ಮಾಲೆಗಾಂವ್ ಸ್ಫೋಟ ಪ್ರಕರಣ: ವಿಚಾರಣೆಗೆ ಹಾಜರಾಗದ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ವಿರುದ್ಧ ವಾರಂಟ್

ವೈದ್ಯಕೀಯ ಕಾರಣಗಳಿಗಾಗಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಕೋರಿ ಠಾಕೂರ್ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಧೀಶ ಎ.ಕೆ. ಲಹೋಟಿ ತಿರಸ್ಕರಿಸಿದರು.
ಪ್ರಗ್ಯಾ ಸಿಂಗ್ ಠಾಕೂರ್ ಮತ್ತು ಮುಂಬೈ ಸೆಷನ್ಸ್ ನ್ಯಾಯಾಲಯ
ಪ್ರಗ್ಯಾ ಸಿಂಗ್ ಠಾಕೂರ್ ಮತ್ತು ಮುಂಬೈ ಸೆಷನ್ಸ್ ನ್ಯಾಯಾಲಯಪ್ರಗ್ಯಾ ಸಿಂಗ್ ಠಾಕೂರ್ (ಫೇಸ್‌ಬುಕ್‌)
Published on

ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧ ಮುಂಬೈ ನ್ಯಾಯಾಲಯ ಸೋಮವಾರ ಜಾಮೀನು ಸಹಿತ ವಾರಂಟ್ ಹೊರಡಿಸಿದೆ.

ವೈದ್ಯಕೀಯ ಕಾರಣಗಳಿಗಾಗಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಕೋರಿ ಪ್ರಗ್ಯಾ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಧೀಶ ಎ ಕೆ ಲಹೋಟಿ ತಿರಸ್ಕರಿಸಿದರು. ವಾರಂಟ್ ರದ್ದುಗೊಳಿಸಬೇಕೆಂದರೆ ಮಾರ್ಚ್ 20ರೊಳಗೆ ಹಾಜರಾಗಿ ₹10,000 ಪಾವತಿಸುವಂತೆ ನ್ಯಾಯಾಲಯ ಇದೇ ವೇಳೆ ತಾಕೀತು ಮಾಡಿದೆ.

2008ರ ಸೆಪ್ಟಂಬರ್ 29ರಂದು ಮಾಲೆಗಾಂವ್‌ನ ಮಸೀದಿಯೊಂದರ ಬಳಿ ಬೈಕ್‌ನಲ್ಲಿ ಇರಿಸಲಾಗಿದ್ದ ಸ್ಫೋಟಕ ಸಿಡಿದು 6 ಮಂದಿ ಮೃತಪಟ್ಟಿದ್ದರು. 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಪ್ರಕರಣವನ್ನು ಆರಂಭದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆ ನಡೆಸಿತ್ತು. ನಂತರ ಇದನ್ನು 2011ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗಿತ್ತು.

ನಂತರ ಅಕ್ಟೋಬರ್ 2018ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಪ್ರಗ್ಯಾ ಮತ್ತಿತರ ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯ ಆರೋಪ ನಿಗದಿಪಡಿಸಿತು.

ಪ್ರಾಸಿಕ್ಯೂಷನ್ 323ಕ್ಕೂ ಹೆಚ್ಚು ಸಾಕ್ಷಿಗಳನ್ನು ಪರಿಶೀಲಿಸಿ, ಸೆಪ್ಟೆಂಬರ್ 14, 2023ರಂದು ಆರೋಪಿಗಳ ಸಾಕ್ಷ್ಯ ದಾಖಲೀಕರಣ ಪೂರ್ಣಗೊಳಿಸಿತ್ತು.

ಪ್ರಕರಣದ ವಿಚಾರಣೆಗೆಂದೇ ವಿಶೇಷವಾಗಿ ನಿಯೋಜಿತರಾಗಿದ್ದ ನ್ಯಾಯಾಧೀಶ ಲಹೋಟಿ ಅವರು ನಂತರ ಎಲ್ಲಾ ಆರೋಪಿಗಳು ತಮ್ಮ ಹೇಳಿಕೆ ದಾಖಲಿಸಲು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಆದೇಶಿಸಿದ್ದಾರೆ.

ವಿಚಾರಣೆ ನಡೆಸಲು ನ್ಯಾಯಾಲಯ ದಿನಾಂಕ ನಿಗದಿಪಡಿಸಿದಾಗ ಆರೋಪಿಗಳು ಹಾಜರಿರಲೇಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಅನಾರೋಗ್ಯದ ಹಿನ್ನೆಲೆಯಲ್ಲಿ ಫೆಬ್ರವರಿ 25 ರಂದು, ನ್ಯಾಯಾಲಯ ಪ್ರಗ್ಯಾ ಅವರಿಗೆ ಒಂದು ದಿನದ ಮಟ್ಟಿಗೆ ವಿಚಾರಣೆಗೆ ಹಾಜರಾಗದಂತೆ ತಿಳಿಸಿತ್ತು. ಆದರೂ ಫೆಬ್ರವರಿ 27ರಂದು ಉಪಸ್ಥಿತರಿರುವಂತೆ ತಿಳಿಸಿತ್ತು. ಪ್ರಗ್ಯಾ ಆದೇಶ ಪಾಲಿಸಲು ವಿಫಲವಾದ ಹಿನ್ನೆಲೆಯಲ್ಲಿ ಅಂತಿಮವಾಗಿ ನ್ಯಾಯಾಲಯ ಜಾಮೀನು ಸಹಿತ ವಾರೆಂಟ್‌ ಹೊರಡಿಸಿದೆ.

Kannada Bar & Bench
kannada.barandbench.com