ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿ ರಚನೆ ಪರಿಶೀಲಿಸಲು ಕಮಿಷನರ್ ನೇಮಿಸಿ: ಹೈಕೋರ್ಟ್‌ನಲ್ಲಿ ಹಿಂದೂ ಪಕ್ಷಕಾರರ ಪರ ವಾದ

ಮಂಗಳೂರಿನ ತೆಂಕಳೈಪಾಡಿ ಗ್ರಾಮದ ಧನಂಜಯ್ ಹಾಗೂ ಬಡುಗಳೈಪಾಡಿ ಗ್ರಾಮದ ಮನೋಜ್ ಕುಮಾರ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್‌ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
Karnataka HC and Sr Lawyer Vivek Subbareddy
Karnataka HC and Sr Lawyer Vivek Subbareddy

ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಕಮಿಷನರ್ ನೇಮಕ ಮಾಡಿ ಸ್ಥಳ ಪರಿಶೀಲನೆಗೆ ಅವಕಾಶ ನೀಡಲಾಗಿದ್ದು, ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿಯಲ್ಲಿ ದೇವಾಲಯ ಮಾದರಿಯ ರಚನೆ ಪತ್ತೆಯಾಗಿರುವ ಕುರಿತು ಪರಿಶೀಲನೆ ನಡೆಸಲು ಕಮಿಷನರ್ ನೇಮಕ ಮಾಡಬೇಕು ಎಂದು ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಕರ್ನಾಟಕ ಹೈಕೋರ್ಟ್‌ಗೆ ಬುಧವಾರ ಮನವಿ ಮಾಡಿದರು.

ಮಂಗಳೂರಿನ ತೆಂಕಳೈಪಾಡಿ ಗ್ರಾಮದ ಧನಂಜಯ್ ಹಾಗೂ ಬಡುಗಳೈಪಾಡಿ ಗ್ರಾಮದ ಮನೋಜ್ ಕುಮಾರ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್‌ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು ಮಸೀದಿಯ ಒಳಗೆ ದೇವಾಲಯವಿತ್ತೋ, ಇಲ್ಲವೋ ಎಂಬ ಕುರಿತ ಸಾಕ್ಷಾೃಧಾರಗಳನ್ನು ಸ್ಥಳ ಸಮೀಕ್ಷೆ ನಡೆಸಿಯೇ ಸಂಗ್ರಹಿಸಬೇಕಿದೆ. ಈ ಕೆಲಸವನ್ನು ಬೇರೆಯವರು ಮಾಡಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ತಂತ್ರಜ್ಞಾನದ ಮೂಲಕ ಮಾತ್ರ ಇದು ಸಾಧ್ಯವಾಗಲಿದೆ. ಆದ್ದರಿಂದ, ಮಳಲಿ ಮಸೀದಿಯ ಪರಿಶೀಲನೆಗಾಗಿ ಕಮಿಷನರ್ ನೇಮಕ ಮಾಡುವ ಅಗತ್ಯವಿದೆ ಎಂದು ಪೀಠಕ್ಕೆ ವಿವರಿಸಿದರು.

ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆಯಾದಾಗಲೂ ಆ ಅರ್ಜಿಯ ವಿಚಾರಣಾ ಮಾನ್ಯತೆಯ ಕುರಿತು ಪ್ರಶ್ನೆ ಎದುರಾಗಿತ್ತು. ಆದರೆ, ನ್ಯಾಯಾಲಯ ಮೊದಲು ಸ್ಥಳಪರಿಶೀಲನೆ ನಡೆಯಲಿ, ಅರ್ಜಿಯ ವಿಚಾರಣಾ ಮಾನ್ಯತೆ ಕುರಿತು ಮುಂದೆಯೂ ವಿಚಾರಣೆ ನಡೆಸಬಹುದು ಎಂದು ತಿಳಿಸಿ ಕಮಿಷನರ್ ನೇಮಕ ಮಾಡಿತ್ತು. ವಿಶೇಷ ಸಂದರ್ಭಗಳಲ್ಲಿ ಆರಂಭಿಕ ಹಂತದಲ್ಲೇ ಕಮಿಷನರ್ ನೇಮಕ ಮಾಡಬಹುದು. ಮೊದಲು ಪುರಾವೆಗಳನ್ನು ಸಂಗ್ರಹಿಸಿ, ಸುರಕ್ಷಿತವಾಗಿಡಬೇಕು. ಆದ್ದರಿಂದ, ಮಳಲಿ ಮಸೀದಿ ವಿಚಾರದಲ್ಲೂ ಜ್ಞಾನವಾಪಿ ಮಸೀದಿ ಪ್ರಕರಣದಂತೆ ಅರ್ಜಿಯ ವಿಚಾರಣಾ ಮಾನ್ಯತೆಯ ವಿಷಯವನ್ನು ಬದಿಗಿರಿಸಿ, ಕಮಿಷನರ್ ನೇಮಕ ಮಾಡಬೇಕು. ಈ ಕುರಿತು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ಪುರಾತನ ಸ್ಮಾರಕ: ಸಾರ್ವಜನಿಕ ಪೂಜಾ ಸ್ಥಳ ಕಾಯಿದೆಯು ಈ ಮಸೀದಿಗೆ ಅನ್ವಯಿಸುವುದಿಲ್ಲ. ಏಕೆಂದರೆ, ಮಸೀದಿಯವರೇ ಹೇಳಿರುವ ಪ್ರಕಾರ ಅದು 700ಕ್ಕೂ ಅಧಿಕ ವರ್ಷಗಳಷ್ಟು ಹಳೆಯದಾಗಿದೆ. ಅಲ್ಲಿ 1500ಕ್ಕೂ ಅಧಿಕ ವರ್ಷಗಳ ಹಳೆಯ ದೇವಾಲಯವಿದೆ ಎಂದು ಹಿಂದೂಗಳು ಹೇಳುತ್ತಿದ್ದಾರೆ. ಪ್ರಾಚೀನ ಸ್ಮಾರಕಗಳ ಕಾಯಿದೆ-1958ರ ಪ್ರಕಾರ 100 ವರ್ಷಕ್ಕಿಂತ ಹಳೆಯ ಕಟ್ಟಡಗಳು ಪುರಾತನ ಸ್ಮಾರಕವೆನಿಸಿಕೊಳ್ಳಲಿದ್ದು, ಆ ಕಟ್ಟಡಗಳಿಗೆ ಸಾರ್ವಜನಿಕ ಪೂಜಾ ಸ್ಥಳ ಕಾಯಿದೆ ಅನ್ವಯಿಸುವುದಿಲ್ಲ ಎಂದು ಪೀಠದ ಗಮನಸೆಳೆದರು. ವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದು, ಪ್ರತಿವಾದಿ ಮಸೀದಿಯ ಪರ ವಕೀಲರು ವಾದ ಮಂಡಿಸಲಿದ್ದಾರೆ.

Also Read
ಮಳಲಿ ಮಸೀದಿ ಪ್ರಕರಣ: ಅಸಲಿ ದಾವೆಯ ಸಿಂಧುತ್ವ ಸಂಬಂಧ ಆದೇಶ ಮಾಡದಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶನ

ಪ್ರಕರಣದ ಹಿನ್ನೆಲೆ: ಮಳಲಿ ಮಸೀದಿ ನವೀಕರಣ ಕಾಮಗಾರಿಯ ವೇಳೆ ದೇವಾಲಯ ಮಾದರಿ ರಚನೆ ಪತ್ತೆಯಾಗಿದೆ ಎನ್ನಲಾಗಿದ್ದು, ಆ ರಚನೆಯನ್ನು ಕೆಡವದಂತೆ ನಿರ್ಬಂಧ ವಿಧಿಸಲು ಕೋರಿ ಧನಂಜಯ್ ಹಾಗೂ ಮನೋಜ್ ಕುಮಾರ್ ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ರಚನೆ ತೆರವುಗೊಳಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸಿತ್ತು. ಈ ಮಧ್ಯೆ ಮಸೀದಿಯ ಆಡಳಿತ ಮಂಡಳಿ ಮಧ್ಯಂತರ ಅರ್ಜಿ ಸಲ್ಲಿಸಿ, ವಿವಾದಿತ ಸ್ಥಳ ವಕ್ಫ್ ಆಸ್ತಿಯಾಗಿದೆ. ಜತೆಗೆ, ಸಾರ್ವಜನಿಕ ಪೂಜಾ ಸ್ಥಳ ಕಾಯಿದೆ ಅಡಿಯಲ್ಲಿ ದಾವೆಯು ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ವಾದಿಸಿದ್ದರು. ಮತ್ತೊಂದೆಡೆ, ಮೂಲ ದಾವೆದಾರರೂ ಮಧ್ಯಂತರ ಅರ್ಜಿ ಸಲ್ಲಿಸಿ, ಮೊದಲು ಕಮಿಷನರ್ ಒಬ್ಬರನ್ನು ನೇಮಕ ಮಾಡಿ ಪರಿಶೀಲನೆ ನಡೆಸುವಂತೆ ಕೋರಿದ್ದರು. ಆದರೆ, ಸಿವಿಲ್ ನ್ಯಾಯಾಲಯ ಮೊದಲು ದಾವೆಯ ಸಿಂಧುತ್ವದ ಕುರಿತು ವಿಚಾರಣೆ ನಡೆಸುತ್ತಿದೆ. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Related Stories

No stories found.
Kannada Bar & Bench
kannada.barandbench.com