ಯುವ ವೈದ್ಯರಿಗೆ ಕಡ್ಡಾಯ ಗ್ರಾಮೀಣ ಸೇವೆ ಪ್ರಶ್ನೆ: ಕೇಂದ್ರ, ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌

ಕಾಯಿದೆಯ ಹೊರತಾಗಿ, ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಎಲ್ಲಾ ಮೂಲ ದಾಖಲೆಗಳನ್ನು ತಡೆಹಿಡಿಯಲು ಕಾಲೇಜುಗಳಿಗೆ ನಿರ್ದೇಶನ ನೀಡಿರುವ ಅಧಿಸೂಚನೆಯ ಸಿಂಧುತ್ವವನ್ನು ಕೂಡ ಅರ್ಜಿದಾರರು ಪ್ರಶ್ನಿಸಿದ್ದಾರೆ.
Justice R Devdas, Karnataka High Court
Justice R Devdas, Karnataka High Court
Published on

ವೈದ್ಯಕೀಯ ಶಿಕ್ಷಣವನ್ನು ಪೂರೈಸಿದವರು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು ಎಂಬ ಷರತ್ತನ್ನು ಒಳಗೊಂಡಿರುವ ʼ2012ರ ಕರ್ನಾಟಕದಲ್ಲಿ ವೈದ್ಯಕೀಯ ಕೋರ್ಸ್‌ ಪೂರೈಸಿರುವವರ ಕಡ್ಡಾಯ ಸೇವಾ ಕಾಯಿದೆ (ಕಡ್ಡಾಯ ಕಾಯಿದೆ) ಸಿಂಧುತ್ವ ಪ್ರಶ್ನಿಸಿ ವೈದ್ಯಕೀಯ ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನೋಟಿಸ್‌ ಜಾರಿಗೊಳಿಸಿದೆ (ಡಾ. ಶರಣ್ಯಾ ಮೋಹನ್‌ ವರ್ಸಸ್‌ ಭಾರತ ಸರ್ಕಾರ).

ಎಂಬಿಬಿಎಸ್‌ ಅಂತಿಮ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿರುವ 44 ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಆರ್‌ ದೇವದಾಸ್‌ ನೇತೃತ್ವದ ಏಕಸದಸ್ಯ ಪೀಠ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಕಾಯಿದೆಯ ಸಿಂಧುತ್ವದ ಜೊತೆಗೆ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಅಸಲಿ ದಾಖಲಾತಿಗಳನ್ನು ತಡೆಹಿಡಿಯುವಂತೆ ಫೆಬ್ರುವರಿ 15ರಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಹೊರಡಿಸಿರುವ ಅಧಿಸೂಚನೆಯ ಸಿಂಧುತ್ವವನ್ನೂ ಪ್ರಶ್ನಿಸಲಾಗಿದೆ.

ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುವ ಸಂಬಂಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು/ಸರ್ಕಾರಿ ಆಸ್ಪತ್ರೆಗಳಿಗೆ ಯುವ ವೈದ್ಯರನ್ನು ನಿಯೋಜಿಸುವುದಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರು/ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಕೌನ್ಸೆಲಿಂಗ್‌ಗೆ ಆಹ್ವಾನಿಸಿಲ್ಲ ಎಂದು ಸರ್ಕಾರಿ ವಕೀಲರು ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾರೆ. ವಿದ್ಯಾರ್ಥಿಗಳ ಅಂಕ ಪಟ್ಟಿ ನೀಡುವುದಕ್ಕೆ ನಿರ್ದೇಶನ ನೀಡಬಹುದು ಎಂದು ಅವರು ಇದೇ ವೇಳೆ ತಿಳಿಸಿದರು.

ಈ ಸಂಬಂಧ ಅಗತ್ಯ ಆದೇಶ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ. ಡಾ. ಶರಣ್ಯಾ ಮೋಹನ್‌ 43 ವಿದ್ಯಾರ್ಥಿಗಳು ವಕೀಲರಾದ ಮನಿಕ್‌ ಬಿ ಟಿ ಅವರ ಮೂಲಕ ಕಡ್ಡಾಯ ಸೇವಾ ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ.

2019ರ ಆಗಸ್ಟ್‌ನಲ್ಲಿ ಕಾಯಿದೆಯ ಸಿಂಧುತ್ವವನ್ನು ಹೈಕೋರ್ಟ್‌ ಎತ್ತಿ ಹಿಡಿದಿದ್ದರೂ 2019ರ ಸೆಪ್ಟೆಂಬರ್‌ ಬಳಿಕ ಕೇಂದ್ರ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಕಾಯಿದೆ 2019ರ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಕಡ್ಡಾಯ ಗ್ರಾಮೀಣ ಸೇವೆ ಮುಂದುವರೆಸುವ ಕಾನೂನು ಜಾರಿಗೊಳಿಸಬಾರದು ಎಂದು ಅರ್ಜಿದಾರರು ವಾದಿಸಿದ್ದಾರೆ.

"ಎನ್‌ಎಂಸಿ ಕಾಯಿದೆಯ ಸೆಕ್ಷನ್‌ 14ರಲ್ಲಿ ದೇಶಾದ್ಯಂತ ವೈದ್ಯಕೀಯ ಕೋರ್ಸ್‌ಗಳಿಗೆ ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆಯ (ನೀಟ್‌) ಮೂಲಕ ಸೀಟು ಹಂಚಿಕೆ ಮಾಡುವ ವಿಶೇಷ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಹೀಗಾಗಿ, ವೈದ್ಯಕೀಯ ಕೋರ್ಸ್‌ಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆ ನಡೆಸಲಾಗದು" ಎಂದಿದೆ.

ಹಲವು ರಾಜ್ಯಗಳಲ್ಲಿ ವೈದ್ಯಕೀಯ ಕೋರ್ಸ್‌ ಮುಗಿಸಿದವರು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು ಎಂಬ ಕಾನೂನು ಜಾರಿಗೊಳಿಸದಿರುವುದರಿಂದ ಏಕೀಕೃತ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಲಾಗದು. ಈ ಕುರಿತು ಆದೇಶ ಹೊರಡಿಸುವ ಅಧಿಕಾರ ಎನ್‌ಎಂಸಿಗೆ ಮಾತ್ರ ಇದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಕಾಯಿದೆಯ ಹೊರತಾಗಿ, ತಮ್ಮ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಎಲ್ಲಾ ಮೂಲ ದಾಖಲೆಗಳನ್ನು ತಡೆಹಿಡಿಯಲು ಕಾಲೇಜುಗಳಿಗೆ ನಿರ್ದೇಶನ ನೀಡಿರುವ ಫೆಬ್ರವರಿ 15ರ ಅಧಿಸೂಚನೆಯ ಸಿಂಧುತ್ವವನ್ನು ಮನವಿಯಲ್ಲಿ ಪ್ರಶ್ನಿಸಲಾಗಿದೆ.

Also Read
ಪ್ರಮಾಣಪತ್ರ ನೀಡುವಾಗ ವೈದ್ಯರು ಜಾಗರೂಕರಾಗಿರಬೇಕು, ವೈದ್ಯಕೀಯ ಪದಗಳನ್ನು ಸರಳವಾಗಿ ವಿವರಿಸಬೇಕು ಎಂದ ದೆಹಲಿ ಹೈಕೋರ್ಟ್

ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ ಹಾಗೂ ಜಂಟಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಮೂಲ ದಾಖಲೆಗಳು ಅತ್ಯಗತ್ಯ. ದಾಖಲೆಗಳನ್ನು ಒದಗಿಸಲು ನಿರಾಕರಿಸುವುದು ಕಾನೂನಿಗೆ ವಿರುದ್ಧವಾಗಿದ್ದು, ಉನ್ನತ ಶಿಕ್ಷಣ ಹಕ್ಕು ನಿರಾಕರಿಸಿದಂತೆ ಎಂದು ಮನವಿದಾರರು ಹೇಳಿದ್ದಾರೆ. ಈ ಆಧಾರದಲ್ಲಿ ಕಡ್ಡಾಯ ಸೇವಾ ಕಾಯಿದೆ ಮತ್ತು ಫೆಬ್ರವರಿ 15ರ ಅಧಿಸೂಚನೆಯನ್ನು ವಜಾಗೊಳಿಸುವಂತೆ ಅರ್ಜಿದಾರರು ಕೋರಿದ್ದಾರೆ.

ಇಷ್ಟು ಮಾತ್ರವಲ್ಲದೇ, ಬಾಂಡ್‌ ಕಾರ್ಯಗತಗೊಳಿಸುವ ಮೂಲಕ ಎಂಬಿಬಿಎಸ್‌ ಕೋರ್ಸ್‌ಗೆ ಪ್ರವೇಶ ಪಡೆದಿರುವವರಿಗೆ ಸಂಬಂಧಿಸಿದ ಕರ್ನಾಟಕ ಸರ್ಕಾರಿ ಸೀಟುಗಳ ಅಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಧಿಕಾರಾತೀತವಾದ ವೃತ್ತಿಪರ ಶೈಕ್ಷಣಿಕ ನಿಯಮಗಳು 2006ರ ನಿಯಮ 11, ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳು (ಪ್ರವೇಶ ಮತ್ತು ಶುಲ್ಕ ನಿರ್ಧಾರ ನಿಯಂತ್ರಣ) ಕಾಯಿದೆ 2006 ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯಿದೆ 2019 ಅನ್ನು ಪ್ರಶ್ನಿಸಲಾಗಿದೆ.

Kannada Bar & Bench
kannada.barandbench.com