ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಚುನಾವಣಾ ಅರ್ಜಿಯ ಕುರಿತಾದ ಪ್ರಕರಣದ ವಿಚಾರಣೆಯನ್ನು ಪಶ್ಚಿಮ ಬಂಗಾಳದಿಂದ ಹೊರಗೆ ವರ್ಗಾಯಿಸುವಂತೆ ಕೋರಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಹಿನ್ನೆಲೆಯಲ್ಲಿ ಮಮತಾ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯ ವಿಚಾರಣೆಯನ್ನು ಕಲ್ಕತ್ತಾ ಹೈಕೋರ್ಟ್ ನವೆಂಬರ್‌ಗೆ ಮುಂದೂಡಿದೆ.
ಸುವೇಂದು ಪರ ಹಾಜರಾದ ವಕೀಲ ಜಯದೀಪ್ ಕರ್ ಅವರು ಬ್ಯಾನರ್ಜಿಯವರ ಚುನಾವಣಾ ಅರ್ಜಿಯನ್ನು ಪಶ್ಚಿಮ ಬಂಗಾಳದಿಂದ ವರ್ಗಾಯಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು. ಆದ್ದರಿಂದ, ವರ್ಗಾವಣೆ ಅರ್ಜಿಯನ್ನು ನಿರ್ಣಯಿಸುವವರೆಗೆ ಚುನಾವಣಾ ಅರ್ಜಿಯನ್ನು ಮುಂದೂಡಬೇಕೆಂದು ಪ್ರಾರ್ಥಿಸಿದರು. ಈ ವಾದ ಮನ್ನಿಸಿದ ಶಂಪಾ ಸರ್ಕಾರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಿತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಸುವೇಂದು ಅವರ ಗೆಲುವನ್ನು ಪ್ರಶ್ನಿಸಿ ಮಮತಾ ಅವರು ಚುನಾವಣಾ ಅರ್ಜಿಯನ್ನು ಸಲ್ಲಿಸಿದ್ದರು. 2020ರಲ್ಲಿ ಬಿಜೆಪಿ ಸೇರುವ ಮುನ್ನ ಬ್ಯಾನರ್ಜಿಯ ಆಪ್ತರಾಗಿದ್ದ ಸುವೇಂದು 2021ರ ಚುನಾವಣೆಯಲ್ಲಿ ಮಮತಾ ಅವರನ್ನು ತೀರಾ ಕಡಿಮೆ ಅಂತರದಲ್ಲಿ ಅಂದರೆ 1,956 ಮತಗಳ ಅಂತರದಿಂದ ಸೋಲಿಸಿದ್ದರು. ಫಲಿತಾಂಶ ಪ್ರಶ್ನಿಸಿ ಮಮತಾ ಅವರು ಪ್ರಸ್ತುತ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಕೌಶಿಕ್ ಚಂದಾ ಅವರ ಪೀಠದೆದುರು ಪ್ರಕರಣವನ್ನು ಮೊದಲು ಪಟ್ಟಿ ಮಾಡಲಾಗಿತ್ತು. ಆದರೆ ಈ ಹಿಂದೆ ನ್ಯಾಯಮೂರ್ತಿಗಳು ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದನ್ನು ಪ್ರಸ್ತಾಪಿಸಿ ಅವರು ವಿಚಾರಣೆ ನಡೆಸಬಾರದೆಂದು ಮಮತಾ ಕೋರಿದ್ದರು. ಅಂತಿಮವಾಗಿ ನ್ಯಾಯಮೂರ್ತಿಗಳು ಪ್ರಕರಣದಿಂದ ಹಿಂದೆ ಸರಿದಿದ್ದರು. ನಂತರ ಪ್ರಕರಣವನ್ನು ನ್ಯಾ. ಶಂಪಾ ಸರ್ಕಾರ್ ಕೈಗೆತ್ತಿಕೊಂಡಿದ್ದರು.