ಕಡ್ಡಾಯ ಪ್ಯಾನಿಕ್‌ ಬಟನ್‌: ಶೇ.100ರಷ್ಟು ದಕ್ಷತೆ ನಿರೀಕ್ಷಿಸಲಾಗದು ಎಂದ ಹೈಕೋರ್ಟ್‌; ಪಿಐಎಲ್‌ ವಿಲೇವಾರಿ

ಮೊಬೈಲ್‌ ಸೆಟ್‌ನಲ್ಲಿ ಆತಂಕದ ಕರೆಗುಂಡಿ (ಪ್ಯಾನಿಕ್‌ ಬಟನ್‌) ಕಡ್ಡಾಯಗೊಳಿಸದೇ ನಿಯಮಗಳಲ್ಲಿ ಬದಲಾವಣೆ ಮಾಡುವಂತೆ ಅರ್ಜಿದಾರರು ಕೋರಿದ್ದರು.
Karnataka High Court
Karnataka High Court
Published on

ಜನರು ಅಪಾಯ ಅಥವಾ ಸಹಾಯ ಬೇಡುವ ಸಂದರ್ಭದಲ್ಲಿ ನೆರವಾಗಲು ರಾಜ್ಯ ಸರ್ಕಾರವು ಜಾರಿಗೊಳಿಸಿರುವ ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ (ಇಆರ್‌ಎಸ್‌ಎಸ್‌) ಮಂಗಳವಾರ ಕರ್ನಾಟಕ ಹೈಕೋರ್ಟ್‌ ಮೆಚ್ಚುಗೆ ಸೂಚಿಸಿದೆ.

ಬೆಂಗಳೂರಿನ ಎನ್‌ ಟಿ ಅರುಣ್‌ಕುಮಾರ್‌ ಎಂಬುವರು ರಾಷ್ಟ್ರೀಯ ತುರ್ತು ಸಂಖ್ಯೆ 112ರ ಆಕಸ್ಮಿಕ ದುರ್ಬಳಕೆ ಅಥವಾ ಇತರೆ ತುರ್ತು ಸ್ಪಂದನಾ ಸೌಲಭ್ಯ ಸಂಖ್ಯೆಗಳನ್ನು ಕೆಲವು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಳ್ಳುವುದನ್ನು ಆಕ್ಷೇಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಲೇವಾರಿ ಮಾಡಿತು.

2016ರಲ್ಲಿ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಎಲ್ಲಾ ಮೊಬೈಲ್‌ಗಳಲ್ಲಿ ಪ್ಯಾನಿಕ್‌ ಬಟನ್‌ (ಆತಂಕದ ಕರೆಗುಂಡಿ) ಕಡ್ಡಾಯಗೊಳಿಸಿದೆ. ಕುತೂಹಲದಿಂದ ಮಕ್ಕಳು ತುರ್ತು ಸ್ಪಂದನ ಸಹಾಯ ವ್ಯವಸ್ಥೆಯನ್ನು ಒತ್ತಿದರೆ ನೈಜ ಸಮಸ್ಯೆ ಎದುರಿಸುವ ಇತರೆ ಮಂದಿ ಮಾಡುವ ಕರೆಗಳಿಗೆ ಅದು ಪ್ರತಿಕ್ರಿಯಿಸದಿರುವ ಸಾಧ್ಯತೆ ಇದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

Karnataka HC Chief Justice P B Varale and Justice Ashok S Kinagi
Karnataka HC Chief Justice P B Varale and Justice Ashok S Kinagi

ಅನಿರೀಕ್ಷಿತ ಘಟನೆಗಳು ಮತ್ತು ಕಿಡಿಗೇಡಿ ಕೃತ್ಯಗಳನ್ನು ಹತ್ತಿಕ್ಕುವ ಗುರಿ ಮತ್ತು ಉದ್ದೇಶ ಇಟ್ಟುಕೊಂಡು ತುರ್ತು ಸ್ಪಂದನ ಸಹಾಯ ವ್ಯವಸ್ಥೆ ಅಳವಡಿಸಲಾಗಿದೆ. ಆದರೆ, ಅದನ್ನು ದುರ್ಬಳಕೆ ಮಾಡಲಾಗಿದೆ. ಹೀಗಾಗಿ, ಮೊಬೈಲ್‌ ಸೆಟ್‌ನಲ್ಲಿ ಪ್ಯಾನಿಕ್‌ ಬಟನ್‌ ಅನ್ನು ಕಡ್ಡಾಯಗೊಳಿಸದೇ ನಿಯಮಗಳಲ್ಲಿ ಬದಲಾವಣೆ ಮಾಡುವಂತೆ ಅರ್ಜಿದಾರರು ಕೋರಿದ್ದರು.

ದಾಖಲೆಗಳನ್ನು ಪರಿಶೀಲಿಸಿದ ಪೀಠವು “ರಾಜ್ಯ ಸರ್ಕಾರವು ಅರ್ಜಿಯನ್ನು ವಿರುದ್ಧ ಎಂದು ಪರಿಗಣಿಸದೇ ಅದಕ್ಕೆ ಅಫಿಡವಿಟ್‌ ಮೂಲಕ ಸಕಾರತ್ಮವಾಗಿ ಸ್ಪಂದಿಸುವುದರ ಜೊತೆಗೆ ಕೃತ್ಯದಲ್ಲಿ ಅದನ್ನು ಸಾಬೀತುಪಡಿಸಿದೆ. ಹೀಗಾಗಿ, ರಾಜ್ಯ ಸರ್ಕಾರದ ಪ್ರತಿಕ್ರಿಯೆ ಮೆಚ್ಚುಗೆಗೆ ಅರ್ಹವಾಗಿದೆ. ಕಮಾಂಡ್‌ ಕೇಂದ್ರಗಳಲ್ಲಿ ಹೇಗೆಲ್ಲಾ ಕರ್ತವ್ಯ ನಿರ್ವಹಿಸಲಾಗುತ್ತಿದೆ ಎಂಬುದನ್ನು ವೀಕ್ಷಿಸಲು ದಾವೆದಾರರಾದ ಪಾರ್ಟಿ ಇನ್‌ ಪರ್ಸನ್‌ ಅವರನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ಆಹ್ವಾನಿಸಿದ್ದಾರೆ.  ಹಿರಿಯ ಅಧಿಕಾರಿಗಳ ಈ ನಡೆಯೂ ಖಂಡಿತವಾಗಿಯೂ ಜನಸ್ನೇಹಿ ಮತ್ತು ಸ್ವಾಗತಾರ್ಹ” ಎಂದು ಪೀಠ ಹೇಳಿದೆ.

“ಒಮ್ಮೆ ವ್ಯವಸ್ಥೆ (ಸಿಸ್ಟಂ) ಅಳವಡಿಸಿ, ಅದು ಕಾರ್ಯನಿರ್ವಹಿಸುವಂತೆ ಮಾಡಿದ ಬಳಿಕ ಅದರಲ್ಲಿ ಶೇ. 100ರಷ್ಟು ದಕ್ಷತೆ ನಿರೀಕ್ಷಿಸಲಾಗದು. ಅದು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಅಂಥ ಸಂದರ್ಭದಲ್ಲಿ ವ್ಯವಸ್ಥೆ ನಿರ್ವಹಣೆ ಮಾಡುವಂಥವರು ಅದನ್ನು ಅಪ್‌ಡೇಟ್‌ ಮಾಡಬೇಕು. ಇವುಗಳು ತೀರ ತಾಂತ್ರಿಕ ವ್ಯವಸ್ಥೆಗಳಾಗಿದ್ದು, ಅವುಗಳಲ್ಲಿ ಕೆಲಸ ಮಾಡುವವರು ತಜ್ಞರಾಗಿರುತ್ತಾರೆ. ಸಿಸ್ಟಂ ಅನ್ನು ಹೇಗೆ ಅಳವಡಿಸಬೇಕು, ಅದು ಹೇಗೆ ಕರ್ತವ್ಯ ನಿರ್ವಹಿಸಬೇಕು, ಅವುಗಳನ್ನು ಅಳವಡಿಸುವಾಗ/ಕಾರ್ಯನಿರ್ವಹಿಸುವಂತೆ ಮಾಡುವಾಗ ಯಾವೆಲ್ಲಾ ಕ್ರಮಕೈಗೊಳ್ಳಬೇಕು ಎಂಬುದನ್ನು ಅದರಲ್ಲಿ ತಜ್ಞತೆ ಹೊಂದಿರುವವರಿಗೆ ಬಿಡಬೇಕು. ಹೀಗಾಗಿ, ಇಂಥ ತಾಂತ್ರಿಕ ವಿಚಾರಗಳಲ್ಲಿ ನ್ಯಾಯಾಲಯವು ತಜ್ಞತೆ ಹೊಂದಿದೆ ಎಂದು ಹೇಳಲಾಗದು” ಎಂದು ಪೀಠವು ಸರ್ಕಾರದ ಆಕ್ಷೇಪಣೆ ಮತ್ತು ಅರ್ಜಿದಾರರು ಕಮಾಂಡ್‌ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸಲ್ಲಿಸಿರುವ ಪ್ರತಿಕ್ರಿಯೆಯನ್ನು ವಿಮರ್ಶಿಸಿದ ಬಳಿಕ ಮೇಲಿನ ವಿಚಾರಗಳನ್ನು ಆದೇಶದಲ್ಲಿ ದಾಖಲಿಸಿದೆ.

“ಸಮಸ್ಯೆಗಳು ಎದುರಾದರೆ ಅವುಗಳನ್ನು ಬಗೆಹರಿಸುವ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ತಜ್ಞರು ಕ್ರಮಕೈಗೊಳ್ಳಲಿದ್ದಾರೆ. ಹೀಗಾಗಿ, ಸಿಸ್ಟಂ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ನಿರ್ದೇಶನ ನೀಡಲು ಸಕಾರಣವಿಲ್ಲ” ಎಂದು ಪೀಠ ಹೇಳಿದೆ.

“ತುರ್ತು ಸ್ಪಂದನಾ ಇಆರ್‌ಎಸ್‌ಎಸ್‌ ಸಂಖ್ಯೆಯಾದ 112 ಅನ್ನು ಆಗಾಗ್ಗೆ ಪರಿಶೀಲಿಸಿ, ಅತಿಹೆಚ್ಚು ಹೊರೆಯಾಗದಂತೆ ಅದನ್ನು ಸಮರ್ಥಗೊಳಿಸಲಾಗುವುದು. ಇಆರ್‌ಎಸ್‌ಎಸ್‌ ವ್ಯವಸ್ಥೆಯನ್ನು ಸಬಲಗೊಳಿಸಲು ಪ್ರತಿವಾದಿಗಳು ನಿರಂತರವಾಗಿ ಪ್ರಯತ್ನಿಸಲಿದ್ದಾರೆ. ಕರೆಗಳ ದಟ್ಟಣೆಯನ್ನು ನಿಯಂತ್ರಿಸಲು ಲೈನ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಈಗ ಏಕಕಾಲಕ್ಕೆ 180 ಕರೆ ಸ್ವೀಕರಿಸುವಷ್ಟರ ಮಟ್ಟಿಗೆ ಸನ್ನದ್ಧಗೊಳಿಸಲಾಗಿದೆ. ಇದಾಗ್ಯೂ, ಪ್ರಾಂಕಸ್ಟರ್ಸ್‌ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು” ಎಂದು ಹೇಳಲಾಗಿದೆ.

“ತೊಂದರೆಯಲ್ಲಿರುವವರಿಗೆ ಇಆರ್‌ಎಸ್‌ಎಸ್‌ ಮೊಬೈಲ್‌ ಫೋನ್‌ ಅಪ್ಲಿಕೇಶನ್‌ ಆದ ಸುರಕ್ಷಾ ಇದೆ. ಎಸ್‌ಒಎಸ್‌ ಸಂಪೂರ್ಣವಾಗಿ ಸಮಗ್ರವಾದ ವೈಯಕ್ತಿಕ ಸುರಕ್ಷಾ ಆಯ್ಕೆಯಾಗಿದೆ. ಇದು ಸ್ಮಾರ್ಟ್‌ ಫೋನ್‌ ಅನ್ನು ವೈಯಕ್ತಿಕ ಸುರಕ್ಷತಾ ಸಾಧನವನ್ನಾಗಿ ಮಾಡಲಿದ್ದು, ಇದು ತುರ್ತಿನ ಸಂದರ್ಭದಲ್ಲಿ ಇಆರ್‌ಎಸ್‌ಎಸ್‌ಗೆ ಕರೆ ಮಾಡುತ್ತದೆ. ಈ ಅಪ್ಲಿಕೇಶನ್‌ ಮೊದಲಿಗೆ 10 ಸೆಕೆಂಡ್‌ಗಳ ವಿಡಿಯೊವನ್ನು ದಾಖಲಿಸಿಕೊಳ್ಳುತ್ತದೆ. ಅಲ್ಲದೇ, ಸ್ನೇಹಿತರು ಮತ್ತು ಸಂಬಂಧಿಕರಿಗೆ ರವಾನಿಸುವ ಮೂಲಕ ಜಿಪಿಎಸ್‌ ಮೂಲಕ ನಿಗಾ ಇಡುತ್ತದೆ. ವಿಶೇಷ ಚೇತನರಾದ ಕಿವುಡ ಮತ್ತು ಮೂಗರನ್ನು ಪೊಲೀಸ್‌ ನಿಯಂತ್ರಣ ಕೊಠಡಿಗೆ ಸಂಪರ್ಕಿಸಲು ಸುರಕ್ಷಾ ಅಪ್ಲಿಕೇಶನ್‌ ಪರಿಣಾಮಕಾರಿ ಸಾಧನವಾಗಿದೆ” ಎಂದು ಪೀಠ ಹೇಳಿದೆ. ಸಾರ್ವಜನಿಕರಿಗೆ ವಿಸ್ತೃತ ನೆಲೆಯಲ್ಲಿ ಜಾಗೃತಿ ಮೂಡಿಸಲು ಹೆಚ್ಚುವರಿಯಾಗಿ ಕ್ರಮಕೈಗೊಳ್ಳಲು ಅರ್ಜಿದಾರರಿಗೆ ಪೀಠವು ಸಲಹೆ ನೀಡಿ, ಅರ್ಜಿ ಇತ್ಯರ್ಥಪಡಿಸಿದೆ.

Kannada Bar & Bench
kannada.barandbench.com