ಬಹುಭಾಷಾ ನಟಿಯೊಬ್ಬರ ಮೇಲೆ 2017ರಲ್ಲಿ ನಡೆಸಿದ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣದ ಪ್ರಮುಖ ಸೂತ್ರಧಾರ ಎಂಬ ಆರೋಪ ಎದುರಿಸುತ್ತಿರುವ ಮಲಯಾಳಂ ನಟ ದಿಲೀಪ್‌ಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದ್ದು ಘಟನೆಗೆ ಸಂಬಂಧಿಸಿದ ವಿಡಿಯೊ ಇರುವ ಮೆಮೊರಿ ಕಾರ್ಡನ್ನು ಹೊಸದಾಗಿ ವಿಧಿ ವಿಜ್ಞಾನ ಪರೀಕ್ಷೆಗೊಳಪಡಿಸುವಂತೆ ಕೇರಳ ಹೈಕೋರ್ಟ್ ಮಂಗಳವಾರ ಆದೇಶಿಸಿದೆ [ಕೇರಳ ಸರ್ಕಾರ ಮತ್ತು ಎಕ್ಸ್‌ಎಕ್ಸ್‌ಎಕ್ಸ್ ನಡುವಣ ಪ್ರಕರಣ].
ಸರ್ಕಾರ ಸಲ್ಲಿಸಿದ್ದ ಮನವಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರದ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬೆಚು ಕುರಿಯನ್ ಥಾಮಸ್ ಮೇಲಿನ ತೀರ್ಪು ನೀಡಿದರು.
“ಪ್ರಶ್ನೆಯಲ್ಲಿರುವ ಆದೇಶವನ್ನು ನಾನು ಕೂಡಲೇ ಬದಿಗೆ ಸರಿಸುತ್ತಿದ್ದು ಯಾವುದೇ ಕಾರಣಕ್ಕೂ ತೀರ್ಪಿನ ಪ್ರತಿ ಸ್ವೀಕರಿಸಿದ ದಿನದಿಂದ ಎರಡು ದಿನ ಮೀರದಂತೆ ಕಾನೂನಿನ ವಿಧಾನದಲ್ಲಿ ರಾಜ್ಯ ವಿಧಿ ವಿಜ್ಞಾನ ಪ್ರಯೋಗಕ್ಕೆ ಸಾಕ್ಷ್ಯವನ್ನು ರವಾನಿಸಬೇಕು ಎಂದು ನಿರ್ದೇಶಿಸುತ್ತಿದ್ದೇನೆ. ವಿಧಿ ವಿಜ್ಞಾನ ಪ್ರಯೋಗಾಲಯ ಸಾಕ್ಷ್ಯವನ್ನು ವಿಶ್ಲೇಷಿಸಿ ಅದರ ವರದಿಯ ಪ್ರತಿಯನ್ನು ತನಿಖಾಧಿಕಾರಿಗೆ ಹಾಗೂ ನ್ಯಾಯಾಲಯಕ್ಕೆ ಏಳು ವಾರದೊಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸುತ್ತಿದ್ದೇನೆ. ಪ್ರಕರಣದ ಮುಂದಿನ ತನಿಖೆ ಮತ್ತು ವಿಚಾರಣೆಗೆ ವಿಳಂಬವಾಗದಂತೆ ನಿಗದಿಪಡಿಸಿದ ಗಡುವಿನೊಳಗೆ ವರದಿ ಸಲ್ಲಿಸಬೇಕು ಎಂದು ಪುನರುಚ್ಚರಿಸಲಾಗುತ್ತಿದೆ. ಈ ಮೂಲಕ ರಿಟ್ ಅರ್ಜಿಯನ್ನು ಪುರಸ್ಕರಿಸಲಾಗಿದೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
2017ರಲ್ಲಿ, ದುಷ್ಕರ್ಮಿಗಳ ಗುಂಪೊಂದು ಮಲಯಾಳಂನ ಜನಪ್ರಿಯ ನಟಿಯೊಬ್ಬರನ್ನು ವಾಹನದಲ್ಲಿ ಅಪಹರಿಸಿ, ಲೈಂಗಿಕ ಕಿರುಕುಳ ನೀಡಿ ಅದನ್ನು ಚಿತ್ರೀಕರಿಸಿತ್ತು. ದಿಲೀಪ್ ವಿಚ್ಛೇದನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾದ ನಟಿಯ ಮೇಲೆ ಸೇಡು ತೀರಿಸಿಕೊಳ್ಳಲು ನಟ ದಾಳಿಗೆ ಸೂಚನೆ ನೀಡಿದ್ದರು ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು.