ಸರ್ಕಾರಿ ಬಂಗಲೆ ತೆರವು: ದೆಹಲಿ ಹೈಕೋರ್ಟ್‌ನಿಂದ ಅರ್ಜಿ ಹಿಂಪಡೆದ ಮಹುವಾ

ಮುಂಬರುವ ಲೋಕಸಭಾ ಚುನಾವಣೆಯವರೆಗೆ ಬಂಗಲೆಯಲ್ಲಿ ಉಳಿಯಲು ಅವಕಾಶ ನೀಡುವಂತೆ ಎಸ್ಟೇಟ್‌ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸುವುದಾಗಿ ಮಹುವಾ ಪರ ವಕೀಲರು ತಿಳಿಸಿದ್ದಾರೆ.
ಮಹುವಾ ಮೊಯಿತ್ರಾ, ದೆಹಲಿ ಹೈಕೋರ್ಟ್
ಮಹುವಾ ಮೊಯಿತ್ರಾ, ದೆಹಲಿ ಹೈಕೋರ್ಟ್

ನವದೆಹಲಿಯ ಸರ್ಕಾರಿ ಬಂಗಲೆ ತೆರವುಗೊಳಿಸುವಂತೆ ಕೇಂದ್ರ ಸರ್ಕಾರ ತಮಗೆ ನೀಡಿರುವ ಆದೇಶ ಪ್ರಶ್ನಿಸಿ ತಾವು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಟಿಎಂಸಿ ನಾಯಕಿ ಹಾಗೂ ಮಾಜಿ ಸಂಸದೆ ಮಹುವಾ ಮೊಯಿತ್ರಾ ಗುರುವಾರ ಹಿಂಪಡೆದಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯವರೆಗೆ ಬಂಗಲೆಯಲ್ಲಿ ಉಳಿಯಲು ಅವಕಾಶ ನೀಡುವಂತೆ ಎಸ್ಟೇಟ್‌ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸುವುದಾಗಿ ಮಹುವಾ ಪರ ಹಾಜರಾದ ಹಿರಿಯ ವಕೀಲ (ಹಾಗೂ ರಾಜಕಾರಣಿ) ಪಿನಾಕಿ ಮಿಶ್ರಾ ನ್ಯಾಯಾಲಯಕ್ಕೆ ತಿಳಿಸಿದರು.

ಸರ್ಕಾರ ಕಾನೂನಿಗೆ ಅನುಗುಣವಾಗಿ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿ ಹಿಂಪಡೆದ ಬಳಿಕ ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರು ಸೂಚಿಸಿದರು.

ಪ್ರಕರಣದ ಅರ್ಹತೆಯ ಬಗ್ಗೆ ತಾನು ಯಾವುದೇ ಅವಲೋಕನಗಳನ್ನು ಮಾಡಿಲ್ಲ ಮತ್ತು ಸ್ಥಿರಾಸ್ತಿ ನಿರ್ದೇಶನಾಲಯ ಪ್ರಕರಣದ ಸಂದರ್ಭ ಸನ್ನಿವೇಶಗಳಿಗೆ ತಕ್ಕಂತೆ ತನ್ನದೇ ಆದ ವಿವೇಚನೆ ಬಳಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸಂಸತ್‌ನಿಂದ ಮಹುವಾ ಅವರನ್ನು ಉಚ್ಚಾಟಿಸಿದ ಹಿನ್ನೆಲೆಯಲ್ಲಿ ಜನವರಿ 7, 2024ರೊಳಗೆ ಮನೆ ತೆರವುಗೊಳಿಸುವಂತೆ ಮೊಯಿತ್ರಾ ಅವರಿಗೆ ಸರ್ಕಾರ ಸೂಚಿಸಿತ್ತು. ಕಳೆದ ಡಿ. 8ರಂದು ಅವರನ್ನು ಸಂಸತ್‌ನಿಂದ ಉಚ್ಚಾಟಿಸಲಾಗಿತ್ತು.

ಸರ್ಕಾರದ ಆದೇಶ ಪ್ರಶ್ನಿಸಿದ್ದ ಮಹುವಾ ಅವರು ಉಚ್ಚಾಟನೆ ಪ್ರಶ್ನಿಸಿರುವ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದ್ದು ಈ ಹಿನ್ನೆಲೆಯಲ್ಲಿ ಸ್ಥಿರಾಸ್ತಿ ನಿರ್ದೇಶನಾಲಯ ನೀಡಿರುವ ನೋಟಿಸ್‌ ಕಾನೂನುಬಾಹಿರವಾಗಿದೆ. ಬದಲಿಗೆ 2024ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುವವರೆಗೆ ತನಗೆ ಪ್ರಸ್ತುತ ನಿವಾಸದಲ್ಲಿ ವಾಸಿಸಲು ನ್ಯಾಯಾಲಯ ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದರು.

ಸರ್ಕಾರಿ ಬಂಗಲೆ ತೆರವುಗೊಳಿಸಿರುವಂತೆ ಸೂಚಿಸಿರುವುದರಿಂದ ಬರಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮಾಡಬೇಕಾದ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com