

ಪೌರೋಹಿತ್ಯ ಮತ್ತು ಫೋಟೋಗ್ರಾಫರ್ ಕೆಲಸ ಮಾಡಿಕೊಂಡು ಎರಡನೇ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಸಲಹುತ್ತಿರುವ ಪತಿಯು ಮೊದಲ ಪತ್ನಿ, ಮೂವರು ಮಕ್ಕಳು ಹಾಗೂ ತಾಯಿಯನ್ನು ನೋಡಿಕೊಳ್ಳಲು ಆದಾಯ ಇಲ್ಲ ಎಂದು ಹೇಳಲಾಗದು ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಆದೇಶಿಸಿದೆ.
ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿರುವ ಜೀವನಾಂಶ ಆದೇಶ ಬದಿಗೆ ಸರಿಸುವಂತೆ ಕೋರಿ ಪತಿ ಸಲ್ಲಿಸಿದ್ದ ಆದೇಶ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಕೆ ಬಿ ಗೀತಾ ಅವರ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.
“ಪತಿಗೆ ನಿಜವಾಗಲೂ ಯಾವುದೇ ಉದ್ಯೋಗ ಇಲ್ಲ ಎಂದಾದರೆ ಆತ ತನ್ನ ಎರಡನೇ ಪತ್ನಿ ಮತ್ತು ಇಬ್ಬರು ಮಕ್ಕಳ ಉಪಚಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಎರಡನೇ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿರುವುದಾಗಿ ಆತ ಒಪ್ಪಿಕೊಂಡಿದ್ದಾರೆ. ಇದು ತನ್ನನ್ನು ಮತ್ತು ಪ್ರತಿವಾದಿಗಳನ್ನು ನೋಡಿಕೊಳ್ಳಲು ಅಗತ್ಯವಾದ ಆದಾಯವನ್ನು ಆತ ಹೊಂದಿದ್ದಾನೆ ಎಂಬುದನ್ನು ರುಜುವಾತುಪಡಿಸುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ಪತಿಯು ತನ್ನ ಆದಾಯದ ದಾಖಲೆಗಳನ್ನು ಸಂಪೂರ್ಣವಾಗಿ ನ್ಯಾಯಾಲಯದ ಮುಂದೆ ಇಟ್ಟಿಲ್ಲ. ಮಾಸಿಕವಾಗಿ ₹5,000 ರಿಂದ ₹6,000 ಸಂಪಾದಿಸುತ್ತಿರುವುದಾಗಿ ಹೇಳಿದರೂ ಆತ ಬೆಳಗಾವಿಯಲ್ಲಿ ಡಿಜಿಟಲ್ ಫೋಟೊ ಸ್ಟುಡಿಯೊ ನಡೆಸುತ್ತಿದ್ದಾರೆ ಮತ್ತು ದೇವಾಲಯದಲ್ಲಿ ಪೂಜಾರಿಯಾಗಿಯೂ ಕೆಲಸ ಮಾಡುತ್ತಾರೆ ಎಂಬುದಕ್ಕೆ ದಾಖಲೆ ಇದೆ. ವಿಚಾರಣಾಧೀನ ನ್ಯಾಯಾಲಯದಲ್ಲಿ ಪಾಟೀ ಸವಾಲಿನಲ್ಲಿ ವೇಳೆ ಬ್ಯಾಂಕ್ ಖಾತೆಯ ಬಗ್ಗೆ ಹೇಳಿದ್ದರೂ ಅದನ್ನು ಹಾಜರುಪಡಿಸಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
“ಆದಾಯದ ಮೂಲವನ್ನು ಬಚ್ಚಿಟ್ಟಿರುವ ಪತಿಯ ನೈಜ ಆದಾಯದ ಕುರಿತಾಗಿ ವಿರುದ್ಧ ನಿಲುವು ತಳೆಯುವಂತೆ ಮಾಡಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಮೊದಲನೇ ಪತ್ನಿಯು ಒಂದೂವರೆ ದಶಕದ ಹಿಂದೆ ತನ್ನನ್ನು ತೊರೆದಿದ್ದು, ತನ್ನ ತಾಯಿ ಬಲವಂತಾಗಿ ಎರಡನೇ ಮದುವೆ ಮಾಡಿಸಿದ್ದರು. ಮನೆ ಬಾಡಿಗೆ ಪಾವತಿಸಲು ಸಾಧ್ಯವಾಗದೇ ಇರುವುದರಿಂದ ಎರಡನೇ ಪತ್ನಿಯ ತವರು ಮನೆ ಸೇರಿದ್ದೇನೆ. ಪೂಜಾ ಕೈಂಕರ್ಯಗಳಿಂದ ಅಷ್ಟೇನು ಹಣ ಸಂಪಾದನೆಯಾಗುವುದಿಲ್ಲ. ತಾಯಿಯು 20 ಎಕರೆ ಆಸ್ತಿ ಮಾರಾಟ ಮಾಡಿದ್ದು, ಹೋಟೆಲ್‌ನಲ್ಲಿ ಕೆಲಸ ಮಾಡಿ ಮಾಸಿಕ ₹10,000 ಸಂಪಾದಿಸುತ್ತಾರೆ. ಹೀಗಾಗಿ, ಅವರನ್ನೂ ನೋಡಿಕೊಳ್ಳಲಾಗದು ಎಂದು ಅರ್ಜಿದಾರ ಪುತ್ರ ವಾದಿಸಿದ್ದನು.
“ತಾಯಿ ಸಂಪಾದನೆ ಮಾಡುತ್ತಿದ್ದರೂ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸಂಪಾದನೆಯ ಹಣವೆಲ್ಲಾ ವೈದ್ಯಕೀಯ ವೆಚ್ಚಕ್ಕೆ ವಿನಿಯೋಗವಾಗುತ್ತಿದೆ. ತಾಯಿ ಮಾರಾಟ ಮಾಡಿರುವ ಆಸ್ತಿಯು ಆಕೆ ಅವರ ತಂದೆಯ ಮನೆಯಿಂದ ಬಂದಿದ್ದು, ಅದರ ಮೇಲೆ ಪುತ್ರನಿಗೆ ಕಾನೂನಾತ್ಮಕ ಹಕ್ಕಿಲ್ಲ. ತನ್ನ ಆಸ್ತಿಯನ್ನು ಆಕೆ ಮಾರಾಟ ಮಾಡಿದ್ದಾಳೆ ಎಂದು ಅವರನ್ನು ನೋಡಿಕೊಳ್ಳುವುದಿಲ್ಲ ಎನ್ನಲಾಗದು” ಎಂದು ನ್ಯಾಯಾಲಯ ಹೇಳಿದೆ.
ಇದೆಲ್ಲವನ್ನೂ ಪರಿಗಣಿಸಿರುವ ನ್ಯಾಯಾಲಯವು ಮೊದಲ ಪತ್ನಿ ತಾಯಿಗೆ ಮಾಸಿಕ ತಲಾ ₹5,000 ಮತ್ತು ಮೊದಲನೇ ಮದುವೆಯಿಂದ ಜನಿಸಿರುವ ಮೂವರು ಮಕ್ಕಳಿಗೆ ಮಾಸಿಕ ತಲಾ ₹2,500 ಜೀವನಾಂಶ ಪಾವತಿಸಬೇಕು. ಇದನ್ನು ಅರ್ಜಿ ಸಲ್ಲಿಸಿದ ದಿನದಿಂದ ಮಕ್ಕಳು ವಯಸ್ಕರಾಗುವವರೆಗೆ ಪಾವತಿಸಬೇಕು ಎಂದು ನ್ಯಾಯಾಲಯ ಪತಿಗೆ ನಿರ್ದೇಶಿಸಿದೆ.