ಸದನದಲ್ಲಿ ಪ್ರಶ್ನೆ ಕೇಳಲು ಲಂಚ: ಮಾನನಷ್ಟ ಮೊಕದ್ದಮೆಯಿಂದ ಮಾಧ್ಯಮಗಳ ಹೆಸರು ಕೈಬಿಡುವುದಾಗಿ ತಿಳಿಸಿದ ಮಹುವಾ ಮೊಯಿತ್ರಾ

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ವಿರುದ್ಧ ಮಾತ್ರ ಪರಿಹಾರಕ್ಕಾಗಿ ಒತ್ತಾಯಿಸುವುದಾಗಿ ಮಹುವಾ ಪರ ವಕೀಲರು ನ್ಯಾಯಮೂರ್ತಿ ಸಚಿನ್ ದತ್ತಾ ಅವರಿಗೆ ತಿಳಿಸಿದರು.
Mahua Moitra and Delhi High Court
Mahua Moitra and Delhi High Court
Published on

ಸದನದಲ್ಲಿ ಪ್ರಶ್ನೆ ಕೇಳಲು ತಮ್ಮ ವಿರುದ್ಧ ಲಂಚ ಪಡೆದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಯಿಂದ ಮಾಧ್ಯಮ ಸಂಸ್ಥೆಗಳ ಹೆಸರನ್ನು ಕೈಬಿಡುತ್ತಿರುವುದಾಗಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಮಂಗಳವಾರ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ವಿರುದ್ಧ ಮಾತ್ರ ಪರಿಹಾರಕ್ಕಾಗಿ ಒತ್ತಾಯಿಸುವುದಾಗಿ ಮಹುವಾ ಪರ ವಕೀಲರು ನ್ಯಾಯಮೂರ್ತಿ ಸಚಿನ್ ದತ್ತಾ ಅವರಿಗೆ ತಿಳಿಸಿದರು.

ದುಬೆ ಪರ ವಾದ ಮಂಡಿಸಿದ ವಕೀಲ ಅಭಿಮನ್ಯು ಭಂಡಾರಿ ಅವರು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಗೆ ತನ್ನ ಸಂಸದೀಯ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ನೀಡಿದ್ದಾಗಿ ಮಹುವಾ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಸುದ್ದಿವಾಹಿನಿ ಎಎನ್‌ಐ ಪರ ವಕೀಲ ಸಿದ್ಧಾಂತ್ ಕುಮಾರ್ ಅವರು, ಮೊಯಿತ್ರಾ ಅವರು ಮಾಧ್ಯಮ ಸಂಸ್ಥೆಗಳ ವಿರುದ್ಧ ಪರಿಹಾರ ಬಯಸುತ್ತಿಲ್ಲ. ಆದರೆ ದಾವೆಯಲ್ಲಿ ಮಾಧ್ಯಮಗಳ ವಿರುದ್ಧ ಆರೋಪಗಳಿರುವುದರಿಂದ ಅವರು ತಮ್ಮ ದಾವೆಯಲ್ಲಿ ತಿದ್ದುಪಡಿ ಮಾಡಬೇಕು ಎಂದು ಹೇಳಿದರು.

ಕಕ್ಷಿದಾರರ ಜ್ಞಾಪನ ಪತ್ರವನ್ನು ಅದಕ್ಕೆ ತಕ್ಕಂತೆ ತಿದ್ದುಪಡಿ ಮಾಡುವಂತೆ ಮೊಯಿತ್ರಾ ಅವರನ್ನು ಪ್ರತಿನಿಧಿಸುವ ವಕೀಲ ಸಮುದ್ರ ಸಾರಂಗಿ ಅವರಿಗೆ ನ್ಯಾಯಾಲಯ ಸೂಚಿಸಿ ಪ್ರಕರಣವನ್ನು ಡಿಸೆಂಬರ್ 5ಕ್ಕೆ ಮುಂದೂಡಿತು.

ಉದ್ಯಮಿ ದರ್ಶನ್ ಹಿರಾನಂದಾನಿ ಪರವಾಗಿ ಸಂಸತ್‌ನಲ್ಲಿ ಪ್ರಶ್ನೆ ಕೇಳಲು ನಗದು ಹಾಗೂ ಉಡುಗೊರೆಗಳನ್ನು ತಾನು ಪಡೆದಿರುವುದಾಗಿ ದುಬೆ, ದೆಹದ್ರಾಯ್ ಹಾಗೂ ವಿವಿಧ ಸುದ್ದಿಮಾಧ್ಯಮಗಳು ಮಾಡಿರುವ ಆರೋಪಗಳನ್ನು ತೆಗೆದುಹಾಕುವಂತೆ ಮಹುವಾ ನ್ಯಾಯಾಲಯದ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com