ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಸುರಕ್ಷತೆಯ ಉನ್ನತ ಗುಣಮಟ್ಟ ಕಾಯ್ದುಕೊಳ್ಳಿ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಸೂಚನೆ
ಇತ್ತೀಚಿನ ರೈಲು ಅಪಘಾತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ದೇಶದ ಎಲ್ಲಾ ರೈಲು ನಿಲ್ದಾಣಗಳ ಭದ್ರತೆ ಮತ್ತು ಸುರಕ್ಷತೆಯನ್ನು ನಿರಂತರ ಪರಿಶೀಲಿಸುವಂತೆ ಈಚೆಗೆ ಸೂಚಿಸಿದೆ [ಕುಶ್ ಕಲ್ರಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ ].
ಅಪಘಾತ ತಡೆ ಸಾಧನಗಳು, ರೈಲು ಸುರಕ್ಷತಾ ವ್ಯವಸ್ಥೆ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಭಾರತೀಯ ರೈಲ್ವೆ ಸಲ್ಲಿಸಿದ್ದ ಅಫಿಡವಿಟನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರಿದ್ದ ಪೀಠ ಈ ಸಂದರ್ಭದಲ್ಲಿ ಗಮನಿಸಿತು.
“ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ಗಳ ಹಿನ್ನೆಲೆಯಲ್ಲಿ ಹೆಚ್ಚೇನೂ ಅಗತ್ಯವಿಲ್ಲ ಎಂದು ಕಂಡುಬಂದಿರುವುದರಿಂದ ಪಿಐಎಲ್ ವಿಲೇವಾರಿ ಮಾಡಲಾಗುತ್ತಿದೆ. ಆದರೂ ಪ್ರತಿವಾದಿಗಳು ಭಾರತೀಯ ರೈಲ್ವೇಯಲ್ಲಿನ ಸುರಕ್ಷತೆ ಮತ್ತು ಭದ್ರತಾ ಕ್ರಮಗಳಿಗೆ ಸಂಬಂಧಿಸಿದಂತೆ ನಿರಂತರ ಪರಿಶೀಲನೆ ನಡೆಯುವಂತೆ ನೋಡಿಕೊಳ್ಳಬೇಕು. ಪರಿಸ್ಥಿತಿ ಅವಲೋಕಿಸಿ ಕೇಂದ್ರ ಸರ್ಕಾರ ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಭದ್ರತೆ, ಸುರಕ್ಷತೆಯ ಉನ್ನತ ಗುಣಮಟ್ಟ ಕಾಯ್ದುಕೊಳ್ಳಬೇಕು” ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಈಚೆಗೆ ನಡೆದ ರೈಲು ಅಪಘಾತಗಳ ಹಿನ್ನೆಲೆಯಲ್ಲಿ ಉಳಿದ ವಿಷಯಗಳೊಡನೆ ರೈಲ್ವೆ ಪ್ಲಾಟ್ಫಾರ್ಮ್ಗಳಲ್ಲಿ ಅಪಘಾತ ತಡೆ ಸಾಧನಗಳು, ಆಲ್ಕೊಹಾಲ್ ಶೋಧಕಗಳು ಹಾಗೂ ತುರ್ತು ದೂರವಾಣಿ ಸೌಲಭ್ಯ ಇಲ್ಲದಿರುವುದನ್ನು ಪಿಐಎಲ್ ಎತ್ತಿ ತೋರಿಸಿತ್ತು.
ಭಾರತೀಯ ರೈಲ್ವೆ ತನ್ನ ಪ್ರತಿಕ್ರಿಯೆಯಲ್ಲಿ, ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್‌ಸಿಎಲ್) ಅಭಿವೃದ್ಧಿಪಡಿಸಿದ ಅಪಘಾತ ತಡೆ ಸಾಧನವನ್ನು ಈಶಾನ್ಯ ಫ್ರಾಂಟಿಯರ್ ರೈಲ್ವೆ ವಿಭಾಗಕ್ಕೆ ಸೇರಿದ 1,736 ಕಿಲೋಮೀಟರ್ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗುತ್ತಿದೆ ಎಂದು ತಿಳಿಸಿದೆ.
ಸಾಧನ ಅಳವಡಿಕೆ ವೇಳೆ ಕಾರ್ಯಾಚರಣೆ ಮತ್ತು ತಾಂತ್ರಿಕ ಸಮಸ್ಯೆಗಳು ಕಂಡು ಬಂದಿದ್ದು ಕೆಆರ್‌ಸಿಎಲ್ ಸಂಪೂರ್ಣವಾಗಿ ಅದನ್ನು ಪರಿಹರಿಸಲು ಸಾಧ್ಯವಾಗಿಲ್ಲ. ಆದರೂ ಭಾರತೀಯ ರೈಲ್ವೆ ಸ್ವಯಂಚಾಲಿತ ರೈಲು ಸುರಕ್ಷಾ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಲಿದೆ ಎಂದು ಅದು ಪ್ರತಿಪಾದಿಸಿದೆ.
ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಕ್ಯಾಮೆರಾ ಅಳವಡಿಸುವ ಯತ್ನವಾಗಿ ರೈಲ್ವೆಯು 6,124 ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು 257 ನಿಲ್ದಾಣಗಳಲ್ಲಿ ಕೆಲಸ ಪ್ರಗತಿಯಲ್ಲಿದೆ ಎಂಬ ಮಾಹಿತಿ ಅಫಿಡವಿಟ್‌ನಲ್ಲಿದೆ.
ಆಲ್ಕೋಹಾಲ್ ಪತ್ತೆ ಮಾಡುವ ಸಾಧನಗಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅದು ರೈಲ್ವೇ ಕಾಯಿದೆಯ ಸೆಕ್ಷನ್ 145ರ ಅಡಿಯಲ್ಲಿ ಕ್ರಿಮಿನಲ್ ಕ್ರಮ ಜರುಗಿಸಲಾಗಿದ್ದು ಜುಲೈ 2022ರ ಹೊತ್ತಿಗೆ 42,086 ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ರೈಲ್ವೆ ಹೇಳಿದೆ.
ರೈಲ್ವೆ ಸಂರಕ್ಷಣಾ ಪಡೆ ಮತ್ತು ಸರ್ಕಾರಿ ರೈಲ್ವೆ ಪೊಲೀಸರು ಪ್ರಯಾಣಿಕರ ಸುರಕ್ಷೆಗಾಗಿ ಪ್ರತಿದಿನ 3,200 ರೈಲುಗಳ ಬೆಂಗಾವಲು ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅದು ಹೇಳಿದೆ.
ರೈಲ್ವೇ ನಿಲ್ದಾಣಗಳ ಪ್ರವೇಶ ದ್ವಾರಗಳಲ್ಲಿ 977 ಬಾಗಿಲು ಚೌಕಟ್ಟು ಲೋಹ ಶೋಧಕಗಳು, 4,846 ಕೈಯಲ್ಲಿ ಹಿಡಿಯಬಹುದಾದ ಲೋಹ ಶೋಧಕಗಳಲ್ಲದೆ 245 ಸರಕು ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ ಎಂದು ರೈಲ್ವೆ ಹೇಳಿದೆ.