ಲೀಲಾ ಹೋಟೆಲ್‌ಗೆ ವಂಚನೆ: ಕರ್ನಾಟಕದ ಆರೋಪಿಯನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದ ದೆಹಲಿ ನ್ಯಾಯಾಲಯ

ಆರೋಪಿ ಮಹಮದ್ ಷರೀಫ್‌ನನ್ನು ಜನವರಿ 19ರಂದು ದಕ್ಷಿಣ ಕನ್ನಡದಲ್ಲಿ ಬಂಧಿಸಲಾಗಿತ್ತು. ಅಬುಧಾಬಿ ರಾಜಮನೆತನದ ಸದಸ್ಯ ಎಂದು ಹೇಳಿಕೊಂಡು ದೆಹಲಿಯ ಪಂಚತಾರಾ ಹೋಟೆಲ್ನಲ್‌ನಲ್ಲಿ ಬಿಲ್ ಪಾವತಿಸದೆಯೇ ಮೂರು ತಿಂಗಳ ಕಾಲ ತಂಗಿದ್ದ ಆರೋಪ ಆತನ ಮೇಲಿದೆ.
ಲೀಲಾ ಹೋಟೆಲ್‌ಗೆ ವಂಚನೆ: ಕರ್ನಾಟಕದ ಆರೋಪಿಯನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದ ದೆಹಲಿ ನ್ಯಾಯಾಲಯ

ಅಬುಧಾಬಿ ರಾಜಮನೆತನದ ನೌಕರ ಎಂದು ಹೇಳಿಕೊಂಡು ದೆಹಲಿಯ ಲೀಲಾ ಹೋಟೆಲ್‌ನಲ್ಲಿ ತಂಗಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪಿ ಕರ್ನಾಟಕ ಮೂಲದ ಮಹಮದ್‌ ಷರೀಫ್‌ ಎಂಬಾತನನ್ನು ದೆಹಲಿ ನ್ಯಾಯಾಲಯ ಎರಡು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ಡ್ಯೂಟಿ ಮ್ಯಾಜಿಸ್ಟ್ರೇಟ್‌ ಶಿವಾಂಗಿ ವ್ಯಾಸ್‌ ಅವರೆದುರು ಶರೀಫ್‌ನನ್ನು ಹಾಜರುಪಡಿಸಲಾಯಿತು.

ದಕ್ಷಿಣ ಕನ್ನಡದ ಶರೀಫ್‌ ಮನೆಯಿಂದ ಮಧ್ಯರಾತ್ರಿ ಅಕ್ರಮವಾಗಿ ಬಂಧಿಸಲಾಯಿತು. ಟ್ರಾನ್ಸಿಟ್‌ ರಿಮಾಂಡ್‌ ಅರ್ಜಿಯನ್ನು ಪರಿಗಣಿಸುವಾಗ ವಕೀಲರ ಪ್ರಾತಿನಿಧ್ಯ ನೀಡಿರಲಿಲ್ಲ ಎಂದು ಶರೀಫ್‌ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಪೊಲೀಸ್ ಅಧಿಕಾರಿಗಳು ಬಂಧನಕ್ಕೆ ಮಾರ್ಗಸೂಚಿಗಳನ್ನು ಪಾಲಿಸಲು ವಿಫಲರಾಗಿದ್ದಾರೆ. ಅವರು ಯಾವುದೇ ವಸ್ತುಗಳನ್ನು ಕದ್ದಿಲ್ಲ  ಆದ್ದರಿಂದ ಜಪ್ತಿ ಮಾಡುವ ಪ್ರಮೇಯ ಬರುವುದಿಲ್ಲ ಎಂದು ಅವರು ಹೇಳಿದರು.

ವಾದ ಆಲಿಸಿದ ನ್ಯಾಯಾಲಯ ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ನೀಡಿತು. “ಪ್ರಕರಣದ ಸ್ವತ್ತು ಅಂದರೆ ಕಳುವಾದ ವಸ್ತುಗಳನ್ನು ವಸೂಲಿ ಮಾಡಬೇಕಿರುವುದರಿಂದ ಆರೋಪಿ ಮಹಮದ್‌ ಷರೀಫ್‌ನನ್ನು ಎರಡು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡುವಂತೆ ಆದೇಶಿಸಲಾಗಿದ್ದು 24.01.2023ರಂದು ಸಂಬಂಧಪಟ್ಟ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಬೇಕು. ನಿಯಮಾನುಸಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ಆರೋಪಿ ಮಹಮದ್ ಷರೀಫ್‌ನನ್ನು ಜನವರಿ 19ರಂದು ದಕ್ಷಿಣ ಕನ್ನಡದಲ್ಲಿ ಬಂಧಿಸಲಾಗಿತ್ತು. ಅಬುಧಾಬಿ ರಾಜಮನೆತನದ ಸದಸ್ಯ ಎಂದು ಹೇಳಿಕೊಂಡು ದೆಹಲಿಯ ಪಂಚತಾರಾ ಹೋಟೆಲ್‌ ʼಲೀಲಾʼದಲ್ಲಿ ಬಿಲ್‌ ಪಾವತಿಸದೆಯೇ ಮೂರು ತಿಂಗಳ ಕಾಲ ತಂಗಿದ್ದ ಆರೋಪ ಆತನ ಮೇಲಿದೆ.

ಆತನನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲು ಅನುವಾಗುವಂತೆ ನ್ಯಾಯಾಲಯ ಪೊಲೀಸರಿಗೆ ನಾಲ್ಕು ದಿನಗಳ ಟ್ರಾನ್ಸಿಟ್‌ ರಿಮಾಂಡ್‌ ಅಧಿಕಾರ ನೀಡಿದೆ.

ಷರೀಫ್ ಹೋಟೆಲ್‌ನಿಂದ ಬೆಳ್ಳಿ ಮತಿತರ ವಸ್ತುಗಳನ್ನು ಕದ್ದಿದ್ದು ₹ 24 ಲಕ್ಷ ಮೊತ್ತದ ಬಾಕಿ ಪಾವತಿಸಬೇಕಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ವರದಿಗಳ ಪ್ರಕಾರ, ಆರೋಪಿಯು ನಕಲಿ ಬ್ಯುಸಿನೆಸ್ ಕಾರ್ಡ್ ಬಳಸಿ ಹೋಟೆಲ್‌ನಲ್ಲಿ ಉಳಿದುಕೊಂಡು ತಾನು ಅರಬ್‌ ಸಂಸ್ಥಾನದ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದ.

ಹೋಟೆಲ್ ಸಿಬ್ಬಂದಿ ನೀಡಿದ ದೂರಿನ ನಂತರ ದೆಹಲಿಯ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಷರೀಫ್ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಐಪಿಸಿ ಸೆಕ್ಷನ್ 419 (ಸೋಗು ಹಾಕುವ ಮೂಲಕ ವಂಚನೆ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ದೋಚಲು ಯತ್ನ) ಮತ್ತು 380 (ವಾಸದ ಮನೆಯಲ್ಲಿ ಕಳ್ಳತನ) ಆರೋಪಗಳನ್ನು ಹೊರಿಸಲಾಗಿದೆ.

ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಸರ್ಕಾರವನ್ನು ಪ್ರತಿನಿಧಿಸಿದ್ದರು. ಷರೀಫ್ ಪರ ವಕೀಲರಾದ ಸಮರ್ ಖಾನ್, ಅಭಿಷೇಕ್ ಬಕ್ಷಿ, ಪ್ರಶಾಂತ್ ಸಿಂಗ್, ಪ್ರಫುಲ್ ಸಿನ್ಹಾ, ಸೌದ್ ಖಾನ್ ಹಾಗೂ ಶುಭಾಂಗ್ ಶರ್ಮಾ ವಾದ ಮಂಡಿಸಿದ್ದರು.

Related Stories

No stories found.
Kannada Bar & Bench
kannada.barandbench.com