ಮಲಯಾಳಂ ನಟಿಯೊಬ್ಬರು ದಾಖಲಿಸಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ನಟ ಸಿದ್ದಿಕ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅವರಿಗೆ ಕೇರಳ ಹೈಕೋರ್ಟ್ ಮಂಗಳವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ವಕೀಲೆ ರಂಜಿತಾ ರೋಹಟ್ಗಿ ಅವರ ಮೂಲಕ ಸಿದ್ದಿಕ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಪ್ರಾಥಮಿಕ ಹಂತದ ದಾಖಲೆಗಳು ಹೇಳುವಂತೆ ಸಿದ್ದಿಕ್ ಅಪರಾಧದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಸಿದ್ದಿಕ್ ವಾದಿಸಿದ್ದರು. ಪ್ರಕರಣ ಕುರಿತು ನಟಿ ಒಮ್ಮೊಮ್ಮೆ ಒಂದೊಂದು ರೀತಿಯ ಹೇಳಿಕೆ ನೀಡಿರುವುದು ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತಿರುವುದಕ್ಕೆ ಸಾಕ್ಷಿ ಎಂದು ನುಡಿದಿದ್ದರು.
ಸಿದ್ದಿಕ್‌ಗೆ ಜಾಮೀನು ನೀಡಿದರೆ ಆತ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಸಿದ್ದಿಕ್ ಪ್ರತಿವಾದಿಗಳು ವಾದಿಸಿದ್ದರು.
ನ್ಯಾ. ಹೇಮಾ ಅವರ ವರದಿ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ, ಪಾತ್ರಕ್ಕಾಗಿ ಪಲ್ಲಂಗ ಹಾಗೂ ಲಿಂಗತಾರತಮ್ಯದ ಮೇಲೆ ಬೆಳಕು ಚೆಲ್ಲಿತ್ತು. ವರದಿ ಪ್ರಕಟಣೆಯ ಹಿನ್ನೆಲೆಯಲ್ಲಿ ಅನೇಕ ನಟರು, ನಿರ್ದೇಶಕರು ಹಾಗೂ ಚಿತ್ರಕರ್ಮಿಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದ್ದವು.
ತಮಿಳು ಚಿತ್ರವೊಂದರಲ್ಲಿ ನಟಿಸಲು ಅವಕಾಶ ನೀಡುವುದಕ್ಕಾಗಿ ಸಿದ್ದಿಕ್ ಲೈಂಗಿಕ ಬೇಡಿಕೆ ಇಟ್ಟಿದ್ದರು. ಇದನ್ನು ತಾನು ನಿರಾಕರಿಸಿದ್ದರಿಂದ ತಿರುವನಂತಪುರದ ಮ್ಯಾಸ್ಕಾಟ್ ಹೋಟೆಲ್‌ನಲ್ಲಿ 2016ರಲ್ಲಿ ತನ್ನ ಮೇಲೆ ಆತ ಅತ್ಯಾಚಾರವೆಸಗಿದ್ದಾರೆ ಎಂದು ನಟಿ ಆರೋಪಿಸಿದ್ದರು.
ನ್ಯಾ. ಹೇಮಾ ವರದಿ ಹಿನ್ನೆಲೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗಾಗಿ ರೂಪುಗೊಂಡಿರುವ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.
ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಸಿದ್ದಿಕ್ ವಾದಿಸಿದ್ದರು. ಪ್ರಕರಣ ಕುರಿತು ನಟಿ ಒಮ್ಮೊಮ್ಮೆ ಒಂದೊಂದು ರೀತಿಯ ಹೇಳಿಕೆ ನೀಡಿರುವುದು ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತಿರುವುದಕ್ಕೆ ಸಾಕ್ಷಿ ಎಂದು ನುಡಿದಿದ್ದರು.