NIA and ATS Maharashtra
NIA and ATS Maharashtra

ಮಾಲೆಗಾಂವ್ ಸ್ಫೋಟ: ತನಿಖಾ ಸಂಸ್ಥೆಗಳು ನಡೆಸಿದ ತನಿಖೆಯ ವಿರೋಧಾಭಾಸ ಎತ್ತಿತೋರಿಸಿದ ವಿಚಾರಣಾ ನ್ಯಾಯಾಲಯದ ತೀರ್ಪು

2008ರಲ್ಲಿ ಆರು ಜನರು ಸಾವನ್ನಪ್ಪಿ 100ಕ್ಕೂ ಹೆಚ್ಚು ಜನರು ಗಾಯಗೊಂಡ ಈ ಸ್ಫೋಟದ ಬಗ್ಗೆ ಆರಂಭದಲ್ಲಿ ಎಟಿಎಸ್ ತನಿಖೆ ನಡೆಸಿ ನಂತರ 2011 ರಲ್ಲಿ ಎನ್ಐಎಗೆ ಹಸ್ತಾಂತರಿಸಲಾಯಿತು.
Published on

ಮಾಲೆಗಾಂವ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಪ್ರಕರಣದ ಎಲ್ಲಾ ಏಳು ಆರೋಪಿಗಳನ್ನು ಗುರುವಾರ ಖುಲಾಸೆಗೊಳಿಸಿದ್ದ ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಮತ್ತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸಿದ್ದ ತನಿಖೆಗಳಲ್ಲಿ ವಿರೋಧಾಭಾಸ ಇರುವುದನ್ನು ಎತ್ತಿ ತೋರಿಸಿದೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿ ರಂಜಾನ್‌ ಹಿನ್ನೆಲೆಯಲ್ಲಿ ಹೆಚ್ಚಿನ ಮುಸ್ಲಿಮರು ಸೇರಿದ್ದ ಚೌಕದಲ್ಲಿ  ಸೆಪ್ಟೆಂಬರ್ 29, 2008 ರಂದು ಮೋಟಾರ್‌ಸೈಕಲ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ಇರಿಸಿ ಸ್ಫೋಟಿಸಲಾಗಿತ್ತು. ಆರು ಜನರು ಸಾವನ್ನಪ್ಪಿ, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಪ್ರಕರಣವನ್ನು ಆರಂಭದಲ್ಲಿ ಎಟಿಎಸ್‌ ತನಿಖೆ ನಡೆಸಿತ್ತು, ನಂತರ 2011ರಲ್ಲಿ ಎನ್‌ಐಎಗೆ ಪ್ರಕರಣ ವರ್ಗಾಯಿಸಲಾಗಿತ್ತು. ಅದು 2016ರಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಿತ್ತು. ಕೆಲ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು.

ತೀರ್ಪಿನ ಪ್ರತಿ ಶುಕ್ರವಾರ ಲಭಿಸಿದ್ದು ನ್ಯಾಯಾಧೀಶ ಎ ಕೆ ಲಹೋಟಿ ಅವರು ಈ ಎರಡೂ ತನಿಖಾ ಸಂಸ್ಥೆಗಳು ಕೈಗೊಂಡ ನಿರ್ಧಾರ ಭಿನ್ನವಾಗಿವೆ ಎಂದಿದ್ದಾರೆ.

ನ್ಯಾಯಾಲಯದ ಪ್ರಮುಖ ಅವಲೋಕನಗಳು

  • ಎಟಿಎಸ್‌ ತನಿಖೆಯ ವಾಸ್ತವಾಂಶಗಳು ಸಂಪೂರ್ಣ ಒಪ್ಪಲು ಸಾಧ್ಯವಿಲ್ಲದ ಬಗ್ಗೆ ಎನ್‌ಐಎ ತನಿಖಾಧಿಕಾರಿಗಳು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

  • ಎಟಿಎಸ್‌ ಆರೋಪಪಟ್ಟಿಯಲ್ಲಿ ಅನೇಕ ಕಾನೂನು ಲೋಪಗಳು ಇರುವುದನ್ನು ಎನ್‌ಐಎ ಕಂಡುಕೊಂಡಿದೆ.

  • ಎಟಿಎಸ್‌ ತನಿಖೆ ದೋಷಪೂರಿತವಾಗಿದೆ ಎಂದು ಎನ್‌ಐಎ ಹೇಳಿದೆ. ಹೀಗಾಗಿ ಎರಡೂ ತನಿಖಾ ಸಂಸ್ಥೆಗಳ ನಿಲುವು ಮತ್ತು ತೀರ್ಮಾನ ಸಾಕಷ್ಟು ಭಿನ್ನವಾಗಿದೆ.

  • ಸ್ಫೋಟಕದಲ್ಲಿ ಬಳಸಲಾದ ಆರ್‌ಡಿಎಕ್ಸ್‌ ಸಂಬಂಧ ಎರಡೂ ತನಿಖಾ ಸಂಸ್ಥೆಗಳು ಭಿನ್ನ ತೀರ್ಮಾನಕ್ಕೆ ಬಂದಿವೆ. ಎರಡೂ ಸಂಸ್ಥೆಗಳು ಈ ವಿಚಾರದಲ್ಲಿ ಪರಸ್ಪರರ ಅಭಿಪ್ರಾಯ ಒಪ್ಪುವುದಿಲ್ಲ.

  • ಆರ್‌ಡಿಎಕ್ಸ್‌ನ ಮೂಲ ಮತ್ತು ಬಾಂಬ್‌ ಇರಿಸಲು ಬಳಸಲಾಗಿದ್ದ ಮೋಟಾರ್‌ ಸೈಕಲ್‌ ಸಾಗಣೆ ಬಗ್ಗೆ ಎರಡೂ ತನಿಖಾ ಸಂಸ್ಥೆಗಳು ಭಿನ್ನ ನಿಲುವು ತಳೆದಿವೆ.

  • ಲೆ. ಕರ್ನಲ್‌ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರು ಆರ್‌ಡಿಎಕ್ಸ್‌ ಮೂಲ. ಅವರು ಅದನ್ನು ಕಾಶ್ಮೀರದಿಂದ ತಂದು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದರು ಎಂಬುದು ಎಟಿಎಸ್‌ ವಾದ.

  • ಆದರೆ ರಾಮ್‌ಜಿ ಕಲ್ಸಂಗ್ರಾ ಮತ್ತು ಸಂದೀಪ್ ಡಾಂಗೆ ಅವರು ಬೈಕ್‌ ಹೊಂದಿದ್ದು ಧನಸಿಂಗ್ ಅವರು ಅಮಿತ್ ಹಕ್ಲಾ ಅವರ ರಮೇಶ್ ಮಹಾಲಂಕರ್ ಅವರ ಮನೆಯಿಂದ ಐಇಡಿ ಅಳವಡಿಸಿದ ಮೋಟಾರ್‌ಸೈಕಲ್ ಸಾಗಿಸಿದ್ದರು ಎನ್ನುತ್ತದೆ ಎನ್‌ಐಎ. ಹೀಗಾಗಿ ಎರಡೂ ತನಿಖಾ ಸಂಸ್ಥೆಗಳ ವಾಸ್ತವಾಂಶಗಳು ಪರಸ್ಪರ ಹೊಂದಿಕೆಯಾಗುವುದಿಲ್ಲ.

  • ಕರ್ನಲ್ ಪುರೋಹಿತ್ ಅವರನ್ನು ನಿರ್ದಿಷ್ಟ ಅವಧಿಯಲ್ಲಿ ಕಾಶ್ಮೀರದಲ್ಲಿ ನಿಯೋಜಿಸಲಾಗಿತ್ತು ಎಂದು ಸಾಬೀತುಪಡಿಸಲು ತನಿಖಾ ಸಂಸ್ಥೆಗಳು ಯಾವುದೇ ಪುರಾವೆ ಒದಗಿಸಿಲ್ಲ.

  • ಪ್ರಕರಣದ ಸಾಕ್ಷಿಗಳಿಗೆ ಎಟಿಎಸ್‌ ಚಿತ್ರಹಿಂಸೆ ನೀಡಿರುವ ಆರೋಪವನ್ನು ಎನ್‌ಐಎ ತನಿಖಾಧಿಕಾರಿ ಸಮರ್ಥಿಸಿದ್ದಾರೆ.

  • ಎಟಿಎಸ್ ಬಲಪ್ರಯೋಗ ಮಾಡಿ ಹಲವಾರು ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಅವರನ್ನು ಅಕ್ರಮವಾಗಿ ಬಂಧಿಸಿ ಚಿತ್ರಹಿಂಸೆ ನೀಡಲಾಗಿದೆ.

  • ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ರಾಜ್ಯ ಸರ್ಕಾರದಿಂದ ಮಾತ್ರ ಪ್ರಾಸಿಕ್ಯೂಷನ್‌ ಅನುಮತಿ ಪಡೆದಿರುವುದು ತನಗೆ ತಿಳಿದಿತ್ತಾದರೂ ತಾನು ಕೇಂದ್ರ ಸರ್ಕಾರದಿಂದ ಪಡೆದಿಲ್ಲ ಎಂದು ಎನ್‌ಐಎ ಒಪ್ಪಿಕೊಂಡಿದೆ.

  • ಹೀಗೆ, ಮೇಲೆ ತಿಳಿಸಲಾದ ಹೇಳಿಕೆಗಳು ತಿಳಿಸುವುದೇನೆಂದರೆ, ಆರೋಪಿಗಳ ವಿರುದ್ಧ ಅನುಮತಿ ಪಡೆಯಲು ಎಂದಿಗೂ ಎನ್‌ಐಎ ಅರ್ಜಿ ಸಲ್ಲಿಸಿಲ್ಲ ಅಥವಾ ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರದ ಮುಂದೆ ಪ್ರಸ್ತಾವನೆ ಇಟ್ಟಿಲ್ಲ. ಇದರ ಹಿಂದಿನ ಕಾರಣಗಳನ್ನು ಈ ಸಾಕ್ಷಿಯ ಸಾಕ್ಷ್ಯದಿಂದ ಸಂಗ್ರಹಿಸಬಹುದು. ಎಟಿಎಸ್‌ ಅನುಮತಿ ಪಡೆದಿರುವುದು ಎನ್‌ಐಎಗೆ ತಿಳಿದಿತ್ತು ಮತ್ತು ಎರಡನೆಯದಾಗಿ, ತನಿಖೆಯ ಸಮಯದಲ್ಲಿ ಎಟಿಎಸ್‌ ಸಂಗ್ರಹಿಸಿದ ಸಾಕ್ಷ್ಯಗಳ ಬಗ್ಗೆಎನ್‌ಐಎಗೆ ಭಿನ್ನಾಭಿಪ್ರಾಯವಿತ್ತು. ತಾನು ನೀಡಿದ ಆರೋಪಪಟ್ಟಿಯಲ್ಲಿ ಎಟಿಎಸ್‌ ನಡೆಸಿದ ತನಿಖೆಯೊಂದಿಗೆ ತನ್ನ ತನಿಖೆ ಹೊಂದಿಕೆಯಾಗಲಿಲ್ಲ ಎಂದು ಎನ್‌ಐಎ ಚಿತ್ರಿಸಿದೆ. ಸಾಕ್ಷಿಗಳನ್ನು ಥಳಿಸುವ ಮೂಲಕ ಎಟಿಎಸ್‌ ಹೇಳಿಕೆಯನ್ನು ದಾಖಲಿಸಿಕೊಂಡಿರುವುದನ್ನು ಅದು ಕಂಡುಕೊಂಡಿದೆ.

Kannada Bar & Bench
kannada.barandbench.com