ಮೀಸಲು ಅರಣ್ಯಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಬೇಕೇ? ಪರಿಶೀಲಿಸಲಿದೆ ಕೇರಳ ಹೈಕೋರ್ಟ್

ಮಮ್ಮುಟ್ಟಿ ಅಭಿನಯದ 'ಉಂಡಾ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕಾಡಿಗೆ ಹಾನಿಯಾಗಿದೆ ಎಂದು ಹೈಕೋರ್ಟ್ನಲ್ಲಿ ಸಲ್ಲಿಸಲಾದ ಅರ್ಜಿ ಕಳವಳ ವ್ಯಕ್ತಪಡಿಸಿತ್ತು.
Forest
Forest
Published on

ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳು, ಹುಲಿ ಮೀಸಲು ಪ್ರದೇಶಗಳು ಮತ್ತಿತರ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ವಾಣಿಜ್ಯ ಚಲನಚಿತ್ರ ಚಿತ್ರೀಕರಣಕ್ಕೆ ಅನುಮತಿ ನೀಡುವ ಬಗ್ಗೆ ಯಾವುದೇ ನೀತಿ ಇದೆಯೇ ಎಂದು ಸ್ಪಷ್ಟಪಡಿಸುವಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರವನ್ನು ಕೇಳಿದೆ [ಏಂಜಲ್ಸ್ ನಾಯರ್ ಮತ್ತು ಅರಣ್ಯ ಮತ್ತು ವನ್ಯಜೀವಿ ಇಲಾಖೆ ಪ್ರಧಾನ ಕಾರ್ಯದರ್ಶಿ ನಡುವಣ ಪ್ರಕರಣ].

ಕಾಸರಗೋಡಿನ ಮೀಸಲು ಅರಣ್ಯದಲ್ಲಿ 2018ರಲ್ಲಿ ಮಮ್ಮುಟ್ಟಿ ಅಭಿನಯದ ' ಉಂಡಾ' ಚಿತ್ರದ ಚಿತ್ರೀಕರಣದ ವೇಳೆ ಉಂಟಾದ ಪರಿಸರ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಏಂಜಲ್ಸ್ ನಾಯರ್ ಎಂಬುವವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್‌ದಾರ್‌ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರಿದ್ದ ವಿಭಾಗೀಯ ಪೀಠ ಈ ಪ್ರಶ್ನೆ ಕೇಳಿದೆ.

Also Read
ಖಾಸಗಿ ರೆಸಾರ್ಟ್‌ನಿಂದ ಅರಣ್ಯ ಒತ್ತುವರಿ ತೆರವಿಗೆ ಹೈಕೋರ್ಟ್‌ ನಿರ್ದೇಶನ

ಅರ್ಜಿಗೆ ಪ್ರತಿಕ್ರಿಯಿಸಿದ ರಾಜ್ಯದ ಅರಣ್ಯ ಇಲಾಖೆ  2013ರಲ್ಲಿ ಹೊರಡಿಸಿದ್ದ ಸರ್ಕಾರಿ ಆದೇಶವನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.  ಅರಣ್ಯ ಪ್ರದೇಶಗಳಲ್ಲಿ ವಾಣಿಜ್ಯ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಶೈಕ್ಷಣಿಕ ಚಲನಚಿತ್ರಗಳನ್ನು ಚಿತ್ರೀಕರಿಸಲು ಪಾವತಿಸಬೇಕಾದ ಶುಲ್ಕವನ್ನು ಅದರಲ್ಲಿ ಪಟ್ಟಿ ಮಾಡಲಾಗಿದೆ.

ಆದರೆ ಕಾಡುಗಳಲ್ಲಿ ಚಿತ್ರೀಕರಣಕ್ಕೆ ಅಂತಹ ಅನುಮತಿ ಅಪೇಕ್ಷಣೀಯವೇ ಎಂದು ನ್ಯಾಯಾಲಯ ಕೇಳಿತು. ಜೊತೆಗೆ ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಅಭಯಾರಣ್ಯಗಳು, ಹುಲಿ ಮೀಸಲು ಪ್ರದೇಶಗಳು ಮತ್ತಿತರ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ವಾಣಿಜ್ಯ ಚಲನಚಿತ್ರ ಚಿತ್ರೀಕರಣಕ್ಕೆ ಅನುಮತಿ ನೀಡುವ ಬಗ್ಗೆ ಯಾವುದೇ ನೀತಿ ಇದೆಯೇ ಎಂದು ಜೂನ್ 2ರಂದು ನೀಡಿದ ಆದೇಶದಲ್ಲಿ  ಕೇಳಿದೆ.

Also Read
ಅರಣ್ಯ ಭೂಮಿ ಒತ್ತುವರಿ ಪ್ರಕರಣ: ದೋಷಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ

2013ರಲ್ಲಿ ಹೊರಡಿಸಲಾದ ಸರ್ಕಾರಿ ಆದೇಶ ಸಂರಕ್ಷಿತ ಪ್ರದೇಶಗಳಲ್ಲಿನ ಚಟುವಟಿಕೆಗಳಿಗೆ ಪಾವತಿಸಬೇಕಾದ ಪ್ರವೇಶ ಶುಲ್ಕ ದರಗಳು ಮತ್ತು ಭದ್ರತಾ ಠೇವಣಿಗಳ ಪರಿಷ್ಕರಣೆಯ ಬಗ್ಗೆ ಮಾತ್ರ ಹೇಳುತ್ತದೆ. ಕಾಡುಗಳಲ್ಲಿ ಚಲನಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ನೀಡುವ ಬಗ್ಗೆ ಯಾವುದೇ ಸಮಗ್ರ ನೀತಿಯನ್ನು ಅದು ಒಳಗೊಂಡಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಈ ಅಂಶದ ಬಗ್ಗೆ ಸೂಚನೆಗಳನ್ನು ಸರ್ಕಾರದಿಂದ ಪಡೆಯಲು ರಾಜ್ಯ ಸರ್ಕಾರ ಸಮಯಾವಕಾಶ ಕೋರಿದ್ದರಿಂದ, ನ್ಯಾಯಾಲಯ ವಿಚಾರಣೆಯನ್ನು ಜೂನ್ 23ರವರೆಗೆ ಮುಂದೂಡಿತು. ಪ್ರಕರಣದಲ್ಲಿ ಸಹಾಯ ಮಾಡಲು ವಕೀಲ ಮನು ವ್ಯಾಸನ್ ಪೀಟರ್ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿತು.

[ತೀರ್ಪಿನ ಪ್ರತಿ]

Attachment
PDF
Angels_Nair_v__Principal_Secretary__Forest
Preview
Kannada Bar & Bench
kannada.barandbench.com