ಮಲಬಾರ್ ಪರೋಟಾಕ್ಕೆ ಶೇ 5ರಷ್ಟು ಜಿಎಸ್‌ಟಿ ವಿಧಿಸಬೇಕೇ ವಿನಾ ಶೇ 18ರಷ್ಟಲ್ಲ: ಕೇರಳ ಹೈಕೋರ್ಟ್

ಪರೋಟಾ ಪದಾರ್ಥ ಮತ್ತು ತಯಾರಿಕೆ ಶೇ 18ರಷ್ಟು ಜಿಎಎಸ್‌ಟಿ ವ್ಯಾಪ್ತಿಗೆ ಬರದೆ ಇರುವ ಉತ್ಪನ್ನಗಳಂತೆಯೇ ಇದ್ದು ಪರೋಟಾಗೆ ಶೇ 18ರಷ್ಟು ಜಿಎಸ್‌ಟಿ ವಿಧಿಸುವುದು ಅನ್ಯಾಯದ ಕ್ರಮವಾಗುತ್ತದೆ ಎಂದಿದೆ ಪೀಠ.
ಮಲಬಾರ್ ಪರೋಟಾಕ್ಕೆ ಶೇ 5ರಷ್ಟು ಜಿಎಸ್‌ಟಿ ವಿಧಿಸಬೇಕೇ ವಿನಾ ಶೇ 18ರಷ್ಟಲ್ಲ: ಕೇರಳ ಹೈಕೋರ್ಟ್

ಮಲಬಾರ್ ಪರೋಟಾ ಶೇ  5ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಬರಲಿದೆಯೇ ವಿನಾ ಶೇ 18ರ ಜಿಎಸ್‌ಟಿ ವ್ಯಾಪ್ತಿಗೆ ಅಲ್ಲ ಎಂದು ಕೇರಳ ಹೈಕೋರ್ಟ್‌ ಈಚೆಗೆ ತಿಳಿಸಿದೆ [ಮಾಡರ್ನ್ ಫುಡ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಪರೋಟಾ ತಯಾರಿಕೆಗೆ ಬಳಸಲಾಗುವ ಪದಾರ್ಥಗಳು ಮತ್ತು ತಯಾರಿಕಾ ವಿಧಾನ ಶೇ 5 ಜಿಎಸ್‌ಟಿ ವ್ಯಾಪ್ತಿಗೆ ಬರುವ ಉತ್ಪನ್ನಗಳಂತೆಯೇ ಇದ್ದು ಪರೋಟಾಗೆ ಶೇ 18ರಷ್ಟು ಜಿಎಸ್‌ಟಿ ವಿಧಿಸುವುದು ಅನ್ಯಾಯದ ಕ್ರಮವಾಗುತ್ತದೆ ಎಂದು ನ್ಯಾ. ದಿನೇಶ್ ಕುಮಾರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಮಾಡರ್ನ್ ಫುಡ್ ಎಂಟರ್‌ಪ್ರೈಸಸ್ ಪ್ರೈ.ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ. ತನ್ನ ಉತ್ಪನ್ನಗಳಾದ ಕ್ಲಾಸಿಕ್ ಮಲಬಾರ್ ಪರೋಟಾ ಮತ್ತು ಸಂಪೂರ್ಣ ಗೋಧಿ ಮಲಬಾರ್ ಪರೋಟಾಗಳಿಗೆ ಕೇಂದ್ರ/ರಾಜ್ಯ ಸರಕು ಮತ್ತು ಸೇವಾ ತೆರಿಗೆ ಕಾಯಿದೆಯಿಂದ ಹೊರಡಿಸಲಾದ ದರ ಅಧಿಸೂಚನೆಗಳ ಪ್ರಕಾರ ಶೇ 18ರಷ್ಟು ಜಿಎಸ್‌ಟಿ ವಿಧಿಸಬೇಕು ಎಂದು ಮೇಲ್ಮನವಿ ಪ್ರಾಧಿಕಾರ ಹೊರಡಿಸಿದ್ದ ಆದೇಶವನ್ನು ಮಾಡರ್ನ್‌ ಫುಡ್‌ ಪ್ರಶ್ನಿಸಿತ್ತು.

ಭಾರತದ ಚಪ್ಪಟೆ ರೊಟ್ಟಿಗಳು 1905ರ ಎಚ್‌ಎಸ್‌ಎನ್‌ ಕೋಡ್‌ ಅಡಿಯಲ್ಲಿ ʼಬ್ರೆಡ್‌ʼ ಎಂಬ ವ್ಯಾಪ್ತಿಗೆ ಬರುವುದರಿಂದ 1975 ರ ಮೊದಲ ಶೆಡ್ಯೂಲ್ ಟು ಕಸ್ಟಮ್ಸ್ ಟ್ಯಾರಿಫ್ ಕಾಯಿದೆಯ ಸುಂಕದ ಐಟಂ ಸಂಖ್ಯೆ.1905 9090 ರ ಅಡಿಯಲ್ಲಿ ಪರೋಟಾ ಬರುತ್ತವೆ ಎಂದು ಅರ್ಜಿದಾರರು ವಾದಿಸಿದ್ದರು. (1905ರ ಎಚ್‌ಎಸ್‌ಎನ್‌ ಕೋಡ್‌ ಆರು-ಅಂಕಿಯ ಪ್ರಮಾಣಿತ ಕೋಡ್ ಆಗಿದ್ದು, ತೆರಿಗೆ ಉದ್ದೇಶಗಳಿಗಾಗಿ ಸರಕುಗಳು ಮತ್ತು ಉತ್ಪನ್ನಗಳನ್ನು ವರ್ಗೀಕರಿಸಲು ಬಳಸಲಾಗುತ್ತದೆ.)

1905ರ ಎಚ್‌ಎಸ್‌ಎನ್‌ ಕೋಡ್‌ ಹೇಳುವ  ಬ್ರೆಡ್, ಪೇಸ್ಟ್ರಿ, ಕೇಕ್‌ಗಳು, ಬಿಸ್ಕೆಟ್‌ ಹಾಗೂ ಇತರ ಬೇಕರಿ ಉತ್ಪನ್ನಗಳಂತಹ ಪದಾರ್ಥಗಳ ವ್ಯಾಪ್ತಿಗೇ ಪರೋಟಾ ಕೂಡ ಬರುತ್ತದೆ ಮತ್ತು ಅದರ ತಯಾರಿಕೆ ಕೂಡ ಈ ಉತ್ಪನ್ನಗಳ ತಯಾರಿಕೆಯಂತೆಯೇ ಇದೆ ಎಂಬುದು ಅರ್ಜಿದಾರರ ಪ್ರಮುಖ ವಾದವಾಗಿತ್ತು.  

ಆದರೆ ಇದನ್ನು ಸರ್ಕಾರಿ ವಕೀಲರು ವಿರೋಧಿಸಿದರು. ಪದಾರ್ಥಗಳು ಮತ್ತು ತಯಾರಿಕೆ ಪ್ರಕ್ರಿಯೆ ಬೇರೆ ಬೇರೆಯಾಗಿದ್ದು ಪರೋಟಾ ಬ್ರೆಡ್‌ನಂತೆ ಎಂದು ಯಾರೂ ತಪ್ಪಾಗಿ ಭಾವಿಸಲಾಗದು ಎಂದರು.

ವಾದಗಳನ್ನು ಆಲಿಸಿದ ನ್ಯಾಯಾಲಯ ಮಲಬಾರ್ ಪರೋಟಾ 1905ರ ಎಚ್‌ಎಸ್‌ಎನ್‌ ಕೋಡ್‌ನಲ್ಲಿರುವ ಉತ್ಪನ್ನಗಳಿಗೆ ಹೋಲಿಕೆಯಾಗುವುದರಿಂದ ಅದರ ವ್ಯಾಪ್ತಿಗೇ ಬರುತ್ತದೆ ಎಂಬ ಮಾಡರ್ನ್‌ ಫುಡ್‌ ವಾದವನ್ನು ಪುರಸ್ಕರಿಸಿತು. 

Related Stories

No stories found.
Kannada Bar & Bench
kannada.barandbench.com