

ತನ್ನನ್ನು ಒಂಭತ್ತು ತಿಂಗಳ ಕಾಲ ರಾಯಚೂರಿನ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
2025ರ ಡಿಸೆಂಬರ್ 16ರಿಂದ 2026ರ ಸೆಪ್ಟೆಂಬರ್ 16ರವರೆಗೂ ಒಟ್ಟು ಒಂಭತ್ತು ತಿಂಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆ ಸರಹದ್ದಿಗೆ ಗಡಿಪಾರು ಮಾಡಿರುವ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಾಗಿದೆ. ಅರ್ಜಿಯಲ್ಲಿ ಗೃಹ ಇಲಾಖೆಯ ಕಾರ್ಯದರ್ಶಿ, ಪುತ್ತೂರು ಉಪ ವಿಭಾಗಾಧಿಕಾರಿ, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ, ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.
ಬೆಳ್ತಂಗಡಿ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ದೊರಕಿಸುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಹಲವು ರ‍್ಯಾಲಿಗಳನ್ನು ನಡೆಸಿದ್ದಾರೆ. ಇದೇ ಕಾರಣದಿಂದ ಅವರ ವಿರುದ್ಧ ಹಲವು ಮಂದಿ ಅವರ ವಿರುದ್ಧ ಕ್ಷುಲ್ಲಕ ಆರೋಪಗನ್ನು ಮಾಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣ ದಾಖಲಿಸಿದ್ದಾರೆ ಎಂದು ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ಹೊರಡಿಸಿದ್ದ ಗಡಿಪಾರು ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದ್ದು, ಹೊಸದಾಗಿ ಆದೇಶಿಸುವುದಕ್ಕೆ ನಿರ್ದೇಶನ ನೀಡಲಾಗಿತ್ತು. ಆದರೆ, ಪುತ್ತೂರು ಉಪವಿಭಾಗಾಧಿಕಾರಿಗಳು ಮತ್ತೊಂದು ಗಡಿಪಾರು ಆದೇಶ ಮಾಡಿದ್ದು, ಈ ಆದೇಶವು ಕರ್ನಾಟಕ ಪೊಲೀಸ್ ಕಾಯಿದೆಯ ವಿವಿಧ ಸೆಕ್ಷನ್ಳನ್ನು ಉಲ್ಲಂಘಿಸಿದೆ ಎಂದು ಆಕ್ಷೇಪಿಸಲಾಗಿದೆ.
ಅರ್ಜಿದಾರರ ವಿರುದ್ಧದ ಆರೋಪಗಳು ಮತ್ತು ಗಡಿಪಾರು ಮಾಡಿರುವ ಆದೇಶಕ್ಕೆ ಯಾವುದೇ ಸಂಬಂಧವಿಲ್ಲ. ಅರ್ಜಿದಾರರ ವಿರುದ್ಧ ಒಟ್ಟು 26 ಪ್ರಕರಣಗಳು ದಾಖಲಾಗಿದ್ದು, 16 ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾರೆ. ಎರಡು ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು, ಇನ್ನೂ 8 ಪ್ರಕರಣಗಳು ತನಿಖಾ ಹಂತದಲ್ಲಿವೆ. ಆದರೆ, ಗಡಿಪಾರು ಆದೇಶ ಹೊರಡಿಸಲು ಇತ್ತೀಚೆಗೆ ದಾಖಲಾಗಿರುವ 5 ಪ್ರಕರಣಗಳನ್ನು ಪರಿಗಣಿಸಿರುವುದಾಗಿ ತಿಳಿಸಿದ್ದು, ಅವೆಲ್ಲವೂ ಕ್ಷುಲ್ಲಕ ಪ್ರಕರಣಗಳಾಗಿವೆ ಎನ್ನಲಾಗಿದೆ.
ಈ ಎಲ್ಲ ಪ್ರಕರಣಗಳು ಅರ್ಜಿದಾರರು ತಮ್ಮ ಊರಿನಲ್ಲಿಯೇ ನೆಲೆಸುವುದರಿಂದ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ ಎಂಬುದನ್ನು ಸಾಬೀತುಪಡಿಸುವುದಕ್ಕೆ ಪುರಾವೆಗಳಿಲ್ಲ. ಅಲ್ಲದೇ, ಅರ್ಜಿದಾರರ ಚಟುವಟಿಕೆಗಳು ಯಾವುದೇ ವ್ಯಕ್ತಿಯ ಅಥವಾ ಸಾರ್ವಜನಿಕ ಆಸ್ತಿಗಳಿಗೆ ಅಪಾಯವುಂಟಾಗಲಿದೆ ಎಂದು ಸೂಚಿಸುವ ಸಂಬಂಧ ಯಾವುದೇ ವರದಿಯೂ ಇಲ್ಲ. ಹೀಗಾಗಿ, ಅರ್ಜಿದಾರರನ್ನು ಗಡಿಪಾರು ಮಾಡುವ ಸಂಬಂಧ ಆದೇಶ ಹೊರಡಿಸುವುದಕ್ಕೆ ಸೂಕ್ತವಾದ ಕಾರಣಗಳನ್ನು ನೀಡುವುದಕ್ಕೆ ಉಪವಿಭಾಗಾಧಿಕಾರಿಗಳು ವಿಫಲರಾಗಿದ್ದು, ದುರುದ್ದೇಶ ಪೂರ್ವಕವಾದ ಆದೇಶ ಮಾಡಿದ್ದಾರೆ ಎಂದು ಆಕ್ಷೇಪಿಸಲಾಗಿದೆ.
ಅಲ್ಲದೇ, ಈ ಹಿಂದೆ ಹೊರಡಿಸಿದ್ದ ಗಡಿಪಾರು ಆದೇಶ ರದ್ದುಪಡಿಸಿದ ಸಂದರ್ಭದಲ್ಲಿ ಹೈಕೋರ್ಟ್, ಅರ್ಜಿದಾರರ ವಿರುದ್ಧ ಕಾನೂನು ಪ್ರಕಾರ ಅಗತ್ಯ ಇರುವ ಎಲ್ಲ ನಿಯಮಗಳನ್ನು ಅನುಸರಿಸಿ ಮತ್ತೆ ಗಡಿಪಾರು ಆದೇಶ ಮಾಡಬಹುದು ಎಂಬುದಾಗಿ ಸ್ಪಷ್ಟವಾಗಿ ಹೇಳಿದೆ. ಆದರೂ, ಅರ್ಜಿದಾರರ ವಿರುದ್ಧ 1992ರಿಂದ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಕುರಿತು ವಸ್ತು ಸ್ಥಿತಿಯ ವಿವರಣೆ ನೀಡದೇ ಖುಲಾಸೆ ಆಗಿರುವ, ವಿಚಾರಣೆ ಹಾಗೂ ತನಿಖಾ ಹಂತದಲ್ಲಿರುವ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.
ಅರ್ಜಿದಾರರ ನಡವಳಿಕೆ ಮತ್ತು ಚಟುವಟಿಕೆಗಳು ಯಾವುದೇ ವ್ಯಕ್ತಿ ಅಥವಾ ಆಸ್ತಿಗೆ ಹಾನಿ ಉಂಟುಮಾಡುತ್ತದೆ ಎಂಬುದನ್ನು ತೀರ್ಮಾನಿಸುವುದಕ್ಕೆ ಅಗತ್ಯ ಸಾಕ್ಷ್ಯಗಳ ಆಧಾರದ ಮೇಲೆ ಆದೇಶ ಹೊರಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅರ್ಜಿದಾರರು ಸಾರ್ವಜನಿಕ ಶಾಂತಿ ಭಂಗವನ್ನುಂಟು ಮಾಡುವುದು ಮತ್ತು ಶಾಂತಿ ಸುವ್ಯವಸ್ಥೆ ಧಕ್ಕೆಯಾಗುವಂತೆ ನಡೆದುಕೊಳ್ಳಲಿದ್ದಾರೆ ಎಂಬುದನ್ನು ತೋರಿಸಲು ಯಾವುದೇ ದಾಖಲೆಗಳನ್ನು ನೀಡಿಲ್ಲ ಎಂದು ಹೇಳಲಾಗಿದೆ.
ಆದರೆ, ಅರ್ಜಿದಾರರನ್ನು ಗಡಿಪಾರು ಮಾಡಿ ಆದೇಶಿಸುವುದಕ್ಕಾಗಿ ಪೂರ್ವಭಾವಿಯಾಗಿ ಪೊಲೀಸರು ಸರಣಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಿ, ಗಡಿಪಾರು ಆದೇಶ ಮಾಡಿದ್ದು, ಈ ಆದೇಶವು ಸಂವಿಧಾನದಲ್ಲಿ ಲಭ್ಯವಿರುವ ಮೂಲಭೂತ ಹಕ್ಕಗಳ ಸ್ಪಷ್ಟ ಉಲ್ಲಘನೆಯಾಗಿದ್ದು, ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.