ಜೂನ್ 2018ರಲ್ಲಿ ಬಂಧಿಸಲಾಗಿತ್ತು. ಅಂದಿನಿಂದ ಅವರು ಬಂಧನದಲ್ಲಿದ್ದಾರೆ ಎನ್‌ಐಎ ವಿಶೇಷ ನ್ಯಾಯಾಲಯ ನವೆಂಬರ್ 2021ರಲ್ಲಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ತಾನು ಅರಣ್ಯ ಹಕ್ಕುಗಳ ಹೋರಾಟಗಾರ. ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನಿಂದ (ಟಿಐಎಸ್‌ಎಸ್) ಪದವಿ ಪಡೆದಿದ್ದು ಪ್ರತಿಷ್ಠಿತ ಪ್ರಧಾನ ಮಂತ್ರಿಗಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಾಜಿ ಫೆಲೋ ಆಗಿದ್ದೇನೆ. ಅಲ್ಲದೆ ಗಡ್ಚಿರೋಲಿ ಜಿಲ್ಲಾಧಿಕಾರಿ ಜೊತೆ ಕೆಲಸ ಮಾಡಿರುವುದಾಗಿ ರಾವುತ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಎಸ್ ಜಿ ದಿಗೆ ಅವರಿದ್ದ ಪೀಠ ಜುಲೈ 12ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದೆ.