ಮಹುವಾಗಢಿ ಕಲ್ಲಿದ್ದಲು ಪ್ರಕರಣ: ಮಾಜಿ ಅಧಿಕಾರಿಗಳ ಖುಲಾಸೆ; ಜಸ್ ಇನ್‌ಫ್ರಾ, ನಿರ್ದೇಶಕ ಜಯಸ್ವಾಲ್ ದೋಷಿಗಳು

2006-2007ರ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಕಲ್ಲಿದ್ದಲು ಸಚಿವಾಲಯ ವಿದ್ಯುತ್ ಕ್ಷೇತ್ರಕ್ಕೆ 15 ಸೇರಿದಂತೆ 38 ಕಲ್ಲಿದ್ದಲು ನಿಕ್ಷೇಪಗಳಿಗೆ ಅರ್ಜಿ ಆಹ್ವಾನಿಸಿತ್ತು.
Coal Mine
Coal Mine
Published on

ಜಾರ್ಖಂಡ್‌ನ ಮಹುವಾಗಢಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಲಿದ್ದಲು ಸಚಿವಾಲಯದ ಮೂವರು ಮಾಜಿ ಹಿರಿಯ ಅಧಿಕಾರಿಗಳನ್ನು ಖುಲಾಸೆಗೊಳಿಸಿರುವ ನವದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಜಸ್‌  ಇನ್ಫ್ರಾಸ್ಟ್ರಕ್ಚರ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ (ಜೆಐಸಿಪಿಎಲ್) ಹಾಗೂ ಅದರ ನಿರ್ದೇಶಕ ಮನೋಜ್ ಕುಮಾರ್ ಜಯಸ್ವಾಲ್ ದೋಷಿಗಳೆಂದು ತೀರ್ಪು ನೀಡಿದೆ.

ಮಾಜಿ ಸರ್ಕಾರಿ ಅಧಿಕಾರಿಗಳಾದ ಎಚ್‌ ಸಿ ಗುಪ್ತಾ (ಕಲ್ಲಿದ್ದಲು ಸಚಿವಾಲಯದ ಅಂದಿನ ಕಾರ್ಯದರ್ಶಿ), ಕೆ ಎಸ್ ಕ್ರೋಫಾ (ಅಂದಿನ ಜಂಟಿ ಕಾರ್ಯದರ್ಶಿ) ಮತ್ತು ಕೆ ಸಿ ಸಮ್ರಿಯಾ (ಅಂದಿನ ಸಿಎ-ಐ ನಿರ್ದೇಶಕರು) ಅವರು 2008ರಲ್ಲಿ ಮಹುವಾಗಢಿ ನಿಕ್ಷೇಪವನ್ನು ಜೆಐಸಿಪಿಎಲ್ ಮತ್ತು ಸಿಇಎಸ್‌ಸಿ ಲಿಮಿಟೆಡ್‌ಗೆ ಜಂಟಿಯಾಗಿ ಹಂಚಿಕೆ ಮಾಡಿದ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಾವುದೇ ಅಪ್ರಾಮಾಣಿಕ ಉದ್ದೇಶ ಅಥವಾ ಹಣಕಾಸಿನ ಉದ್ದೇಶದಿಂದ ವರ್ತಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ಆಧಾರಗಳಿಲ್ಲ ಎಂದು ಜೂನ್ 6ರಂದು ನೀಡಿದ ತೀರ್ಪಿನಲ್ಲಿ ನ್ಯಾಯಾಧೀಶ ಸಂಜಯ್ ಬನ್ಸಾಲ್  ತಿಳಿಸಿದ್ದಾರೆ.

Also Read
ಕಲ್ಲಿದ್ದಲು ಹಗರಣ: ಕೇಂದ್ರ ಸಚಿವಾಲಯದ ಮಾಜಿ ಕಾರ್ಯದರ್ಶಿ ಗುಪ್ತಾ ಇತರರನ್ನು ಖುಲಾಸೆಗೊಳಿಸಿದ ದೆಹಲಿ ಸಿಬಿಐ ನ್ಯಾಯಾಲಯ

2006-2007ರ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಕಲ್ಲಿದ್ದಲು ಸಚಿವಾಲಯ ವಿದ್ಯುತ್ ಕ್ಷೇತ್ರಕ್ಕೆ 15 ಸೇರಿದಂತೆ 38 ಕಲ್ಲಿದ್ದಲು ನಿಕ್ಷೇಪಗಳಿಗೆ ಅರ್ಜಿ ಆಹ್ವಾನಿಸಿತ್ತು.

ಜಾರ್ಖಂಡ್‌ನ ಮಹುವಾಗಢಿ ಕಲ್ಲಿದ್ದಲು ನಿಕ್ಷೇಪದಲ್ಲಿ ಪ್ರಸ್ತಾವಿತ 1,215 ಮೆಗಾವ್ಯಾಟ್ ವಿದ್ಯುತ್ ಸ್ಥಾವರಕ್ಕಾಗಿ ಜೆಐಸಿಪಿಎಲ್ ಹರಾಜಿನಲ್ಲಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪಡೆದಿತ್ತು. ಆದರೆ ಕೇಂದ್ರ ವಿಚಕ್ಚಣಾ ಆಯೋಗ ನಿಕ್ಷೇಪ ಹಂಚಿಕೆ ಪ್ರಕ್ರಿಯೆ ಬಗ್ಗೆ ಪ್ರಾಥಮಿಕ ತನಿಖೆ ಆರಂಭಿಸಿತ್ತು. ಜೆಐಸಿಪಿಎಲ್ ಮತ್ತು ಅದರ ನಿರ್ದೇಶಕರ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಐಪಿಸಿ ಹಾಗೂ ಭ್ರಷ್ಟಾಚಾರ ತಡೆ ಕಾಯಿದೆಯಡಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.

ಆದರೆ ತನಿಖೆ ಪೂರ್ಣಗೊಳಿಸಿದ್ದ ಸಿಬಿಐ ಪ್ರಕರಣ ಮುಕ್ತಾಯಗೊಳಿಸಲು ಶಿಫಾರಸು ಮಾಡಿತು. ನಿಕ್ಷೇಪ ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗಿಯಾದ ಆರೋಪಿತ ವ್ಯಕ್ತಿಗಳು ಅಥವಾ ಸಾರ್ವಜನಿಕ ಸೇವಕರು ಯಾವುದೇ ಅಪರಾಧ ಎಸಗಿಲ್ಲ ಎಂದಿತ್ತು. ದೋಷಾರೋಪದ ಪುರಾವೆಗಳು ಅಸ್ತಿತ್ವದಲ್ಲಿದ್ದರೂ ಅದು ವಿಚಾರಣಾಯೋಗ್ಯವಲ್ಲ ಎಂದು ಹೇಳಿತ್ತು. ಅಪ್ರಾಮಾಣಿಕತೆಯಿಂದ ಪ್ರಕ್ರಿಯೆ ನಡೆಸಿದ್ದಾರೆ ಎಂಬ ಆರೋಪ ಸಾಬೀತುಪಡಿಸಲು ಸಾಧ್ಯವಿಲ್ಲ ಎಂಬುದಾಗಿ ಅದು ತಿಳಿಸಿತ್ತು.

Also Read
ಸಿಬಿಐ ಓತಪ್ರೋತ ತನಿಖೆ: ಕರ್ನಾಟಕ ಕಲ್ಲಿದ್ದಲು ಕಂಪನಿ ವಿರುದ್ಧದ ಆರೋಪ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಪ್ರಕರಣ ಮುಕ್ತಾಯಗೊಳಿಸುವಂತೆ ಸಿಬಿಐ ಮಾಡಿದ್ದ ಶಿಫಾರಸನ್ನು ಒಪ್ಪಿರಲಿಲ್ಲ. 2014 ರ ನವೆಂಬರ್‌ನಲ್ಲಿ ವಿವರವಾದ ಆದೇಶದ ಮೂಲಕ ಅದನ್ನು ತಿರಸ್ಕರಿಸಿದ್ದರು.

ಪ್ರಸ್ತುತ ವಿಚಾರಣೆ ವೇಳೆ  ಅಧಿಕಾರಿಗಳ ವಿರುದ್ಧದ ಆರೋಪ ಸಾಬೀತಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಇದೇ ವೇಳೆ ಜೆಐಸಿಪಿಎಲ್ ಮತ್ತು ಮನೋಜ್ ಕುಮಾರ್ ಜಯಸ್ವಾಲ್ ವಿರುದ್ಧದ ಪ್ರಾಸಿಕ್ಯೂಷನ್ ವಾದವನ್ನು ಅದು ಪುರಸ್ಕರಿಸಿದೆ. ಈ ಇಬ್ಬರೂ ಭಾರತ ಸರ್ಕಾರವನ್ನು ವಂಚಿಸಲು ಪಿತೂರಿ ನಡೆಸಿದ್ದಾರೆ ಎಂದು ಅದು ತೀರ್ಪು ನೀಡಿದೆ.

Kannada Bar & Bench
kannada.barandbench.com