ಮಾಲೂರು ಕ್ಷೇತ್ರದ ಮತ ಎಣಿಕೆ: ಹಾರ್ಡ್‌ ಡಿಸ್ಕ್‌ ಬಗ್ಗೆ ಅಫಿಡವಿಟ್‌ ಸಲ್ಲಿಸಲು ಡಿಇಒಗೆ ಹೈಕೋರ್ಟ್‌ ನಿರ್ದೇಶನ

ಹಾರ್ಡ್ ಡಿಸ್ಕ್ ಸ್ವೀಕರಿಸಿರುವ ಬಗ್ಗೆ ಏಜೆನ್ಸಿ ಸ್ವೀಕೃತಿ ಪತ್ರ ವಿತರಿಸಿದ್ದರೆ, ಅದರ ಪ್ರತಿಯನ್ನು ಡಿಇಒ ಅವರು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದಿರುವ ಹೈಕೋರ್ಟ್.
INC MLA K Y Nanje Gowda and Karnataka HC
INC MLA K Y Nanje Gowda and Karnataka HC
Published on

ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಶೇಖರಿಸಿಟ್ಟಿರುವ ಹಾರ್ಡ್‌ಡಿಸ್ಕ್‌ ಅನ್ನು ಮೆಸರ್ಸ್‌ ಐಕಿಯಾ ಬಿಸಿನೆಸ್‌ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ಯಿಂದ ಪಡೆಯಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಿವರಣೆ ನೀಡಿ ಅಫಿಡವಿಟ್‌ ಸಲ್ಲಿಸುವಂತೆ ಕೋಲಾರ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ವೆಂಕಟರಾಜು ಅವರಿಗೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕೆ ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ ಎಸ್ ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ಸಂಪೂರ್ಣ ವಿಡಿಯೋ ನಾಪತ್ತೆಯಾಗಿರುವ ಬಗ್ಗೆ ವಿವರಣೆ ನೀಡಿ ಅಫಿಡವಿಟ್‌ ಸಲ್ಲಿಸುವಂತೆ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಚುನಾವಣಾಧಿಕಾರಿ ಆಗಿದ್ದ ಹಾಲಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ಅವರಿಗೆ ಆಗಸ್ಟ್‌ 27ರಂದು ನ್ಯಾಯಾಲಯ ನಿರ್ದೇಶಿಸಿತ್ತು.

ಅದರಂತೆ ಮಂಗಳವಾರ ವಿಚಾರಣೆ ವೇಳೆ ವೆಂಕಟರಾಜು ಪರ ವಕೀಲರು ಹಾಜರಾಗಿ, ಮೆಸರ್ಸ್‌ ಐಕಿಯಾ ಬಿಸಿನೆಸ್‌ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಏಜೆನ್ಸಿಗೆ ಮತ ಎಣಿಕೆ ಕಾರ್ಯದ ದೃಶ್ಯಾವಳಿ ಚಿತ್ರೀಕರಿಸಿ ಕೊಡಲು ಗುತ್ತಿಗೆ ನೀಡಲಾಗಿತ್ತು. ತಾನು ಮತ ಎಣಿಕೆ ಕಾರ್ಯದ ದೃಶ್ಯಾವಳಿ ಚಿತ್ರೀಕರಿಸಿದ್ದು, ಅದರ ವಿಡಿಯೋ ಒಳಗೊಂಡ ಹಾರ್ಡ್‌ಡಿಸ್ಕ್ ಅನ್ನು ಜಿಲ್ಲಾ ಚುನಾವಣಾಧಿಕಾರಿ (ಡಿಇಒ) ನೀಡಿದ್ದೇನೆ. ತನಗೆ ವಹಿಸಿದ ಜವಾಬ್ದಾರಿ ಪೂರ್ಣಗೊಳಿಸಿರುವ ಬಗ್ಗೆ ಡಿಇಒಯಿಂದ ಸ್ವೀಕೃತಿ ಪತ್ರ ಸಹ ಪಡೆದಿದ್ದೇನೆ ಎಂಬುದಾಗಿ ವಿವರ ನೀಡಿ ಏಜೆನ್ಸಿಯು ಪತ್ರವನ್ನು ಬರೆದಿದೆ. ಆದರೆ, ಆ ಸ್ವೀಕೃತಿ ಪ್ರತಿಯ ದಾಖಲೆ ಡಿಇಒ ಕಚೇರಿಯಲ್ಲಿ ಇಲ್ಲವಾಗಿದೆ ಎಂದು ತಿಳಿಸಿದರು.

Also Read
ಮಾಲೂರು ಕ್ಷೇತ್ರದ ಮತ ಎಣಿಕೆ ದೃಶ್ಯಾವಳಿ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ನಿರ್ದೇಶನ

ಅದನ್ನು ಪರಿಗಣಿಸಿದ ಪೀಠವು ಹಾರ್ಡ್‌ ಡಿಸ್ಕ್‌ ಸ್ವೀಕರಿಸಿ ಏಜೆನ್ಸಿಗೆ ಸ್ವೀಕೃತಿ ಪತ್ರ ವಿತರಿಸಿದ್ದರೆ, ಅದರ ಪ್ರತಿಯನ್ನು ಡಿಇಒ ಅವರು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಏಜೆನ್ಸಿ ಸಹ ಹಾರ್ಡ್‌ ಡಿಸ್ಕ್‌ ಅನ್ನು ಡಿಇಒಗೆ ನೀಡಿ ಅವರಿಂದ ಪಡೆದಿರುವ ಸ್ವೀಕೃತಿಯ ಪ್ರತಿ ಸಲ್ಲಿಸಬೇಕು. ಡಿಇಒ ಅವರು ಏಜೆನ್ಸಿ ಅವರನ್ನು ಕರೆದು ಸ್ವೀಕೃತಿ ಪ್ರತಿ ಒದಗಿಸುವಂತೆ ಕೇಳಬಹುದು. ಈ ಎಲ್ಲಾ ಪ್ರಕ್ರಿಯೆ ಕುರಿತು ವಿವರಣೆ ನೀಡಿ ವೆಂಕಟರಾಜು ಅವರು ಹೊಸದಾಗಿ ಅಫಿಡವಿಟ್‌ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 23ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com