
ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಪ್ರಕರಣದ ಎಲ್ಲಾ ಏಳು ಆರೋಪಿಗಳನ್ನು ಗುರುವಾರ ಖುಲಾಸೆಗೊಳಿಸಿರುವ ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯ ತನ್ನ ತೀರ್ಪಿಗೆ ವಿವಿಧ ಕಾರಣಗಳನ್ನು ನೀಡಿದೆ. [ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಪ್ರಜ್ಞಾಸಿಂಗ್ ಚಂದ್ರಪಾಲ್ ಸಿಂಗ್ ಠಾಕೂರ್ ಇನ್ನಿತರರ ನಡುವಣ ಪ್ರಕರಣ]
ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ, ಅಜಯ್ ರಹಿರ್ಕರ್, ಸುಧಾಕರ್ ಚತುರ್ವೇದಿ ಮತ್ತು ಸುಧಾಕರ್ ದ್ವಿವೇದಿ ಅವರು ಕೂಡ ಆರೋಪಿಗಳಾಗಿದ್ದ ಈ ಪ್ರಕರಣ ಪ್ರಜ್ಞಾ ಮತ್ತು ಲೆ. ಕರ್ನಲ್ ಪುರೋಹಿತ್ ಅವರ ಕಾರಣಕ್ಕೆ ಸಾಕಷ್ಟು ಗಮನ ಸೆಳೆದಿತ್ತು.
ತೀರ್ಪಿನ ವಿವರವಾದ ಪ್ರತಿ ಇನ್ನಷ್ಟೇ ದೊರೆಯಬೇಕಿದ್ದು ತೀರ್ಪಿನ ವೇಳೆ ನ್ಯಾಯಾಲಯ ಈ ಇಬ್ಬರ ಬಿಡುಗಡೆಗೆ ನೀಡಿದ ಕಾರಣಗಳು ಇಂತಿವೆ:
ಪ್ರಜ್ಞಾ ಸಿಂಗ್ ಠಾಕೂರ್
ಬಾಂಬ್ ಇರಿಸಲಾಗಿದ್ದ ಬೈಕ್ ಸಾಧ್ವಿ ಪ್ರಜ್ಞಾ ಅವರದ್ದೇ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ದ್ವಿಚಕ್ರವಾಹನದ ಚಾಸಿ ಸರಣಿ ಸಂಖ್ಯೆ ಇಡಿಯಾಗಿ ವಿಧಿ ವಿಜ್ಞಾನ ತಜ್ಞರಿಗೆ ಲಭಿಸಿಲ್ಲ ಹೀಗಾಗಿ ಬೈಕ್ ಅವರದ್ದೇ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಿಲ್ಲ.
ಪ್ರಜ್ಞಾ ಸನ್ಯಾಸಿನಿಯಾಗಿದ್ದು ಸ್ಫೋಟಕ್ಕೆ ಎರಡು ವರ್ಷಗಳ ಮೊದಲು ಎಲ್ಲಾ ಭೌತಿಕ ವಸ್ತುಗಳನ್ನು ತ್ಯಜಿಸಿದ್ದರು.
ಅವರು ಬೇರೆ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿದ್ದರು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ.
ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್
ಕಾಶ್ಮೀರದಿಂದ ಆರ್‌ಡಿಎಕ್ಸ್ ಪಡೆದು ಬಾಂಬ್ ತಯಾರಿಸುತ್ತಿದ್ದರು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ
ಅಭಿನವ ಭಾರತದ ಅಧಿಕಾರಿಗಳಾಗಿ ಪುರೋಹಿತ್ ಮತ್ತು ಮತ್ತೊಬ್ಬ ಆರೋಪಿ ಅಜಯ್ ರಹಿರ್ಕರ್ ನಡುವೆ ಹಣಕಾಸಿನ ವಹಿವಾಟುಗಳು ನಡೆದಿದ್ದರೂ, ಆ ಹಣವನ್ನು ಪುರೋಹಿತ್ ತನ್ನ ಮನೆ ನಿರ್ಮಾಣ ಮತ್ತು ಎಲ್‌ಐಸಿ ಪಾಲಿಸಿಗೆ ಮಾತ್ರ ಬಳಸಿದ್ದಾರೆಯೇ ಹೊರತು ಯಾವುದೇ ಭಯೋತ್ಪಾದಕ ಚಟುವಟಿಕೆಗೆ ಅಲ್ಲ.
ಬೇರೆ ಆರೋಪಿಗಳೊಂದಿಗೆ ಸೇರಿ ಇವರು ಪಿತೂರಿ ನಡೆಸಿದ್ದರು ಎಂಬುದಕ್ಕೆ ಪುರಾವೆಗಳಿಲ್ಲ.