ಮಾಲೆಗಾಂವ್ ಪ್ರಕರಣದ ವಿಚಾರಣೆ ಹೈಜಾಕ್ ಆಗುತ್ತಿದೆ, ಗೋಪ್ಯ ವಿಚಾರಣೆ ನಡೆಸಿ: ಆರೋಪಿ ಲೆ. ಕರ್ನಲ್ ಪುರೋಹಿತ್ ಕೋರಿಕೆ

2008ರಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪ್ಯ ವಿಚಾರಣೆಗಾಗಿ ಸಲ್ಲಿಸಿದ ಎರಡನೇ ಅರ್ಜಿ ಇದಾಗಿದ್ದು ಮೊದಲನೆಯದನ್ನು ಎನ್ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು.
ಮಾಲೆಗಾಂವ್ ಪ್ರಕರಣದ ವಿಚಾರಣೆ ಹೈಜಾಕ್ ಆಗುತ್ತಿದೆ, ಗೋಪ್ಯ ವಿಚಾರಣೆ ನಡೆಸಿ: ಆರೋಪಿ ಲೆ. ಕರ್ನಲ್ ಪುರೋಹಿತ್ ಕೋರಿಕೆ

Col Purohit and Mumbai Sessions Court

2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯಿದೆಯಡಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ವಿರುದ್ಧದ ವಿಚಾರಣೆಯ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಗೋಪ್ಯ ವಿಧಾನದಲ್ಲಿ ನಡೆಸಬೇಕೆಂದು ಕೋರಿದ್ದಾರೆ.

ರಾಷ್ಟ್ರವಿರೋಧಿ ಅವಕಾಶವಾದಿಗಳು ವಿಚಾರಣೆಯನ್ನು ಹೈಜಾಕ್ ಮಾಡಲು ಯತ್ನಿಸುತ್ತಿದ್ದು ಇದು ನ್ಯಾಯಯುತ ವಿಚಾರಣೆ ನಡೆಸುವ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಆರೋಪಿಸಿದ್ದಾರೆ.

ನ್ಯಾಯಿಕ ಹಿತದೃಷ್ಟಿ ಮತ್ತು ನ್ಯಾಯೋಚಿತ ವಿಚಾರಣೆಗಾಗಿ ಪ್ರಕರಣವನ್ನು ರಹಸ್ಯವಾಗಿ ವಿಚಾರಣೆ ನಡೆಸಬೇಕಿದ್ದು "ಅಭಿಪ್ರಾಯ ರೂಪಿಸುವವರು ಮತ್ತು ದೇಶ ವಿರೋಧಿ ಅವಕಾಶವಾದಿಗಳಿಂದ ಪ್ರಕರಣದ ವಿಚಾರಣೆ ಹೈಜಾಕ್‌ ಆಗಬಾರದು” ಎಂದು ಅವರು ಪ್ರತಿಪಾದಿಸಿದ್ದಾರೆ.

Also Read
[ಮಾಲೆಗಾಂವ್ ಸ್ಫೋಟ] ದಾಖಲೆಯ ಮೂಲ ಕುರಿತು ಸಹಕರಿಸಲು ಆರೋಪಿ ಸೇನಾಧಿಕಾರಿ ಪುರೋಹಿತ್‌ಗೆ ಸೂಚಿಸಿದ ಬಾಂಬೆ ಹೈಕೋರ್ಟ್

ಮುಕ್ತ ನ್ಯಾಯಾಲಯದ ಬದಲು ಗೋಪ್ಯ ವಿಚಾರಣೆ ನಡೆಸುವಾಗ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ, ಕಕ್ಷಿದಾರರು ಮತ್ತು ಅವರ ವಕೀಲರಿಗೆ ಮಾತ್ರ ನ್ಯಾಯಾಲಯದ ಕೊಠಡಿಗೆ ಅನುಮತಿ ನೀಡಲಾಗುತ್ತದೆ. ಹೀಗಾಗಿ ಸಾರ್ವಜನಿಕರು ಮತ್ತು ಮಾಧ್ಯಮದವರಿಗೆ ಅಲ್ಲಿ ಹಾಜರಿರಲು ಅವಕಾಶ ಇರುವುದಿಲ್ಲ. ಅಲ್ಲದೆ ವಿಚಾರಣೆಯ ಅಂತಿಮ ತೀರ್ಪು ಪ್ರಕಟವಾಗುವವರೆಗೆ ಮಾಧ್ಯಮಗಳುವಿಚಾರಣೆಯ ವರದಿ ಪ್ರಕಟಿಸುವಂತಿಲ್ಲ.

ಪುರೋಹಿತ್ ಅವರು 2019ರಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯ ನೀಡಿದ ಆದೇಶವನ್ನು ಅವಲಂಬಿಸಿ ಅರ್ಜಿ ಸಲ್ಲಿಸಿದ್ದಾರೆ. ಆದೇಶದಲ್ಲಿ ಪುರೋಹಿತ್‌ ಅವರಿಗೆ ಸಂಬಂಧಿಸಿದ ಪ್ರಕರಣವನ್ನು ವರದಿ ಮಾಡಲು ಪತ್ರಕರ್ತರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು.

ಆದೇಶದ ಹೊರತಾಗಿಯೂ ಎಲೆಕ್ಟ್ರಾನಿಕ್‌ ಮಾಧ್ಯಮದ ವಾಹಿನಿಗಳು ಮತ್ತು ಏಜೆನ್ಸಿಗಳು ಪ್ರಕರಣದ ಕುರಿತು ಚರ್ಚೆ ನಡೆಸುತ್ತಿವೆ. ವಿಚಾರಣೆಯ ಕುರಿತು ಅಭಿಪ್ರಾಯ ರೂಪಿಸುವಂತಹ ವರದಿ ನ್ಯಾಯಾಲಯ ನಿಂದನೆಯಾಗಿದೆ. ಹೀಗಾಗಿ ನಿರ್ಬಂಧಿತ ವಿಧಾನದಲ್ಲಿ ಪತ್ರಕರ್ತರಿಗೆ ನೀಡಿರುವ ಅನುಮತಿಯನ್ನು ಸಂಪೂರ್ಣ ಹಿಂಪಡೆದು ವಿಚಾರಣೆ ವೇಳೆ ಮಾಧ್ಯಮದವರ ಉಪಸ್ಥಿತಿ ಇರದಂತೆ ನೋಡಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ. ಜೊತೆಗೆ ಪ್ರತ್ಯೇಕ ಅರ್ಜಿಯೊಂದನ್ನು ಸಲ್ಲಿಸಿರುವ ಅವರು ತಮ್ಮ ವಿರುದ್ಧ ಮಾಧ್ಯಮಗಳು ಚರ್ಚೆ, ಸಂವಾದ ಕಾರ್ಯಕ್ರಮಗಳನ್ನು ನಡೆಸದಂತೆ ಸೂಚಿಸಬೇಕು ಎಂದಿದ್ದಾರೆ.

2008ರಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪ್ಯ ವಿಚಾರಣೆಗಾಗಿ ಸಲ್ಲಿಸಿದ ಎರಡನೇ ಅರ್ಜಿ ಇದಾಗಿದ್ದು ಮೊದಲನೆಯದನ್ನು ಎನ್‌ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಹನ್ನೊಂದು ಪತ್ರಕರ್ತರನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಿಕೊಂಡಿದ್ದ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ನಿರ್ಬಂಧಗಳನ್ನು ಮಾಧ್ಯಮಗಳಿಗೆ ವಿಧಿಸಿತ್ತು. ಕುತೂಹಲಕರ ಸಂಗತಿ ಎಂದರೆ ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾದ 222 ಸಾಕ್ಷಿಗಳ ಪೈಕಿ 16 ಮಂದಿ ಪ್ರತಿಕೂಲ ಸಾಕ್ಷಿಗಳಾಗಿ ಮಾರ್ಪಟ್ಟಿರುವುದರಿಂದ ಕಳೆದ ಕೆಲವು ವಾರಗಳಿಂದ ವಿಚಾರಣೆ ಸುದ್ದಿಯಲ್ಲಿದೆ.

Related Stories

No stories found.
Kannada Bar & Bench
kannada.barandbench.com