ರೆಸ್ಟರಂಟ್‌ಗಳು ಕಡ್ಡಾಯವಾಗಿ ಸೇವಾ ಶುಲ್ಕ ಕೇಳಿದರೆ ಅದನ್ನು ಸರ್ಕಾರವೇ ವಿಧಿಸಿದಂತೆ ಭಾಸವಾಗುತ್ತದೆ: ದೆಹಲಿ ಹೈಕೋರ್ಟ್

ಆಹಾರ ಬಿಲ್‌ಗಳಲ್ಲಿ ರೆಸ್ಟರಂಟ್‌ಗಳು ಕಡ್ಡಾಯವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ ಎಂದು ನೀಡಿದ ತೀರ್ಪಿನಲ್ಲಿ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
Delhi High Court
Delhi High Court
Published on

ತೆರಿಗೆ ಶುಲ್ಕ ವಿಧಿಸುವ ಅಧಿಕಾರ ಪ್ರಭುತ್ವಕ್ಕೆ  ಸೇರಿರುವ ಕಾರ್ಯವಾಗಿರುವುದರಿಂದ ಆಹಾರ ಬಿಲ್‌ಗಳಲ್ಲಿ ಕಡ್ಡಾಯ ಸೇವಾ ಶುಲ್ಕ ಕೇಳುವ ರೆಸ್ಟರಂಟ್‌ಗಳು ಶುಲ್ಕವನ್ನು ಸರ್ಕಾರವೇ ವಿಧಿಸುತ್ತಿದೆ ಎಂದು ಗ್ರಾಹಕರನ್ನು ತಪ್ಪುದಾರಿಗೆಳೆಯುತ್ತವೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಆಹಾರ ಬಿಲ್‌ಗಳಲ್ಲಿ ರೆಸ್ಟರಂಟ್‌ಗಳು ಕಡ್ಡಾಯವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ ಎಂದು ನೀಡಿದ ತೀರ್ಪಿನಲ್ಲಿ ನ್ಯಾಯಮೂರ್ತಿ ಪ್ರತಿಭಾ ಸಿಂಗ್ ಈ ಅಭಿಪ್ರಾಯ ವ್ಯಕ್ತಪಡಿಸಿದರು .

ಆ ಮೂಲಕ, ಹೋಟೆಲ್‌ಗಳು ಮತ್ತು ರೆಸ್ಟರಂಟ್‌ಗಳು ಆಹಾರ ಬಿಲ್‌ಗಳಿಗೆ ಸೇವಾ ಶುಲ್ಕವನ್ನು ಸ್ವಯಂಚಾಲಿತವಾಗಿ ಅಥವಾ ಪೂರ್ವನಿಯೋಜಿತವಾಗಿ ಸೇರಿಸಬಾರದು ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಹೊರಡಿಸಿದ ಮಾರ್ಗಸೂಚಿಗಳನ್ನು ನ್ಯಾಯಾಲಯ ಎತ್ತಿಹಿಡಿದಿದೆ.

ಆಹಾರ ಬಿಲ್‌ಗಳ ಜೊತೆಗೆ ಸೇವಾ ಶುಲ್ಕವನ್ನು (ಸಾಮಾನ್ಯವಾಗಿ ಶೇ. 5-20) ಬಲವಂತವಾಗಿ ಸಂಗ್ರಹಿಸುವ ರೆಸ್ಟರಂಟ್‌ಗಳ ವಿರುದ್ಧ ಹಲವು  ಗ್ರಾಹಕರು ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ದೂರುಗಳನ್ನು ಅನುಸರಿಸಿ, ಸಿಸಿಪಿಎ ಜುಲೈ 2022 ರಲ್ಲಿ ಈ ಮಾರ್ಗಸೂಚಿ ಹೊರಡಿಸಿತ್ತು.

ಮಾರ್ಗಸೂಚಿಗಳನ್ನು ರೆಸ್ಟರಂಟ್‌ಗಳ ಒಕ್ಕೂಟಗಳಾದ ನ್ಯಾಷನಲ್ ರೆಸ್ಟರಂಟ್‌ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಮತ್ತು ಫೆಡರೇಶನ್ ಆಫ್ ಹೋಟೆಲ್ ಅಂಡ್ ರೆಸ್ಟರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್‌ಎಚ್‌ಆರ್‌ಎಐ) ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು

ಈ ಪದ್ಧತಿಯು 80 ವರ್ಷಗಳಷ್ಟು ಹಳೆಯದಾದ ಕೈಗಾರಿಕಾ ರೂಢಿಯಾಗಿದ್ದು ಕಾರ್ಮಿಕ ಒಪ್ಪಂದಗಳ ಭಾಗವಾಗಿದೆ ಎಂದು ವಾದಿಸಿದವು. ಆದರೆ, ಸೇವಾ ಶುಲ್ಕಗಳು ಸಿಬ್ಬಂದಿಗೆ ನೇರವಾಗಿ ಅನುಕೂಲ ಉಂಟು ಮಾಡುತ್ತವೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ನ್ಯಾಯಾಲಯ ತಿಳಿಸಿತು. 

ತೀರ್ಪಿನ ಪ್ರಮುಖಾಂಶಗಳು

  • ಸೇವಾ ಶುಲ್ಕವನ್ನು ಗ್ರಾಹಕ ಸ್ವಯಂಪ್ರೇರಿತವಾಗಿ ನೀಡಬಹುದಷ್ಟೇ ಅದನ್ನು ಕಡ್ಡಾಯವಾಗಿ ವಿಧಿಸುವಂತಿಲ್ಲ.

  •  ಸಿಸಿಪಿಎಗೆ ಮಾರ್ಗಸೂಚಿ ನೀಡುವ ಅಧಿಕಾರ ಇದೆ. ರೆಸ್ಟರಂಟ್‌ಗಳು ಅವುಗಳನ್ನು ಪಾಲಿಸಬೇಕು ಉಲ್ಲಂಘಿಸಿದರೆ ಕ್ರಮ ನಿಶ್ಚಿತ.

  • ಮಾರ್ಗಸೂಚಿಗಳು ಗ್ರಾಹಕರ ಹಿತಾಸಕ್ತಿ ಕಾಪಾಡುವುದರಿಂದ ಮತ್ತು ಕಾನೂನಿಗೆ ಅನುಗುಣವಾಗಿರುವುದರಿಂದ ಸಂವಿಧಾನದ 19(1)(g) ವಿಧಿಯಂತ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿಲ್ಲ.

  • ದಾರಿತಪ್ಪಿಸುವಂತಹ ಹೆಸರುಗಳನ್ನು ಬಳಸುವಂತಿಲ್ಲ. ಹಾಗೆ ಮಾಡುವುದು ವಂಚನೆ. ಸೇವಾ ಶುಲ್ಕ ಎಂಬ ಪದ ಸರ್ಕಾರವೇ ಶುಲ್ಕ ವಿಧಿಸುವಂತೆ ಭಾಸವಾಗುವುದರಿಂದ ಸ್ವಯಂಪ್ರೇರಿತ ಟಿಪ್‌, 'ಸ್ವಯಂಪ್ರೇರಿತ ಕೊಡುಗೆ' ಅಥವಾ 'ಸಿಬ್ಬಂದಿ ಕಲ್ಯಾಣ ನಿಧಿ' ಎನ್ನುವ ಅರ್ಥದಲ್ಲಿ ಬಳಸಬೇಕು.

  • ಮಾರ್ಗಸೂಚಿಗಳು ಗ್ರಾಹಕರ ಹಿತಾಸಕ್ತಿಗಳನ್ನು ಪೂರೈಸುವುದರಿಂದ ಮತ್ತು ಕಾನೂನಿಗೆ ಅನುಗುಣವಾಗಿರುವುದರಿಂದ ಆರ್ಟಿಕಲ್ 19(1)(g) ಅನ್ನು ಉಲ್ಲಂಘಿಸುವುದಿಲ್ಲ.

  • ಸೇವಾ ಶುಲ್ಕ  ಕಾರ್ಮಿಕ ಒಪ್ಪಂದಗಳ ಭಾಗವಾಗಿದೆ ಎಂಬ ಹಕ್ಕುಗಳು ಆಧಾರರಹಿತ ಮತ್ತು ತಿರಸ್ಕರಿಸಲಾಗಿದೆ.

  • ಬಿಲ್‌ಗಳಿಗೆ ತನ್ನಿಂತಾನೇ ಸೇವಾ ಶುಲ್ಕ ಸೇರಿಸುವಂತಿಲ್ಲ. ಪಾವತಿ ಐಚ್ಛಿಕ ಎಂದು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು.

  • ಗ್ರಾಹಕರು ರೆಸ್ಟರಂಟಿಗೆ ಪ್ರವೇಶಿಸುವ ಮೂಲಕ ಸೇವಾ ಶುಲ್ಕ ಒಪ್ಪುತ್ತಾರೆ ಎನ್ನುವುದು ಅನ್ಯಾಯದ ಒಪ್ಪಂದದ ಸ್ಥಿತಿ.

  • ಸೇವಾ ಶುಲ್ಕ ಸಂಗ್ರಹ ಕಾನೂನಿಗೆ ವಿರುದ್ಧವಾಗಿರುವುದರಿಂದ ಸೇವಾ ಶುಲ್ಕ ಪಾವತಿ ಒಪ್ಪಂದಕ್ಕೆ ಒತ್ತಾಯಿಸುವಂತಿಲ್ಲ.

  • ಗ್ರಾಹಕರು ಸ್ವಯಂಪ್ರೇರಣೆಯಿಂದ ಟಿಪ್ ನೀಡಬಹುದು, ಆದರೆ ಅದನ್ನು ಪೂರ್ವನಿಯೋಜಿತವಾಗಿ ಬಿಲ್‌ಗೆ ಸೇರಿಸಬಾರದು ಮತ್ತು ಅದನ್ನು ಅವರ ವಿವೇಚನೆಗೆ ಬಿಡಬೇಕು.

ಅಂತೆಯೇ ಗ್ರಾಹಕ ಕಲ್ಯಾಣಕ್ಕಾಗಿ ಸಿಸಿಪಿಎಗೆ ಪಾವತಿಸಬೇಕಾದ ತಲಾ ₹1 ಲಕ್ಷ ದಂಡದೊಂದಿಗೆ ರೆಸ್ಟರಂಟ್‌ ಸಂಘಗಳು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಜಾಗೊಳಿಸಲಾಯಿತು.

Kannada Bar & Bench
kannada.barandbench.com