ಕೊಲೆ ಪ್ರಕರಣಗಳಲ್ಲಿ ಮೃತರು, ಗಾಯಾಳುಗಳ ರಕ್ತ ಮಾದರಿ ಸಂಗ್ರಹ ಕಡ್ಡಾಯ: ಡಿಜಿ, ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್‌ ಸೂಚನೆ

“ಪ್ರಕರಣದ ಸಂಬಂಧ ವಿಚಾರಣಾಧೀನ ನ್ಯಾಯಾಲಯಗಳಿಗೆ ಸಾಕ್ಷ್ಯಾಧಾರಗಳೊಂದಿಗೆ ಅಪರಾಧ ಘಟನೆಗಳಲ್ಲಿ ಮೃತರಾದವರು ಇಲ್ಲವೇ ಗಾಯಗೊಂಡವರ ರಕ್ತದ ಗುಂಪುಗಳ ಮಾದರಿಗಳನ್ನು ಕಡ್ಡಾಯವಾಗಿ ಸಂಗ್ರಹಿಸಿ ಸಲ್ಲಿಸಬೇಕು” ಎಂದು ನಿರ್ದೇಶಿಸಿರುವ ನ್ಯಾಯಾಲಯ.
Justices R Devadas & B. Muralidhar Pai
Justices R Devadas & B. Muralidhar Pai
Published on

ಕೊಲೆ ಆರೋಪದ ಪ್ರಕರಣಗಳಲ್ಲಿ ಮೃತರು ಅಥವಾ ಗಾಯಗೊಂಡವರ ರಕ್ತದ ಮಾದರಿಗಳನ್ನು ಕಡ್ಡಾಯವಾಗಿ ಸಂಗ್ರಹಿಸುವುದಕ್ಕೆ ಸಂಬಂಧಿಸಿದಂತೆ ತನಿಖಾಧಿಗಾರಿಗಳಿಗೆ ಅಗತ್ಯ ಸೂಚನೆ ನೀಡುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷರು (ಡಿಜಿ-ಐಜಿಪಿ) ಹಾಗೂ ಪ್ರಾಸಿಕ್ಯೂಷನ್‌ ಇಲಾಖೆಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ನಿರ್ದೇಶಿಸಿದೆ.

ಪತ್ನಿ ಕೊಲೆ ಮಾಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಭೀಮಪ್ಪ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಆರ್‌ ದೇವದಾಸ್‌ ಮತ್ತು ಬಿ ಮುರಳೀಧರ ಪೈ ಅವರ ವಿಭಾಗೀಯ ಪೀಠ ತಿರಸ್ಕರಿಸಿದೆ.

“ಪ್ರಕರಣದ ಸಂಬಂಧ ವಿಚಾರಣಾಧೀನ ನ್ಯಾಯಾಲಯಗಳಿಗೆ ಸಾಕ್ಷ್ಯಾಧಾರಗಳೊಂದಿಗೆ ಅಪರಾಧ ಘಟನೆಗಳಲ್ಲಿ ಮೃತರಾದವರು ಇಲ್ಲವೇ ಗಾಯಗೊಂಡವರ ರಕ್ತದ ಗುಂಪುಗಳ ಮಾದರಿಗಳನ್ನು ಕಡ್ಡಾಯವಾಗಿ ಸಂಗ್ರಹಿಸಿ ಸಲ್ಲಿಸಬೇಕು” ಎಂದು ನಿರ್ದೇಶಿಸಿದೆ.

“ತನಿಖಾಧಿಕಾರಿಯು ಕೃತ್ಯ ನಡೆದ ಸ್ಥಳದಲ್ಲಿ ರಕ್ತದ ಕಲೆಗಳುಳ್ಳ ವಸ್ತುಗಳು ಮತ್ತು ಮೃತರು ಮತ್ತು ಆರೋಪಿಗಳಿಂದ ರಕ್ತದ ಕಲೆಗಳುಳ್ಳ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.  ಆದರೆ, ಮೃತರ ರಕ್ತದ ಗುಂಪು ಸಂಗ್ರಹಿಸದೆ ಲೋಪ ಎಸಗಿದ್ದಾರೆ” ಎಂದು ಪೀಠ ಹೇಳಿದೆ.

“ತನಿಖಾಧಿಕಾರಿಗಳು ಸಲ್ಲಿಸಿರುವ ತನಿಖಾ ವರದಿಯಲ್ಲಿ ರಕ್ತದ ಗುಂಪು ʼಒʼ ಎಂಬುದಾಗಿ ತಿಳಿಸಿದ್ದಾರೆ. ಆದರೆ, ಆ ರಕ್ತ ಮೃತರದ್ದೇ ಎಂಬುದನ್ನು ದೃಢೀಕರಿಸಲು ಯಾವುದೇ ಸಾಕ್ಷ್ಯಾಧಾರ ಒದಗಿಸಿಲ್ಲ. ತನಿಖೆ ಸಂದರ್ಭದಲ್ಲಿ ರಕ್ತಸಿಕ್ತ ಮಣ್ಣು, ಬಟ್ಟೆ ಮತ್ತು ಆರೋಪ ಪಟ್ಟಿಗೆ ಅಗತ್ಯವಿರುವ ಇತರೆ ವಸ್ತುಗಳನ್ನು ಸಂಗ್ರಹಿಸುವ ಉದ್ದೇಶವೇ ಸಾಂದರ್ಭಿಕ ಸಾಕ್ಷ್ಯಗಳನ್ನು ಸೇರಿಸುವುದಾಗಿದೆ. ಇದರಂದಲೇ ಆರೋಪಿಯ ವಿರುದ್ಧದ ಅಪರಾಧವನ್ನು ದೃಢೀಕರಿಸುವುದಕ್ಕೆ ಅವಕಾಶವಾಗಲಿದೆ” ಎಂದು ನ್ಯಾಯಾಲಯ ಹೇಳಿದೆ.

“ತನಿಖಾಧಿಕಾರಿಯು ಮೃತರ ಅಥವಾ ಗಾಯಗೊಂಡವರ ರಕ್ತದ ಗುಂಪು ವರದಿ ಪಡೆಯಲು ವಿಫಲವಾದಲ್ಲಿ ರಕ್ತಸಿಕ್ತ ವಸ್ತುಗಳನ್ನು ಸಂಗ್ರಹಿಸುವ ಉದ್ದೇಶವೇ ವಿಫಲವಾಗಲಿದೆ. ತನಿಖಾ ಸಂಸ್ಥೆ ಆಗಾಗ್ಗೆ ಇಂಥ ತಪ್ಪುಗಳನ್ನು ಮಾಡುತ್ತಿವೆ ಎಂಬುದು ಅರಿವಿಗೆ ಬಂದಿದೆ. ಹೀಗಾಗಿ, ಕೊಲೆ ಪ್ರಕರಣಗಳಲ್ಲಿ ವಿಚಾರಣಾಧೀನ ನ್ಯಾಯಾಲಯದ ಮುಂದೆ ರಕ್ತದ ಗುಂಪು ವರದಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು” ಎಂದು ಪೀಠ ನಿರ್ದೇಶಿಸಿದೆ.

“ಈ ಸಂಬಂಧ ಅಗತ್ಯ ಸೂಚನೆಗಳನ್ನು ನೀಡುವ ಸಲುವಾಗಿ ಆದೇಶದ ಪ್ರತಿಯನ್ನು ಡಿಜಿ ಮತ್ತು ಐಜಿ ಕಚೇರಿ ಮತ್ತು ಪ್ರಾಸಿಕ್ಯೂಷನ್‌ ಇಲಾಖೆ ನಿರ್ದೇಶಕರಿಗೆ ತಲುಪಿಸಬೇಕು. ಅಲ್ಲದೆ, ಮೃತರ ಮಕ್ಕಳಿಗೆ ಸೂಕ್ತ ಪರಿಹಾರವನ್ನು ಒದಗಿಸಲು ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ರವಾನಿಸಬೇಕು” ಎಂದು ಪೀಠ ಆದೇಶಿಸಿದೆ.

“ತನ್ನ ತಾಯಿ ಕೊಲೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಮಗಳು ನೀಡಿರುವ ಸಾಕ್ಷ್ಯವನ್ನು ಪ್ರತ್ಯಕ್ಷದರ್ಶಿಯಲ್ಲ ಎಂಬುದಾಗಿ ತಿಳಿಸಿ ತಿರಸ್ಕರಿಸುವುದಕ್ಕೆ ಅವಕಾಶವಿಲ್ಲ. ಅರ್ಜಿದಾರ ಆರೋಪಿ ಹಲ್ಲೆ ನಡೆಸಿರುವ ಕೊಡಲಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂಬುದಾಗಿ ನೆರೆಹೊರೆಯರು ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಈ ಅಂಶಗಳ ಕುರಿತು ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯದಲ್ಲಿ ಆಕ್ಷೇಪ ವ್ಯಕ್ತಪಡಿಸಿಲ್ಲ” ಎಂದು ತಿಳಿಸಿರುವ ಪೀಠವು ಆರೋಪಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಎತ್ತಿಹಿಡಿದಿದ್ದು, ಮೇಲ್ಮನವಿ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ: ಗದಗ ಜಿಲ್ಲೆಯ ನರೇಗಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ ಮೇಲ್ಮನವಿದಾರ ರೈಲ್ವೆ ಪೋರ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದರು. ದಶಕದ ಹಿಂದೆ ಅವರಿಗೆ ವಿವಾಹವಾಗಿತ್ತು. ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಶಂಕೆ ಆರೋಪದಲ್ಲಿ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು.  2019ರ ಜನವರಿ 6ರಂದು ಪತ್ನಿಯೊಂದಿಗೆ ಗಲಾಟೆ ನಡೆದು, ಆಕೆಯ ಕುತ್ತಿಗೆ ಮತ್ತು ಎಡ ಭಾಗದ ಕೆನ್ನೆಗೆ ಕೊಡಲಿಯಿಂದ ಹೊಡೆದು ಕೊಂದು ಹಾಕಿದ್ದರು.

ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಪಟ್ಟಿಯಲ್ಲಿರುವ ಸಾಕ್ಷ್ಯಾಧಾರಗಳ ಆಧಾರದಲ್ಲಿ ವಿಚಾರಣೆ ನಡೆಸಿದ್ದ ವಿಚಾರಣಾಧೀನ ನ್ಯಾಯಾಲಯ 2021ರ ಡಿಸೆಂಬರ್‌ 30ರಂದು ಭೀಮಪ್ಪನಿಗೆ ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ, ಪತ್ನಿಯ ಮೇಲೆ ಕ್ರೌರ್ಯ ನಡೆಸಿದ ಆರೋಪದಲ್ಲಿ ಎರಡು ವರ್ಷಗಳ ಶಿಕ್ಷೆ ಮತ್ತು ಐದು ಸಾವಿರ ರೂಪಾಯಿ ದಂಡ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಭೀಮಪ್ಪ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Attachment
PDF
Bhimappa Vs State of Karnataka
Preview
Kannada Bar & Bench
kannada.barandbench.com