ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರ ವಿರುದ್ಧ ತಾನು ನೀಡಿದ್ದ ಹೇಳಿಕೆ ಸಂಬಂಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಂಸದೆ ಮಹುವಾ ಮೊಯಿತ್ರಾ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ಪ್ರತಿಕ್ರಿಯೆ ಕೇಳಿ ಹೈಕೋರ್ಟ್ ನೋಟಿಸ್ ನೀಡಿದೆ.
ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಪ್ರಕರಣದ ವಿಚಾರಣೆಯನ್ನು ನವೆಂಬರ್ 6ರಂದು ನಡೆಸುವುದಾಗಿ ತಿಳಿಸಿದರು.
ಮಹುವಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ತಾವು ಪೊಲೀಸರಿಗೆ ಲಿಖಿತ ಪತ್ರ ಬರೆದಿದ್ದರೂ ಅವರು ತಮಗೆ ಎಫ್ಐಆರ್ ಪ್ರತಿ ನೀಡಿಲ್ಲ ಎಂದು ದೂರಿದರು.
ಆಗ ದೆಹಲಿ ಪೊಲೀಸ್ ಪರ ವಕೀಲರು ಎಫ್‌ಐಆರ್ ಪ್ರತಿಯನ್ನು ಮಹುವಾ ಪರ ವಕೀಲರಿಗೆ ನೀಡಿದರು.
ಇದೇ ಅರ್ಜಿಗೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ದೆಹಲಿ ಪೊಲೀಸರಿಗೆ ಆಯೋಗ ನೀಡಿದ ಪತ್ರಗಳನ್ನು ಮಹುವಾ ಪ್ರಶ್ನಿಸಿರುವುದರಿಂದ ಅವರ ಈ ಅರ್ಜಿಯ ನಿರ್ವಹಣಾರ್ಹತೆ ಕುರಿತು ಪೊಲೀಸರು ಪ್ರಶ್ನೆಗಳನ್ನೆತ್ತಿದ್ದಾರೆ.
ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಮಹುವಾ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 79 (ಮಾತು, ಸನ್ನೆ ಅಥವಾ ಕ್ರಿಯೆಯ ಮೂಲಕ ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಉತ್ತರ ಪ್ರದೇಶದ ಹಾಥ್‌ರಸ್‌ನಲ್ಲಿ ಇತ್ತೀಚೆಗೆ ಕಾಲ್ತುಳಿತ ದುರಂತ ನಡೆದ ಪ್ರದೇಶದಲ್ಲಿ ಆಯೋಗದ ಅಧ್ಯಕ್ಷೆಯ ಸಿಬ್ಬಂದಿ ಆಕೆಯ ತಲೆಯ ಮೇಲೆ ಛತ್ರಿ ಹಿಡಿದಿರುವ ವೀಡಿಯೊಗೆ ಸಂಬಂಧಿಸಿದಂತೆ ಮಹುವಾ ಟೀಕೆ ಮಾಡಿದ್ದರು.
ಟ್ವೀಟ್ ಮಾಡಿದ್ದನ್ನು ಮಹಿಳಾ ಆಯೋಗ ಸ್ವಯಂ ಪ್ರೇರಣೆಯಿಂದ ಪರಿಗಣಿಸಿತ್ತು. ಮಹುವಾ ಅವರ ವಿರುದ್ಧ ಕ್ರಮ ಕೋರಿ ಬಳಿಕ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಇದು 'ಅತಿರೇಕದ' ಟೀಕೆಯಾಗಿದೆ ಮತ್ತು 'ಮಹಿಳೆಯರ ಘನತೆಯಿಂದ ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆ' ಎಂದು ಅದು ಹೇಳಿತ್ತು.