[ಕೆರೆ ಸಂರಕ್ಷಣೆ] ಬೇಗೂರು ಕೆರೆ ಪ್ರದೇಶದಲ್ಲಿ 81 ಒತ್ತುವರಿಗಳ ಪೈಕಿ 33 ತೆರವು: ಹೈಕೋರ್ಟ್‌ಗೆ ಬಿಬಿಎಂಪಿ ವಿವರಣೆ

ವಿಚಾರಣೆ ವೇಳೆ ಬೇಗೂರು ಮತ್ತು ಸುಬ್ರಹ್ಮಣ್ಯಪುರ ಕೆರೆಗಳ ನಿರ್ವಹಣೆ ಉಸ್ತುವಾರಿ ಹೊತ್ತಿರುವ ಬಿಬಿಎಂಪಿ ದಕ್ಷಿಣ ವಲಯ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರು ಸಲ್ಲಿಸಿರುವ ಅಫಿಡವಿಟ್‌ ಅನ್ನು ಪಾಲಿಕೆ ವಕೀಲರು ಪೀಠಕ್ಕೆ ಸಲ್ಲಿಸಿದರು.
BBMP and Karnataka HC
BBMP and Karnataka HC
Published on

ಬೆಂಗಳೂರು ನಗರದ ಬೇಗೂರು ಕೆರೆ ಪ್ರದೇಶದಲ್ಲಿ ಒಟ್ಟು 81 ಒತ್ತುವರಿ ಅಕ್ರಮಗಳು ಪತ್ತೆಯಾಗಿದ್ದು, ಆ ಪೈಕಿ ಈಗಾಗಲೇ 33 ಒತ್ತುವರಿ ತೆರವು ಮಾಡಲಾಗಿದೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ಗೆ ಗುರುವಾರ ಅಫಿಡವಿಟ್‌ ಸಲ್ಲಿಸಿದೆ.

ಬೆಂಗಳೂರಿನ ಕೆರೆಗಳ ನಿರ್ವಹಣೆ ಹಾಗೂ ಸಂರಕ್ಷಣೆಗೆ ಸಂಬಂಧಿಸಿದಂತೆ 2014ರಲ್ಲಿ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ವೇಳೆ ಬೇಗೂರು ಮತ್ತು ಸುಬ್ರಹ್ಮಣ್ಯಪುರ ಕೆರೆಗಳ ನಿರ್ವಹಣೆ ಉಸ್ತುವಾರಿ ಹೊತ್ತಿರುವ ಬಿಬಿಎಂಪಿ ದಕ್ಷಿಣ ವಲಯ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರು ಸಲ್ಲಿಸಿರುವ ಅಫಿಡವಿಟ್‌ ಅನ್ನು ಪಾಲಿಕೆ ವಕೀಲರು ಪೀಠಕ್ಕೆ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಾಲಯವು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು.

ಅಫಿಡವಿಟ್‌ನಲ್ಲಿ ಏನಿದೆ: ಹೈಕೋರ್ಟ್ ನಿರ್ದೇಶನದಂತೆ ಬೇಗೂರು ಕೆರೆ ಪ್ರದೇಶದ ಸರ್ವೇ ನಡೆಸಲಾಗಿದೆ. ಜುಲೈ 26ರಂದು ಸರ್ವೇ ಪೂರ್ಣಗೊಂಡಿದ್ದು, ಒಟ್ಟು 81 ಒತ್ತುವರಿಗಳು ಪತ್ತೆಯಾಗಿವೆ. ಬಳಿಕ ಎಲ್ಲಾ ಒತ್ತುವರಿದಾರರಿಗೆ ಜುಲೈ 27ರಂದು ನೋಟಿಸ್ ಜಾರಿಗೊಳಿಸಲಾಗಿದೆ. 81 ಒತ್ತುವರಿಗಳ ಪೈಕಿ ಈಗಾಗಲೇ 33 ಒತ್ತುವರಿ ತೆರವುಗೊಳಿಸಲಾಗಿದೆ. 45 ಒತ್ತುವರಿದಾರರು ಒತ್ತುವರಿ ತೆರವಿಗೆ ಸಿವಿಲ್ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ಪಡೆದುಕೊಂಡಿದ್ದಾರೆ. ಒತುವರಿ ಮಾಡಿರುವವರ ಅರ್ಜಿಗಳಿಗೆ ಈಗಾಗಲೇ ಆಕ್ಷೇಪಣೆ ಸಲ್ಲಿಸಲಾಗಿದೆ. ಅರ್ಜಿಗಳು ಸೆಪ್ಟೆಂಬರ್‌ 3ರಂದು ವಿಚಾರಣೆಗೆ ಬರಲಿವೆ ಎಂದು ವಿವರಿಸಲಾಗಿದೆ.

ಅಲ್ಲದೇ, ಒತ್ತುವರಿಯೊಂದಕ್ಕೆ ಸಂಬಂಧಿಸಿದ ವ್ಯಾಜ್ಯವು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿದೆ. ಒತ್ತುವರಿ ತೆರವು ಕಾರ್ಯಾಚರಣೆ ಮತ್ತು ತಂತಿ ಬೇಲಿ ಅಳವಡಿಸಿರುವುದಕ್ಕೆ ಸಂಬಂಧಿಸಿದ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಅರಕೆರೆಯ ಬಫರ್ ಜೋನ್‌ನಲ್ಲಿ ಹ್ಯಾಬಿಟೇಟ್‌ ಹೆಸರಿನಲ್ಲಿ ವಸತಿ ಸಮುಚ್ಛಯ ನಿರ್ಮಿಸಲಾಗಿದೆ. ಆ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ದಕ್ಷಿಣ ವಲಯದ ಜಂಟಿ ನಿರ್ದೇಶಕರು (ನಗರ ಯೋಜನೆ) ನಕ್ಷೆ ಮಂಜೂರಾತಿ ಮಾಡಿದ್ದಾರೆ. ಸರ್ವೇ ಮಾಡಿ ಬಫರ್ ವಲಯದ ಬಗ್ಗೆ ಮಾಹಿತಿ ನೀಡುವಂತೆ ಜಂಟಿ ನಿರ್ದೇಶಕರಿಗೆ ಕೋರಲಾಗಿದೆ. ಕನ್ನಹಳ್ಳಿ ಕೆರೆ ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿದೆ. ಸರ್ಕಾರ ಇತ್ತೀಚೆಗಷ್ಟೆ ಅಭಿವೃದ್ಧಿಗಾಗಿ ಆ ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಿದೆ. ಆದರೆ, ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿಲ್ಲ. ಕೆರೆ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆಯು ಜಲಮಂಡಳಿ ಜೊತೆಗೆ ಸೇರಿ ತುರ್ತು ಕ್ರಮ ಜರುಗಿಸುತ್ತಿದೆ. ತರಿಹೋಬನ ಕೆರೆ ಅಭಿವೃದ್ಧಿಗೆ ಅಮೃತ್ ನಗರೋತ್ಥಾನ ಕ್ರಿಯಾ ಯೋಜನೆಯಡಿ 4.5 ಕೋಟಿ ರೂಪಾಯಿ ಮಂಜೂರಾತಿಗೆ ಅನುಮೋದನೆ ಸಿಕ್ಕಿದೆ. ತಂತಿ ಬೇಲಿ ಅಳವಡಿಕೆ ಸೇರಿದಂತೆ ಆ ಕೆರೆಯ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಅಫಿಡವಿಟ್‌ನಲ್ಲಿ ತಿಳಿಸಿದೆ.

Kannada Bar & Bench
kannada.barandbench.com