ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ತಾನು ಲಂಚ ಪಡೆದಿರುವುದಾಗಿ ಆರೋಪಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ವಿರುದ್ಧ ಸಂಸದೆ ಮೊಹುವಾ ಮೊಯಿತ್ರಾ ಅವರು ಹೂಡಿರುವ ಮಾನಹಾನಿ ದಾವೆಯ ವಿಚಾರಣೆಯು ದೆಹಲಿ ಹೈಕೋರ್ಟ್‌ನಲ್ಲಿ ಶುಕ್ರವಾರ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.
ಮೊಹುವಾ ಪರ ವಕೀಲ ಶಂಕರನಾರಾಯಣನ್ ಅವರು ಮೊಹುವಾ ವಿರುದ್ಧದ ದೂರು ಹಿಂಪಡೆಯುವಂತೆ ತನ್ನನ್ನು ಗುರುವಾರ ಸಂಪರ್ಕಿಸಿದ್ದರು ಎಂದು ದೇಹದ್ರಾಯ್ ಅವರು ಮುಕ್ತ ನ್ಯಾಯಾಲಯದಲ್ಲಿ ಆರೋಪಿಸಿದರು. ಈ ಸಂಬಂಧ ಕರೆ ದಾಖಲೆ ತನ್ನ ಬಳಿ ಇದ್ದು, ಶಂಕರನಾರಾಯಣನ್ ಅವರನ್ನು ಈ ಪ್ರಕರಣದಲ್ಲಿ ವಾದಿಸಲು ಅನುಮತಿಸಬಾರದು ಎಂದು ನ್ಯಾಯಾಲಯವನ್ನು ಕೋರಿದರು.
“ಇದು ಅತ್ಯಂತ ವಿಚಲಿತವಾದ ಬೆಳವಣಿಗೆ. ಇಲ್ಲಿ ಗಂಭೀರವಾದ ಹಿತಾಸಕ್ತಿಯ ಸಂಘರ್ಷ ಉದ್ಭವಿಸಿದೆ. ಶಂಕರನಾರಾಯಣನ್ ಅವರು ನನ್ನ ಜೊತೆ ಅರ್ಧ ತಾಸು ಮಾತನಾಡಿದ್ದಾರೆ. ಒಂದು ನಾಯಿ ನೀಡಲಾಗುವುದು ಸಿಬಿಐಗೆ ಮೊಹುವಾ ವಿರುದ್ಧ ನೀಡಿರುವ ದೂರು ಹಿಂಪಡೆಯುವಂತೆ ಕೇಳಿದ್ದಾರೆ. ಈ ಪ್ರಕರಣದಲ್ಲಿ ವಾದಿಸಲಾಗದು. ನನ್ನ ಬಳಿ ರೆಕಾರ್ಡಿಂಗ್ ಇದೆ” ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಂಕರ್‌ನಾರಾಯಣನ್ ಅವರು ಹಲವು ಪ್ರಕರಣಗಳಲ್ಲಿ ವಾದಿಸಲು ದೆಹದ್ರಾಯ್ ಅವರು ಈ ಹಿಂದೆ ತಮಗೆ ನೆರವಾಗಿದ್ದು, ಸಾಕಷ್ಟು ಚಿರಪರಿಚಿತರಾಗಿದ್ದರಿಂದ ಅವರನ್ನು ಸಂಪರ್ಕಿಸಿದ್ದಾಗಿ ನ್ಯಾಯಾಲಯದಲ್ಲಿ ಒಪ್ಪಿಕೊಂಡರು.
“ಹಿಂದೆ ಹಲವು ಪ್ರಕರಣಗಳಲ್ಲಿ ಜೈ ನನಗೆ ಪ್ರಕರಣಗಳ ಬ್ರೀಫಿಂಗ್ ಮಾಡಿದ್ದಾರೆ. ಆ ಕಾರಣಕ್ಕಾಗಿ ಅವರನ್ನು ಸಂಪರ್ಕಿಸಿದೆ. ಈ ಪ್ರಕರಣದಲ್ಲಿ ವಾದಿಸುವಂತೆ ನನ್ನನ್ನು ಕೋರಿದಾಗ ನನ್ನ ಕಕ್ಷಿದಾರರಿಗೆ ಜೈ ಜೊತೆ ಮಾತನಾಡಿ ತಿಳಿಸುವುದಾಗಿ ಹೇಳಿದೆ. ಇದಕ್ಕೆ ಮೊಹುವಾ ಒಪ್ಪಿದರು” ಎಂದು ಶಂಕರನಾರಾಯಣನ್ ಹೇಳಿದರು.
ಆಗ ನ್ಯಾ. ಸಚಿನ್ ದತ್ತ ಅವರು ಆರೋಪದ ಹಿನ್ನೆಲೆಯಲ್ಲಿ ಶಂಕರನಾರಾಯಣನ್ ಅವರು ಮೊಹುವಾ ಪ್ರಕರಣದಲ್ಲಿ ವಾದಿಸುವುದು ಹಿತಾಸಕ್ತಿ ಸಂಘರ್ಷಕ್ಕೆ ಎಡೆಮಾಡಿಕೊಡಬಹುದು ಎಂದರು.
“ನನಗೆ ನಿಜಕ್ಕೂ ಆಘಾತವಾಗಿದೆ. ನಿಮ್ಮಿಂದ ಅತ್ಯಂತ ಹೆಚ್ಚಿನ ಮಟ್ಟದ ವೃತ್ತಿಪರತೆ ನಿರೀಕ್ಷಿಸಲಾಗಿತ್ತು. ಎರಡನೇ ಪ್ರತಿವಾದಿಯೊಂದಿಗೆ ನೀವು ಸಂಪರ್ಕದಲ್ಲಿದ್ದೀರಿ… ಇದರರ್ಥ ನೀವು ಮಧ್ಯಸ್ಥಿಕೆದಾರರ ಪಾತ್ರ ನಿಭಾಯಿಸಿದ್ದೀರಿ. ಈ ಪ್ರಕರಣದಲ್ಲಿ ನೀವು ವಾದಿಸಬಹುದು ಎಂದು ಕೊಂಡಿದ್ದೀರಾ” ಎಂದು ಶಂಕರನಾರಾಯಣನ್ ಅವರಿಗೆ ಪೀಠ ಪ್ರಶ್ನೆ ಹಾಕಿತು.
ಹೀಗಾಗಿ, ಶಂಕರನಾರಾಯಣನ್ ಅವರು ಪ್ರಕರಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದರು. ನ್ಯಾಯಾಲಯವು ವಿಚಾರಣೆಯನ್ನು ಅ.31ಕ್ಕೆ ಮುಂದೂಡಿತು.